ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜೇಯ ಓಟ ಮುಂದುವರಿಸುವ ಹಂಬಲ

ಭಾರತ ತಂಡ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆ
Last Updated 24 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ದುಬೈ: ಪಾಕಿಸ್ತಾನ ವಿರುದ್ಧ ಏಕಪಕ್ಷೀಯ ಜಯ ಗಳಿಸಿ ನಿರಾಳವಾಗಿರುವ ಭಾರತ ತಂಡ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ತನ್ನ ಅಂತಿಮ ಪಂದ್ಯದಲ್ಲಿ ಮಂಗಳವಾರ ಅಫ್ಗಾನಿಸ್ತಾನವನ್ನು ಎದುರಿಸಲಿದೆ.

ಗುಂಪು ಹಂತದ ಮೊದಲ ಪಂದ್ಯದಲ್ಲಿ ಹಾಂಕಾಂಗ್ ಎದುರು ಪ್ರಯಾಸದ ಗೆಲುವು ಸಾಧಿಸಿದ ಭಾರತ ನಂತರ ಉತ್ತಮ ಸಾಮರ್ಥ್ಯ ತೋರಿದೆ. ಬಾಂಗ್ಲಾದೇಶ ಮತ್ತು ಬದ್ಧ ವೈರಿ ಪಾಕಿಸ್ತಾನವನ್ನು ಸುಲಭವಾಗಿ ಮಣಿಸಿದೆ. ಹೀಗಾಗಿ ತಂಡ ಈಗ ಆತ್ಮವಿಶ್ವಾಸದಲ್ಲಿದೆ.

ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಕೆ.ಎಲ್‌.ರಾಹುಲ್ ಅಥವಾ ಮನೀಷ್ ಪಾಂಡೆಗೆ ಅವಕಾಶ ನೀಡುವ ಸಾಧ್ಯತೆ ಇದೆ.

ವೇಗಿಗಳು ಮತ್ತು ಸ್ಪಿನ್ನರ್‌ಗಳು ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗುತ್ತಿದ್ದು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪೈಕಿ ಅಂಬಟಿ ರಾಯುಡು ಕೂಡ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಹೀಗಾಗಿ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಬೆವರು ಸುರಿಸುವ ಅಗತ್ಯ ಕಂಡುಬರಲಿಲ್ಲ.

ಬೌಲರ್‌ಗಳ ಮೇಲೆ ವಿಶ್ವಾಸ: ಬೌಲರ್‌ಗಳ ಮೇಲೆ ಭಾರತ ತಂಡದ ನಾಯಕ ಈಗ ಪೂರ್ಣ ವಿಶ್ವಾಸ ಹೊಂದಿದ್ದಾರೆ. ದುಬೈನ ನಿಧಾನಗತಿಯ ಪಿಚ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಭಾರತದ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಸ್ಪಿನ್ ಜೋಡಿ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್ ಯಾದವ್‌ ಟೂರ್ನಿಯುದ್ದಕ್ಕೂ ಗಮನಾರ್ಹ ದಾಳಿ ಸಂಘಟಿಸಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ದೀಪಕ್ ಚಾಹರ್‌, ಸಿದ್ಧಾರ್ಥ್ ಕೌಲ್‌ ಮತ್ತು ಖಲೀಲ್ ಅಹಮ್ಮದ್ ಅವರ ಪೈಕಿ ಇಬ್ಬರಿಗೆ ಅಂತಿಮ 11ರಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ಅಚ್ಚರಿಯ ಫಲಿತಾಂಶ ನೀಡುವ ತಂಡ ಎನಿಸಿಕೊಂಡಿರುವ ಅಪ್ಗಾನಿಸ್ತಾನವು ಸೂಪರ್ ಫೋರ್‌ ಹಂತದಲ್ಲಿ ಈಗಾಗಲೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಸೋತು ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಭಾನುವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾದೇಶದ 249 ರನ್‌ಗಳ ಮೊತ್ತವನ್ನು ದಾಟಲು ಅಫ್ಗಾನಿಸ್ತಾನಕ್ಕೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT