ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ಏಕದಿನ ಪಂದ್ಯ: ‘ತಿರುವು’ ಕೊಟ್ಟ ಟರ್ನರ್

ಶಿಖರ್ ಧವನ್ ಶತಕ; ರೋಹಿತ್ ಆಟ ವ್ಯರ್ಥ: ಪೀಟರ್ ಶತಕ; ಕಮಿನ್ಸ್‌ಗೆ ಐದು ವಿಕೆಟ್
Last Updated 10 ಮಾರ್ಚ್ 2019, 19:50 IST
ಅಕ್ಷರ ಗಾತ್ರ

ಮೊಹಾಲಿ (ಪಂಜಾಬ್): ಆಸ್ಟ್ರೇಲಿಯಾದ ಆ್ಯಷ್ಟನ್ ಟರ್ನರ್ ಭಾನುವಾರ ರಾತ್ರಿ ಮೊಹಾಲಿ ಅಂಗಳದಲ್ಲಿ ಭಾರತ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದ ಫಲಿತಾಂಶಕ್ಕೆ ಮಹತ್ವದ ‘ಟರ್ನ್’ ನೀಡಿದರು. ತಮ್ಮ ತಂಡದ ಪಾಲಿಗೆ ‘ಫಿನಿಷರ್‌’ ಆದ ಅವರು ಜಯದ ಕಾಣಿಕೆ ನೀಡಿದರು.

ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಫ್ಲ್ಯಾಟ್‌ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ನೀಡಿದ್ದ 358 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಪ್ರವಾಸಿ ಬಳಗವು ನಾಲ್ಕು ವಿಕೆಟ್‌ಗಳಿಂದ ಗೆದ್ದಿತು. ಐದು ಪಂದ್ಯಗಳ ಸರಣಿಯಲ್ಲಿ 2–2ರ ಸಮಬಲ ಸಾಧಿಸಿತು. 43 ಎಸೆತಗಳಲ್ಲಿ 84 ರನ್ ಗಳಿಸಿದ ಟರ್ನರ್‌ ಪಂದ್ಯಶ್ರೇಷ್ಠ ಗೌರವ ಪಡೆದರು.

ಮುಂದಿನ ಪಂದ್ಯವು ಬುಧವಾರ ದೆಹಲಿಯಲ್ಲಿ ನಡೆಯಲಿದ್ದು ಕುತೂಹಲ ಕೆರಳಿಸಿದೆ.

ಬೌಲರ್‌ಗಳ ಬಿಗಿಯಿಲ್ಲದ ದಾಳಿ ಯನ್ನು ಪುಡಿಗಟ್ಟಿದ ಆಸ್ಟ್ರೇಲಿಯಾದ ಆ್ಯಷ್ಟನ್ ಟರ್ನರ್ ಭಾರತದ ಕೈಯಿಂದ ಜಯವನ್ನು ಕಸಿದುಕೊಂಡರು.

ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಟರ್ನರ್ ಕ್ರೀಸ್‌ಗೆ ಬಂದಾಗ ಆಸ್ಟ್ರೇಲಿಯಾ ತಂಡವು 36.1 ಓವರ್‌ಗಳಲ್ಲಿ4 ವಿಕೆಟ್‌ಗಳಿಗೆ 229 ರನ್‌ ಗಳಿಸಿತ್ತು. ಇನ್ನೊಂದು ಬದಿಯಲ್ಲಿ ಚೊಚ್ಚಲ ಶತಕ ಗಳಿಸಿದ್ದ ಪೀಟರ್ ಹ್ಯಾಂಡ್ಸ್‌ಕಂಬ್ ಇದ್ದರು. ಬೀಸಾಟದೊಂದಿಗೆ ಖಾತೆ ಆರಂಭಿಸಿದ ಅವರು ಯಾವ ಬೌಲರ್‌ಗೂ ಸೊಪ್ಪು ಹಾಕಲಿಲ್ಲ.

ತಂಡಕ್ಕೆ ಅಸಾಧ್ಯವೆನಿಸಿದ್ದ ಮೊತ್ತವು ಅವರ ಅಬ್ಬದ ಬಿಸಿಗೆ ಮಂಜಿನಂತೆ ಕರಗತೊಡಗಿತು.

42ನೇ ಓವರ್‌ನಲ್ಲಿ ಪೀಟರ್ ಔಟಾದಾಗ ಮತ್ತೆ ಭಾರತದ ಪಾಳ ಯದಲ್ಲಿ ಗೆಲುವಿನ ನಿರೀಕ್ಷೆ ಮೂಡಿತ್ತು. ಆದರೆ, ಅಲೆಕ್ಸ್‌ ಕ್ಯಾರಿಯೊಂದಿಗೆ ಆರನೇ ವಿಕೆಟ್‌ಗೆ 81 ರನ್‌ಗಳನ್ನು ಸೇರಿಸಿದ ಅವರು ಆತಿಥೇಯರ ಬಳಗಕ್ಕೆ ಆಘಾತ ನೀಡಿದರು.

ಡೆತ್ ಓವರ್ ಪರಿಣತ ಜಸ್‌ಪ್ರೀತ್ ಬೂಮ್ರಾ ಯಾರ್ಕರ್‌ಗಳಿಗೂ ಬೌಂಡರಿಗೆರೆಯ ಆಚೆ ಕಳಿಸಿದ ಟರ್ನರ್ ಮಿಂಚಿದರು. ಅವರ ಅಬ್ಬರದ ಆಟದಿಂದಾಗಿ 7.5 ಓವರ್‌ಗಳಲ್ಲಿ 98 ರನ್‌ಗಳು ಹರಿದುಬಂದವು. ಟರ್ನರ್‌ ಐದು ಬೌಂಡರಿ ಮತ್ತು ಆರು ಸಿಕ್ಸರ್‌ ಬಾರಿಸಿ ಅಜೇಯರಾಗುಳಿದರು.

ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರವನ್ನು ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಸಮರ್ಥಿಸಿಕೊಂಡರು. ಇಡೀ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಜೋಡಿಯು ಮೊದಲ ವಿಕೆಟ್‌ಗೆ 193 ರನ್‌ ಸೇರಿಸಿತು. 31 ಓವರ್‌ಗಳನ್ನು ವಿಕೆಟ್ ನಷ್ಟವಿಲ್ಲದಂತೆ ಆಡಿದರು.

ರೋಹಿತ್ ಐದು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಶಿಖರ್ ಧವನ್ ಶತಕ ಹೊಡೆದು ಮಿಂಚಿದರು. ‌

ಆದರೆ ನಂತರ ರಾಹುಲ್, ರಿಷಭ್ ಮತ್ತು ವಿಜಯಶಂಕರ್ ಅವರು ಮಾತ್ರ ಚುರುಕಿನಿಂದ ಆಡಿದರು. ಆದರೆ ಉಳಿದವರು ಹೆಚ್ಚು ರನ್‌ ಗಳಿಸಲಿಲ್ಲ. ಆಸ್ಟ್ರೇಲಿಯಾದ ವೇಗಿ ಪ್ಯಾಟ್‌ ಕಮಿನ್ಸ್‌ ಐದು ವಿಕೆಟ್ ಗಳಿಸಿ ಮಿಂಚಿದರು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಮೊದಲ ಓವರ್‌ನಲ್ಲಿಯೇ ಔಟಾದರು. ಶಾನ್ ಮಾರ್ಷ್ ಕೂಡ ಬೇಗನೇ ಔಟಾದರು.

ಈ ಹಂತದಲ್ಲಿ ಜೊತೆಗೂಡಿದ ಉಸ್ಮಾನ್ ಖ್ವಾಜಾ (91 ರನ್) ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್ (117) 192 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವಿನ ಆಸೆ ಚಿಗುರಿಸಿದರು. ಅದನ್ನು ಟರ್ನರ್‌ ಈಡೇರಿಸಿದರು.

ಯುಡಿಆರ್‌ಎಸ್ ಬಗ್ಗೆ ಕೊಹ್ಲಿ ಅಸಮಾಧಾನ
ಮೊಹಾಲಿ: ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್)ಯಲ್ಲಿ ಸ್ಥಿರತೆ ಇಲ್ಲ. ಅದರಿಂದಾಗಿ ಪ್ರತಿಯೊಂದು ಪಂದ್ಯದಲ್ಲಿಯೂ ಈ ವ್ಯವಸ್ಥೆಯು ಚರ್ಚೆಗೆ ಗ್ರಾಸವಾಗುತ್ತಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಆ್ಯಷ್ಟನ್ ಟರ್ನರ್‌ ಕ್ರೀಸ್‌ಗೆ ಬಂದ ಕೆಲವು ಕ್ಷಣಗಳ ನಂತರ ಔಟಾಗುವ ಅಪಾಯ ಎದುರಿಸಿದ್ದರು. ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ವಿರಾಟ್ ಕೊಹ್ಲಿ ಮನವಿ ಮಾಡಿದ್ದ ಡಿಆರ್‌ಎಸ್‌ ಪರಿಶೀಲನೆಯಲ್ಲಿ ಚೆಂಡು ಟರ್ನರ್ ಬ್ಯಾಟ್ ಅಂಚು ಸವರಿದ್ದು ಸ್ನಿಕೊ ಮೀಟರ್‌ನಲ್ಲಿ ತೋರಿಸುತ್ತಿತ್ತು. ಆದರೂ ನಾಟ್‌ಔಟ್ ನೀಡಲಾಯಿತು. ನಂತರ ಟರ್ನರ್‌ ಅಬ್ಬರದ ಆಟದ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು.

ಪಂದ್ಯದ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ, ‘ಇವತ್ತು ಡಿಆರ್‌ಎಸ್‌ನ ತೀರ್ಪು ನೋಡಿ ಅಚ್ಚರಿಯಾಯಿತು’ ಎಂದರು.

‘ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚಿತ್ತು. ಆದರೆ, ಗಾಳಿಯಲ್ಲಿ ತೇವಾಂಶ ಹೆಚ್ಚಿದ್ದ ಕಾರಣ ಬೌಲರ್‌ಗಳು ಹೆಚ್ಚು ಶ್ರಮ ಪಡಬೇಕಾಯಿತು. ಅದರ ಲಾಭವನ್ನು ಆಸ್ಟ್ರೇಲಿಯಾ ಪಡೆಯಿತು. ಪೀಟರ್ ಹ್ಯಾಂಡ್ಸ್‌ಕಂಬ್ ಮತ್ತು ಟರ್ನರ್ ಉತ್ತಮವಾಗಿ ಆಡಿದರು’ ಎಂದು ವಿರಾಟ್ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT