ಶನಿವಾರ, ಜನವರಿ 16, 2021
25 °C

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ: ಭಾರತ ತಂಡಕ್ಕೆ ‘ವಿರಾಟ್‌’ ಬಲವಿಲ್ಲ

ಪ್ರಮೋದ‌ Updated:

ಅಕ್ಷರ ಗಾತ್ರ : | |

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಕ್ರಿಕೆಟ್‌ ಸರಣಿಗಿಂತ ಹೆಚ್ಚಾಗಿ ಮೂರು ಟೆಸ್ಟ್ ‍ಪಂದ್ಯಗಳಿಗೆ ಅಲಭ್ಯರಾಗಲಿರುವ ವಿರಾಟ್‌ ಕೊಹ್ಲಿ ವಿಷಯವೇ ಹೆಚ್ಚು ಚರ್ಚೆಯಾಗುತ್ತಿದೆ.

ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಮಾತ್ರ ಆಡಲಿದ್ದಾರೆ. ಬಳಿಕ ಅವರು ಭಾರತಕ್ಕೆ ಮರಳಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದು, ‘ವಿರಾಟ್‌’ ಬಲವಿಲ್ಲದೇ ಭಾರತವು ಕಾಂಗರೂಗಳ ನಾಡಿನಲ್ಲಿ ಹೇಗೆ ‘ಟೆಸ್ಟ್‌’ ಎದುರಿಸಲಿದೆ ಎನ್ನುವುದು ಅನೇಕ ಚರ್ಚೆಗಳನ್ನು ಹುಟ್ಟುಹಾಕಿದೆ.

ಆಸ್ಟ್ರೇಲಿಯಾ ತಂಡವನ್ನು ಎಲ್ಲಿಯೇ ಆದರೂ ಸೋಲಿಸುವುದು ಕಷ್ಟ. ಈಗ ಆ ತಂಡವನ್ನು ಅವರದ್ದೇ ನೆಲದಲ್ಲಿ ಭಾರತ ಎದುರಿಸಬೇಕಿದೆ. ಆಸ್ಟ್ರೇಲಿಯಾದವರು ಆಕ್ರಮಣಕಾರಿ ಆಟ ಮೈಗೂಡಿಸಿಕೊಂಡಿದ್ದು, ತವರಿನ ಪಿಚ್‌ಗಳ ಮರ್ಮ ಚೆನ್ನಾಗಿಯೇ ಅರಿತಿದ್ದಾರೆ. ಅವರಿಗೆ ಅಷ್ಟೇ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಲು ಕೊಹ್ಲಿ ಸಮರ್ಥ ನಾಯಕ. ಏಕೆಂದರೆ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 2018–19ರಲ್ಲಿ ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸಿ ಟ್ರೋಫಿ ಎತ್ತಿ ಹಿಡಿದಿತ್ತು. ಏಳು ದಶಕಗಳಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿತ್ತು.

ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾದ ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಆಗ ತಂಡದಲ್ಲಿರಲಿಲ್ಲ. ಈ ಬಾರಿ ಇವರು ತಂಡದಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್‌ ಮತ್ತು ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಗಳಲ್ಲಿ ಗೆಲುವು ಪಡೆದು ಶಕ್ತಿ ಹೆಚ್ಚಿಸಿಕೊಂಡಿದೆ. ಇಂಥ ಸವಾಲಿನ ಸಮಯದಲ್ಲಿ ಕೊಹ್ಲಿ ತಂಡದಲ್ಲಿ ಇದ್ದಿದ್ದರೆ ಆಟಗಾರರ ಸ್ಥೈರ್ಯ ಹೆಚ್ಚುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕೆಲ ದಿನಗಳ ಹಿಂದೆಯಷ್ಟೇ ಚುಟುಕು ಕ್ರಿಕೆಟ್‌ ಐಪಿಎಲ್‌ ಆಡಿದ್ದ ಆಟಗಾರರು ಈಗ ಟೆಸ್ಟ್‌ ಮಾದರಿಗೆ ಹೊಂದಿಕೊಳ್ಳಬೇಕಿದೆ.

ಆಸ್ಟ್ರೇಲಿಯಾ ವಿರುದ್ಧ ನಾಯಕರಾಗಿ ಒಂಬತ್ತು ಟೆಸ್ಟ್‌ ಪಂದ್ಯಗಳನ್ನು ಆಡಿರುವ ಕೊಹ್ಲಿ ಮೂರು ಶತಕ ಸೇರಿದಂತೆ ಒಟ್ಟು 777 ರನ್‌ ಹೊಡೆದಿದ್ದಾರೆ. ಭಾರತ ತಂಡ ಮೂರರಲ್ಲಿ ಗೆಲುವು ಪಡೆದು, ಮೂರರಲ್ಲಿ ಸೋತಿದೆ. ಮೂರು ಪಂದ್ಯಗಳು ಡ್ರಾ ಆಗಿವೆ. ಹೀಗಾಗಿ, ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟಿಂಗ್ ಮತ್ತು ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುವ ಚಾಣಾಕ್ಷ ನಾಯಕತ್ವ ಈ ಸರಣಿಗೆ ಅಗತ್ಯವಾಗಿತ್ತು. ‘ಮೂರು ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಆಡದಿರುವುದು ಆಸ್ಟ್ರೇಲಿಯಾಕ್ಕೆ ವರದಾನವಾಗಲಿದೆ.

ಭಾರತಕ್ಕೆ ಕಷ್ಟವಾಗಲಿದೆಯಾದರೂ ಗೆಲುವು ಅಸಾಧ್ಯವೇನಲ್ಲ. ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡ 2017ರಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಈ ಸಲದ ಸರಣಿಯಲ್ಲಿ ಜಯ ಪಡೆಯಲು ನಮ್ಮ ತಂಡವು ಬ್ಯಾಟಿಂಗ್‌ ಕ್ರಮಾಂಕ ಮತ್ತು ನಾಯಕತ್ವ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ’ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್‌ ಹೇಳಿದ್ದಾರೆ.

ದಾಖಲೆಯ ಸನಿಹ
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿರುವ ಕೊಹ್ಲಿ ಪ್ರಮುಖ ಎರಡು ದಾಖಲೆಗಳ ಸಮೀಪ ಇದ್ದಾರೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 14 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಕೊಹ್ಲಿ ನಾಯಕತ್ವದಲ್ಲಿ ಭಾರತ 11ರಲ್ಲಿ ಜಯ ಗಳಿಸಿತ್ತು. ಈ ಸರಣಿಯ ಎಲ್ಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಕೊಹ್ಲಿ ಈ ದಾಖಲೆ ಸರಿಗಟ್ಟಲಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂಬತ್ತು ಮತ್ತು ಕೊಹ್ಲಿ ಎಂಟು ಶತಕಗಳನ್ನು ಗಳಿಸಿದ್ದಾರೆ. ಈ ದಾಖಲೆಯನ್ನೂ ಅಳಿಸಿ ಹಾಕಲು‌ ಕೊಹ್ಲಿಗೆ ಅವಕಾಶವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು