ಬುಧವಾರ, ಏಪ್ರಿಲ್ 14, 2021
24 °C
ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ರಾಹುಲ್‌, ಮಯಂಕ್‌, ಮನೀಷ್‌ಗೆ ಸ್ಥಾನ: ಧೋನಿ ಅಲಭ್ಯ: ತಂಡಕ್ಕೆ ಮರಳಿದ ಧವನ್‌

ಮೂವರು ಕನ್ನಡಿಗರಿಗೆ ಕೆರಿಬಿಯನ್‌ ‘ಟಿಕೆಟ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ (‍ಪಿಟಿಐ): ಕರ್ನಾಟಕದ ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ ಮತ್ತು ಮಯಂಕ್‌ ಅಗರವಾಲ್‌ ಅವರು ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಎಂ.ಎಸ್‌.ಕೆ.ಪ್ರಸಾದ್‌ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ಭಾನುವಾರ ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ತಂಡಗಳನ್ನು ಪ್ರಕಟಿಸಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ ಮಯಂಕ್‌ಗೆ ಟೆಸ್ಟ್‌ ತಂಡದಲ್ಲಿ ಅವಕಾಶ ಸಿಕ್ಕಿದೆ. ಮನೀಷ್‌ ಏಕದಿನ ಮತ್ತು ಟ್ವೆಂಟಿ–20 ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ರಾಹುಲ್‌ಗೆ ಮೂರು ಮಾದರಿಗಳಲ್ಲೂ ಅವಕಾಶ ಲಭ್ಯವಾಗಿದೆ.

ಬಲಗೈ ಬ್ಯಾಟ್ಸ್‌ಮನ್‌ ರಾಹುಲ್‌, ವಿಶ್ವಕಪ್‌ನಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದರು. ಭಾರತ ‘ಎ’ ತಂಡದ ನಾಯಕರಾಗಿರುವ ಮನೀಷ್‌, ವೆಸ್ಟ್‌ ಇಂಡೀಸ್‌ ‘ಎ’ ಎದುರಿನ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ.

ವಿರಾಟ್‌ ಕೊಹ್ಲಿ ಅವರು ಮೂರು ಮಾದರಿಗಳಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ. 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್‌ ನಡೆಯಲಿದೆ. ಇದಕ್ಕೆ ಈಗಿನಿಂದಲೇ ತಂಡವನ್ನು ಬಲಪಡಿಸುವ ಉದ್ದೇಶದಿಂದ ಆಯ್ಕೆ ಸಮಿತಿಯು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿದೆ.

ಸಹೋದರರಾದ ರಾಹುಲ್‌ ಚಾಹರ್‌ ಮತ್ತು ದೀಪಕ್‌ ಚಾಹರ್‌ ಅವರು ಟ್ವೆಂಟಿ–20 ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ರಾಜಸ್ಥಾನದ ಲೆಗ್‌ಸ್ಪಿನ್ನರ್‌ ರಾಹುಲ್‌ ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರು ಐಪಿಎಲ್ ಮತ್ತು ದೇಶಿ ಟೂರ್ನಿಗಳಲ್ಲಿ ಮಿಂಚಿದ್ದರು.

ಅನುಭವಿಗಳಾದ ಅಜಿಂಕ್ಯ ರಹಾನೆ, ವೃದ್ಧಿಮಾನ್‌ ಸಹಾ, ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌ ಅವರು ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ. ವಿಕೆಟ್‌ ಕೀಪರ್‌ ಸಹಾ, 2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್‌ ಆಡಿದ್ದರು.

ಶಿಖರ್‌ ಧವನ್‌ ಕೂಡಾ ತಂಡಕ್ಕೆ ವಾಪಸ್ಸಾಗಿದ್ದಾರೆ. ವಿಶ್ವಕಪ್‌ ವೇಳೆ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. ಇದರಿಂದ ಪೂರ್ಣವಾಗಿ ಗುಣಮುಖರಾಗಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳದ ಕಾರಣ ಪೃಥ್ವಿ ಶಾಗೆ ತಂಡದಲ್ಲಿ ಅವಕಾಶ ನೀಡಿಲ್ಲ.

ತಂಡಗಳು ಇಂತಿವೆ: ಟ್ವೆಂಟಿ–20: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಕೃಣಾಲ್‌ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಾಹರ್‌, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹಮದ್‌, ದೀಪಕ್‌ ಚಾಹರ್‌ ಮತ್ತು ನವದೀಪ್‌ ಸೈನಿ.

ಏಕದಿನ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಕೇದಾರ್‌ ಜಾಧವ್‌, ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹಮದ್‌ ಮತ್ತು ನವದೀಪ್‌ ಸೈನಿ.

ಟೆಸ್ಟ್‌: ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ಮಯಂಕ್‌ ಅಗರವಾಲ್‌, ಕೆ.ಎಲ್‌.ರಾಹುಲ್‌, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರೋಹಿತ್‌ ಶರ್ಮಾ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ವೃದ್ಧಿಮಾನ್‌ ಸಹಾ (ವಿಕೆಟ್‌ ಕೀಪರ್‌), ಆರ್‌.ಅಶ್ವಿನ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಇಶಾಂತ್ ಶರ್ಮಾ, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ ಮತ್ತು ಉಮೇಶ್‌ ಯಾದವ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು