ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS Test | ಗಿಲ್ ಶತಕ, ಕೊಹ್ಲಿ ಅರ್ಧಶತಕ; ಆಸಿಸ್‌ಗೆ ಭಾರತದ ತಿರುಗೇಟು

Last Updated 11 ಮಾರ್ಚ್ 2023, 16:53 IST
ಅಕ್ಷರ ಗಾತ್ರ

ಅಹಮದಾಬಾದ್: ಚೆಂದದ ಶತಕ ದಾಖಲಿಸಿದ ಶುಭಮನ್ ಗಿಲ್ ಇಲ್ಲಿ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಎದುರಿನ ಪ್ರತಿಹೋರಾಟಕ್ಕೆ ಬಲ ತುಂಬಿದರು.

ಪ್ರವಾಸಿ ಬಳಗವು ಪ್ರಥಮ ಇನಿಂಗ್ಸ್‌ನಲ್ಲಿ ಗಳಿಸಿರುವ 480 ರನ್‌ಗಳಿಗೆ ಉತ್ತರವಾಗಿ ಆಡುತ್ತಿರುವ ಆತಿಥೇಯ ತಂಡವು ಶನಿವಾರ ದಿನದಾಟದ ಮುಕ್ತಾಯಕ್ಕೆ 99 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 289 ರನ್ ಗಳಿಸಿದೆ.

ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ (ಬ್ಯಾಟಿಂಗ್ 59; 128ಎ, 4X5) ಹಾಗೂ ರವೀಂದ್ರ ಜಡೇಜ (16; 54ಎ, 6X1) ಕ್ರೀಸ್‌ನಲ್ಲಿದ್ದಾರೆ. ಜೊತೆಗೆ ಹೋರಾಟವನ್ನು ಜೀವಂತವಾಗಿಟ್ಟಿದ್ದಾರೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿಯಿವೆ.

ಈ ಸರಣಿಯ ಮೊದಲ ಮೂರು ಪಂದ್ಯಗಳೂ ಎರಡೂವರೆ ದಿನಗಳಲ್ಲಿಯೇ ಮುಗಿದಿದ್ದವು. ಅವುಗಳಲ್ಲಿ ಸ್ಪಿನ್ನರ್‌ಗಳು ಪಾರಮ್ಯ ಮೆರೆದಿದ್ದರು. ಆದರೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಮಾತ್ರ ಬ್ಯಾಟರ್‌ಗಳಿಗೂ ನೆರವು ನೀಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾ ಹಾಗೂ ಕ್ಯಾಮರೂನ್ ಗ್ರೀನ್ ಶತಕ ಗಳಿಸಿದ್ದರು. ಇದೀಗ ಭಾರತದ ಆರಂಭಿಕ ಬ್ಯಾಟರ್ ಶುಭಮನ್ (128; 235ಎ, 4X12, 6X1) ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದರು. ಅಲ್ಲದೇ ಒಂದೇ ವರ್ಷದಲ್ಲಿ ಮೂರು ಮಾದರಿಗಳಲ್ಲಿಯೂ ಶತಕ ಗಳಿಸಿದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಟೈಮಿಂಗ್, ರಿವರ್ಸ್ ಸ್ವೀಪ್, ಡ್ರೈವ್ ಮತ್ತು ಕಟ್‌ಗಳ ಮೂಲಕ ರನ್‌ಗಳನ್ನು ಗಳಿಸಿದ ಗಿಲ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಶುಕ್ರವಾರ ದಿನದಾಟದ ಮುಕ್ತಾಯಕ್ಕೆ ನಾಯಕ ರೋಹಿತ್ (17) ಅವರೊಂದಿಗೆ ಕ್ರೀಸ್‌ನಲ್ಲಿದ್ದ 23 ವರ್ಷದ ಶುಭಮನ್ ಗಿಲ್ (18) ಶನಿವಾರ ಬೆಳಿಗ್ಗೆಯ ಅವಧಿಯಲ್ಲಿ ಆತ್ಮವಿಶ್ವಾಸಭರಿತರಾಗಿ ಆಡಿದರು. ರೋಹಿತ್ ಅವರೊಂದಿಗೆ ಮೊದಲ ವಿಕೆಟ್‌ಗೆ74 ರನ್‌ ಸೇರಿಸಿದರು. ಉತ್ತಮ ಲಯದಲ್ಲಿದ್ದ ರೋಹಿತ್ ವಿಕೆಟ್ ಗಳಿಸುವಲ್ಲಿ ಮ್ಯಾಟ್ ಕುನೇಮನ್ ಯಶಸ್ವಿಯಾದರು.

ಗಿಲ್ ಇನಿಂಗ್ಸ್‌ ಕಟ್ಟುವ ಹೊಣೆಯನ್ನು ಹೊತ್ತುಕೊಂಡರು. ಅವರಿಗೆ ಅನುಭವಿ ಚೇತೇಶ್ವರ್ ಪೂಜಾರ ಜೊತೆ ನೀಡಿದರು. ಇವರಿಬ್ಬರ ತಾಳ್ಮೆಯ ಆಟದ ಮುಂದೆ ಆಸ್ಟ್ರೇಲಿಯಾ ಬೌಲರ್‌ಗಳ ತಂತ್ರಗಳು ವಿಫಲವಾದವು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 248 ಎಸೆತಗಳನ್ನು ಆಡಿ 113 ರನ್‌ ಸೇರಿಸಿದರು.

ಗಿಲ್ 90 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಆದರೆ ಪೂಜಾರ ತಮ್ಮ 50 ರನ್ ಪೂರೈಸಲು ಎಂಟು ರನ್‌ಗಳ ಅಗತ್ಯವಿದ್ದಾಗ, ಟಾಡ್ ಮರ್ಫಿ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಮೂರನೇ ವಿಕೆಟ್ ಜೊತೆಯಾಟದಲ್ಲಿ ಶುಭಮನ್ ಅವರು ಕೊಹ್ಲಿಯೊಂದಿಗೆ 58 ರನ್‌ ಸೇರಿಸಿದರು. ಆದರೆ, ಈ ಹಂತದಲ್ಲಿ ರನ್‌ಗಳ ಗಳಿಕೆಗಿಂತ ಎಚ್ಚರಿಕೆಯ ಆಟಕ್ಕೆ ಒತ್ತು ಕೊಟ್ಟರು. ಇಬ್ಬರೂ ವಿಕೆಟ್‌ ಪತನವಾಗುವುದನ್ನು ತಡೆಯುವುದರತ್ತಲೇ ಹೆಚ್ಚು ಗಮನ ನೀಡಿದರು. ರಕ್ಷಣಾತ್ಮಕವಾಗಿ ಆಡಿದರು.

ತಾವು ಎದುರಿಸಿದ 194ನೇ ಶತಕ ಪೂರೈಸಿದರು. ಚಹಾವಿರಾಮದ ನಂತರ ನೇಥನ್ ಲಯನ್ ಬೌಲಿಂಗ್‌ನಲ್ಲಿ ಶುಭಮನ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇದರೊಂದಿಗೆ ಸುಂದರ ಇನಿಂಗ್ಸ್‌ಗೆ ತೆರೆ ಬಿತ್ತು.

15 ತಿಂಗಳ ನಂತರ ಅರ್ಧಶತಕ
ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ರವೀಂದ್ರ ಜಡೇಜ ಜೊತೆಗೆ ವಿರಾಟ್ ಉಪಯುಕ್ತ ಇನಿಂಗ್ಸ್ ಕಟ್ಟಿದರು.

ವಿರಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 15 ತಿಂಗಳುಗಳ ನಂತರ ಅರ್ಧಶತಕ ಗಳಿಸಿದರು. ಹೋದ ವರ್ಷದ ಜನವರಿಯಲ್ಲಿ ಅವರು ಕೇಪ್‌ಟೌನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 79 ರನ್‌ ಗಳಿಸಿದ್ದರು.

ಜಡೇಜ ಹಾಗೂ ಕೊಹ್ಲಿ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 44 ರನ್‌ ಸೇರಿಸಿದ್ದಾರೆ. ಆಸ್ಟ್ರೇಲಿಯಾದ ಬಾಕಿ ಚುಕ್ತಾ ಮಾಡಲು ಇನ್ನೂ 191 ರನ್‌ಗಳ ಅಗತ್ಯವಿದೆ.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 480 (167.2 ಓವರ್‌) ಭಾರತ 3ಕ್ಕೆ 289 (99 ಓವರ್‌)

(ಶುಕ್ರವಾರ 10 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 36)

ರೋಹಿತ್‌ ಸಿ ಲಾಬುಷೇನ್ ಬಿ ಕುನೇಮನ್‌ 35 (58ಎ, 4X3, 6X1), ಶುಭಮನ್‌ ಎಲ್‌ಬಿಡಬ್ಲ್ಯು ಬಿ ಲಯನ್‌ 128 (235ಎ, 4X12, 6X1), ಚೇತೇಶ್ವರ್ ಎಲ್‌ಬಿಡಬ್ಲ್ಯು ಬಿ ಮರ್ಫಿ 42 (121ಎ, 4X3), ವಿರಾಟ್‌ ಬ್ಯಾಟಿಂಗ್‌ 59 (128ಎ, 4X5), ಜಡೇಜ ಬ್ಯಾಟಿಂಗ್‌ 16 (54ಎ, 6X1)

ಇತರೆ: 9 (ಬೈ 4, ಲೆಗ್‌ಬೈ 3, ನೋಬಾಲ್ 2)

ವಿಕೆಟ್ ಪತನ: 1-74 (ರೋಹಿತ್ ಶರ್ಮಾ, 20.6), 2-187 (ಚೇತೇಶ್ವರ್ ಪೂಜಾರ, 61.6), 3-245 (ಶುಭಮನ್ ಗಿಲ್‌, 78.4)

ಬೌಲಿಂಗ್‌: ಮಿಚೆಲ್ ಸ್ಟಾರ್ಕ್‌ 17–2–74–0, ಕ್ಯಾಮರಾನ್ ಗ್ರೀನ್‌ 10–0–45–0, ನೇಥನ್ ಲಯನ್‌ 37–4–75–1, ಮ್ಯಾಥ್ಯು ಕುನೇಮನ್‌ 13–0–43–1, ಟಾಡ್ ಮರ್ಫಿ 22–6–45–1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT