ಮಂಗಳವಾರ, ನವೆಂಬರ್ 19, 2019
22 °C
ಬಾಂಗ್ಲಾಗೆ ಸೋಲುಣಿಸಿದ ರೋಹಿತ್ ಬಳಗ

ಟಿ–20 ಕ್ರಿಕೆಟ್ | ಸೇಡು ತೀರಿಸಿಕೊಂಡ ಭಾರತ: ಸರಣಿಯಲ್ಲಿ 1–1ರ ಸಮಬಲ

Published:
Updated:
Prajavani

ರಾಜ್‌ಕೋಟ್: ಗುರುವಾರ ಇಲ್ಲಿ ಚಂಡ ಮಾರುತವೂ ಬೀಸಲಿಲ್ಲ. ಮಳೆಯೂ ಸುರಿಯಲಿಲ್ಲ.

ಆದರೆ, ಭಾರತ ತಂಡದ ಗೆಲುವಿನ ಸಂಭ್ರಮ ಮಾತ್ರ ಭರಪೂರ ಹರಿಯಿತು. ತಮ್ಮ ವೃತ್ತಿಜೀವನದ 100ನೇ ಟ್ವೆಂಟಿ–20 ಪಂದ್ಯ ಆಡಿದ ರೋಹಿತ್ ಶರ್ಮಾ (85; 43ಎಸೆತ, 6ಬೌಂಡರಿ, 6 ಸಿಕ್ಸರ್) ಅವರ ಮಿಂಚಿನ ವೇಗದ ಬ್ಯಾಟಿಂಗ್‌ ಮುಂದೆ ಬಾಂಗ್ಲಾದ ಬೌಲರ್‌ ಗಳು ಸುಸ್ತಾದರು. ಭಾರತ ತಂಡವು 8 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1–1 ಸಮಬಲವಾಯಿತು.

ದೆಹಲಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವು ಗೆದ್ದಿತ್ತು. ಇಲ್ಲಿ ರೋಹಿತ್ ಬಳಗವು ಮುಯ್ಯಿ ತೀರಿಸಿಕೊಂಡಿತು.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಎರಡನೇ ಚುಟುಕು ಪಂದ್ಯದಲ್ಲಿ ಟಾಸ್ ಗೆದ್ದ ಭಾರತವು ಫೀಲ್ಡಿಂಗ್ ಮಾಡಿಕೊಂಡಿತು. ಬಾಂಗ್ಲಾ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 153 ರನ್ ಗಳಿಸಿತು.

ಫೀಲ್ಡಿಂಗ್ ಲೋಪಗಳ ನಡು ವೆಯೂ ಉತ್ತಮ ಬೌಲಿಂಗ್ ಮಾಡಿದ ಯಜುವೇಂದ್ರ ಚಾಹಲ್ (28ಕ್ಕೆ2) ಅವರ ಬಲದಿಂದ  ಬಾಂಗ್ಲಾದೇಶ ಬಳಗ ವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು.

ರೋಹಿತ್ ಮತ್ತು ಶಿಖರ್ ಧವನ್ (31; 27ಎ, 4ಬೌಂ) ಮೊದಲ ವಿಕೆಟ್ ಜೊತೆಯಾಟದಲ್ಲಿ 118 ರನ್ ಕಲೆಹಾಕಿದರು. ಇದರೊಂದಿಗೆ ಭಾರ ತವು 15.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 154 ರನ್ ಗಳಿಸಿ ಜಯಿಸಿತು.

ಲಿಟನ್–ನೈಮ್‌ ಜೊತೆಯಾಟ: ಬಾಂಗ್ಲಾದ ಆರಂಭಿಕ ಜೋಡಿ ಲಿಟನ್  ದಾಸ್ (29; 21ಎಸೆತ 4ಬೌಂಡರಿ) ಮತ್ತು ಮೊಹಮ್ಮದ್ ನೈಮ್ (36; 31ಎಸೆತ, 5ಬೌಂಡರಿ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 60 ರನ್‌ಗಳನ್ನು ಕಲೆಹಾಕಿದರು. ಕೇವಲ ಏಳು ಓವರ್‌ಗಳಲ್ಲಿ ಈ ರನ್‌ಗಳು ಹರಿದು ಬಂದವು. ಇದರಲ್ಲಿ ಭಾರತ ತಂಡದ ಫೀಲ್ಡರ್‌ಗಳ ಲೋಪಗಳು ಹೆಚ್ಚಿದ್ದವು.

ವಿಕೆಟ್‌ ಕೀಪರ್ ರಿಷಭ್ ಪಂತ್ ಅವರೂ ಚೆಂಡನ್ನು ತಮ್ಮ ಹಿಡಿತಕ್ಕೆ ಪಡೆಯುವಲ್ಲಿ ಹಲವು ಬಾರಿ ಎಡವಿದರು. ಇದರಿಂದಾಗಿ ಬಾಂಗ್ಲಾ ಖಾತೆಗೆ ರನ್‌ಗಳು ಹರಿದುಬಂದವು. ಏಳನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಅವರು ಲಿಟನ್‌ ದಾಸ್ ಕ್ಯಾಚ್‌ ಅನ್ನು ನೆಲಕ್ಕೆ ಹಾಕಿ ಜೀವದಾನ ನೀಡಿದರು.

ಆದರೆ, ಎಂಟನೇ ಓವರ್‌ನಲ್ಲಿ ಚಾಹಲ್ ಎಸೆತದಲ್ಲಿ ಲಿಟನ್ ಬೀಟ್ ಆದರು. ಆಗ ಚೆಂಡನ್ನು ಕ್ಯಾಚ್ ಮಾಡುವಲ್ಲಿ ರಿಷಭ್ ಮತ್ತೊಮ್ಮೆ ವಿಫಲರಾದರು. ಅವರ ಎದೆಗೆ ಬಡಿದ ಚೆಂಡು ಸ್ಟಂಪ್‌ಗಳ ಎದುರು ತುಸು ದೂರದಲ್ಲಿ ಬಿತ್ತು. ಆಗ ದಾಸ್ ಒಂದು ರನ್ ಕದಿಯಲು ಒಡಿದರು. ಈ ಹಂತದಲ್ಲಿ ರಿಷಬ್ ಚುರುಕಾಗಿ ಓಡಿ ಬಂದು ಚೆಂಡನ್ನು ಹಿಡಿದು ಸ್ಟಂಪ್‌ಗೆ ಗುರಿಯಿಟ್ಟು ಎಸೆದರು. ದಾಸ್ ರನ್‌ಔಟ್ ಆಗಿ ಮರಳಿದರು.

ನೈಮ್ ವಿಕೆಟ್‌ ಅನ್ನು ವಾಷಿಂಗ್ಟನ್ ಸುಂದರ್ ಕಬಳಿಸಿದರು.ಮೊದಲ ಪಂದ್ಯದಲ್ಲಿ ಮಿಂಚಿದ್ದ ಬಾಂಗ್ಲಾ ತಂಡದ ಮುಷ್ಫಿಕುರ್ ರಹೀಮ್ ಮತ್ತು ಮಹಮುದುಲ್ಲಾ ವಿಕೆಟ್‌ಗಳನ್ನು ಯಜುವೇಂದ್ರ ಚಾಹಲ್ ಬೇಗನೆ ಕಬ ಳಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಖಲೀಲ್ ಅಹಮದ್ ಮತ್ತು ದೀಪಕ್ ಚಾಹರ್ ಅವರು ತಲಾ ಒಂದು ವಿಕೆಟ್ ಗಳಿಸಿದರು.

ಪ್ರತಿಕ್ರಿಯಿಸಿ (+)