ಮಂಗಳವಾರ, ಫೆಬ್ರವರಿ 18, 2020
17 °C
ಕೊನೆಯಲ್ಲಿ ಕಮಾಲ್‌ ಮಾಡಿದ ರಾಹುಲ್

ಸುಲಭ ಚೇಸಿಂಗ್ ಲೆಕ್ಕಾಚಾರದಲ್ಲಿದ್ದ ಆಸಿಸ್‌ಗೆ ಬೃಹತ್ ಮೊತ್ತದ ಆಘಾತ ನೀಡಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್‌: ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಭಾರತ, ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಬೃಹತ್ ಸವಾಲು ನೀಡಿದೆ. ಟಾಸ್‌ ಗೆದ್ದರೂ ಸುಲಭ ಗೆಲುವಿನ ಲೆಕ್ಕಾಚಾರದಲ್ಲಿ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದ ಕಾಂಗರೂ ಪಡೆಗೆ ಆಘಾತ ಎದುರಾಗಿದೆ.

ಬ್ಯಾಟಿಂಗ್ ಆರಂಭಿಸಿದ ವಿರಾಟ್‌ ಕೊಹ್ಲಿ ಪಡೆಗೆ ಆರಂಭಿಕ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 13.3 ಓವರ್‌ಗಳಲ್ಲಿ 81 ರನ್ ಕಲೆಹಾಕಿತು. ಉತ್ತಮವಾಗಿ ಆಡುತ್ತಿದ್ದ ರೋಹಿತ್‌ 42 ರನ್‌ ಗಳಿಸಿದ್ದ ವೇಳೆ ಔಟಾದರು.

ಬಳಿಕ ಧವನ್‌ ಜೊತೆಗೂಡಿದ ನಾಯಕ ಕೊಹ್ಲಿ, ಶತಕದ ಜೊತೆಯಾಟವಾಡಿದರು. 90 ಎಸೆತಗಳಲ್ಲಿ 13 ಬೌಂಡರಿ 1 ಸಿಕ್ಸರ್‌ ನೆರವಿನಿಂದ 96 ರನ್‌ ಗಳಿಸಿದ್ದ ಎಡಗೈ ದಾಂಡಿಗ ಶತಕದ ಹೊಸ್ತಿಲಲ್ಲಿ ಕೇನ್‌ ರಿಚರ್ಡ್‌ಸನ್‌ಗೆ ವಿಕೆಟ್‌ ಒಪ್ಪಿಸಿದರು. ಶ್ರೇಯಸ್‌ ಅಯ್ಯರ್‌ ಕೇವಲ 7 ರನ್‌ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು.

78 ರನ್‌ ಗಳಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿಯೂ ಆ್ಯಡಂ ಜಂಪಾ ಬೌಲಿಂಗ್‌ನಲ್ಲಿ ಔಟಾದರು. ನಾಯಕ ಮತ್ತು ಉಪನಾಯಕ ಇಬ್ಬರ ವಿಕೆಟ್‌ ಕಬಳಿಸಿದ ಜಂಪಾ ಒಟ್ಟು ಮೂರು ವಿಕೆಟ್‌ ಪಡೆದು ಮಿಂಚಿದರು.

ಕೊನೆಯಲ್ಲಿ ಕೆ.ಎಲ್‌ ರಾಹುಲ್‌ ಹಾಗೂ ರವೀಂದ್ರ ಜಡೇಜಾ ಬಿರುಸಿನ ಆಟವಾಡಿದ್ದರಿಂದ, ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ ಭಾರತ 340 ರನ್‌ ಕಲೆಹಾಕಲು ಸಾಧ್ಯವಾಯಿತು. ರಾಹುಲ್‌ ಕೇವಲ 52 ಎಸೆತಗಳಲ್ಲಿ 3 ಸಿಕ್ಸರ್‌, 6 ಬೌಂಡರಿ ಸಹಿತ 80 ರನ್‌ ಚಚ್ಚಿದರು. ಜಡೇಜಾ 20 ರನ್‌ ಗಳಿಸಿ ಉತ್ತಮ ಬೆಂಬಲ ನೀಡಿದರು.

ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 255 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಮೊತ್ತ ಬೆನ್ನಟ್ಟಿದ್ದ ಆಸ್ಟ್ರೇಲಿಯಾ, ಅನುಭವಿ ಆರಂಭಿಕರಾದ ಡೇವಿಡ್‌ ವಾರ್ನರ್‌ (128) ಹಾಗೂ ನಾಯಕ ಫಿಂಚ್‌ (110) ಭರ್ಜರಿ ಬ್ಯಾಟಿಂಗ್ ಬಲದಿಂದ ಅಮೋಘ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು