ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ಮೆರೆದಾಟ, ಭಾರತಕ್ಕೆ ಸೋಲು

Last Updated 14 ಜುಲೈ 2022, 19:49 IST
ಅಕ್ಷರ ಗಾತ್ರ

ಲಂಡನ್: ಬ್ಯಾಟಿಂಗ್‌ ಕೈಕೊಟ್ಟರೂ, ಬೌಲರ್‌ಗಳ ಚುರುಕಿನ ದಾಳಿಯ ನೆರವಿನಿಂದ ಇಂಗ್ಲೆಂಡ್‌ ತಂಡ, ಭಾರತದ ಎದುರಿನ ಎರಡನೇ ಏಕದಿನ ಕ್ರಿಕೆಟ್‌ ಪಂದ್ಯವನ್ನು 100 ರನ್‌ಗಳಿಂದ ಗೆದ್ದಿತು.

ಲಾರ್ಡ್ಸ್‌ ಅಂಗಳದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್ ಯಜುವೇಂದ್ರ ಚಾಹಲ್ (47ಕ್ಕೆ4) ಸ್ಪಿನ್‌ ಮೋಡಿಯ ಹೊರತಾಗಿಯೂ 49 ಓವರ್‌ಗಳಲ್ಲಿ 246 ರನ್‌ ಗಳಿಗೆ ಆಲೌಟಾಯಿತು.

ಸಾಧಾರಣ ಗುರಿ ಬೆನ್ನಟ್ಟಿದ ರೋಹಿತ್‌ ಶರ್ಮ ಬಳಗ, ರೀಸ್‌ ಟೋಪ್ಲಿ (24ಕ್ಕೆ 6 ) ಅವರ ದಾಳಿಗೆ ನಲುಗಿ ಆಗಿಂದಾಗ್ಗೆ ವಿಕೆಟ್‌ ಕಳೆದುಕೊಂಡು 38.5 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟಾಯಿತು.

ಮೂರು ಪಂದ್ಯಗಳ ಸರಣಿ 1–1 ರಲ್ಲಿ ಸಮಬಲ ಆಗಿದ್ದು, ಜುಲೈ 17 ರಂದು ನಡೆಯುವ ಅಂತಿಮ ಪಂದ್ಯ ಕೂತೂಹಲ ಮೂಡಿಸಿದೆ.

ಬ್ಯಾಟಿಂಗ್‌ ವೈಫಲ್ಯ: ರೋಹಿತ್‌ ಮತ್ತು ರಿಷಭ್‌ ಪಂತ್ ‘ಸೊನ್ನೆ’ ಸುತ್ತಿದರು. ವಿರಾಟ್‌ ಕೊಹ್ಲಿ (16 ರನ್‌, 25 ಎ) ಮತ್ತೆ ವಿಫಲರಾದರು. ಸೂರ್ಯಕುಮಾರ್‌ ಯಾದವ್ (27 ರನ್‌, 29 ಎ.), ಹಾರ್ದಿಕ್‌ ಪಾಂಡ್ಯ (29 ರನ್‌, 44 ಎ) ಮತ್ತು ರವೀಂದ್ರ ಜಡೇಜ (29 ರನ್‌, 44 ಎಸೆತ) ಉತ್ತಮ ಆರಂಭ ಪಡೆದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಮೋಯಿನ್‌, ವಿಲಿ ಆಸರೆ: ಭಾರತದ ಬೌಲಿಂಗ್ ಪಡೆಯ ಪರಿಣಾಮಕಾರಿ ದಾಳಿಯಿಂದಾಗಿ ಇಂಗ್ಲೆಂಡ್ ತಂಡವು 102 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್‌ (33; 33ಎ) ಮತ್ತು ಮೋಯಿನ್ ಅಲಿ (47; 64ಎ) ಆರನೇ ವಿಕೆಟ್‌ ಜೊತೆಯಾಟದಲ್ಲಿ 62 ರನ್‌ಗಳು ತಂಡಕ್ಕೆ ಚೇತೊಹಾರಿಯಾದವು. ಡೇವಿಡ್ ವಿಲಿ (41 ರನ್) ಕೂಡ ಉಪಯುಕ್ತ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು ಇನ್ನೂರರ ಗಡಿ ದಾಟಿತು.

ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಆದರೆ, ಒಂಬತ್ತನೇ ಓವರ್‌ನಲ್ಲಿ ಜೇಸನ್ ರಾಯ್ ವಿಕೆಟ್ ಕಬಳಿಸಿದ ಹಾರ್ದಿಕ್ ಪಾಂಡ್ಯ ಮೊದಲ ಯಶಸ್ಸು ಪಡೆದರು. ಜೇಸನ್ (23 ರನ್) ಅವರು ಜಾನಿ ಬೆಸ್ಟೊ ಜೊತೆಗೆ ಮೊದಲ ವಿಕೆಟ್‌ಗೆ 41 ರನ್ ಸೇರಿಸಿದರು. 38 ರನ್‌ ಗಳಿಸಿದ್ದ ಜಾನಿ ವಿಕೆಟ್‌ ಅನ್ನು 15ನೇ ಓವರ್‌ನಲ್ಲಿ ಉರುಳಿಸಿದ ಚಾಹಲ್ ತಮ್ಮ ಖಾತೆ ತೆರೆದರು. ಜೋ ರೂಟ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಚಾಹಲ್ ಭಾರತಕ್ಕೆ ಮಹತ್ವದ ಕಾಣಿಕೆ ನೀಡಿದರು.

ನಂತರದ ಓವರ್‌ನಲ್ಲಿ ಶಮಿ ಹಾಕಿದ ಎಸೆತಕ್ಕೆ ನಾಯಕ ಬಟ್ಲರ್ ಕ್ಲೀನ್‌ಬೌಲ್ಡ್‌ ಅದರು. ಆಟಕ್ಕೆ ಕುದುರಿಕೊಳ್ಳುತ್ತಿದ್ದ ಬೆನ್ ಸ್ಟೋಕ್ಸ್‌ ಅವರನ್ನು ಎಲ್‌ಬಿ ಬಲೆಗೆ ಕೆಡವಿದ ಚಾಹಲ್ ಸಂಭ್ರಮಿಸಿದರು. ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ಕೂಡ ಬ್ಯಾಟರ್‌ಗಳ ಮೇಲೆ ಒತ್ತಡ ಹಾಕಿದರು. ಲಿಯಾಮ್ ವಿಕೆಟ್ ಗಳಿಸಿದರು. ಡೇವಿಡ್ ವಿಲಿಗೆ ಅರ್ಧಶತಕ ಗಳಿಸಲು ಬೂಮ್ರಾ ಬಿಡಲಿಲ್ಲ.

ಮೊದಲ ಪಂದ್ಯದಲ್ಲಿ ಆರು ವಿಕೆಟ್ ಗಳಿಸಿದ್ದ ಬೂಮ್ರಾ ಇಲ್ಲಿ ಡೇವಿಡ್ ಸೇರಿದಂತೆ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್ 246 (49 ಓವರ್‌ಗಳಲ್ಲಿ) ಜೇಸನ್ ರಾಯ್ 23, ಜಾನಿ ಬೆಸ್ಟೊ ಬಿ ಚಾಹಲ್ 38, ಬೆನ್ ಸ್ಟೋಕ್ಸ್ 21, ಲಿಯಾಮ್ ಲಿವಿಂಗ್‌ಸ್ಟೋನ್ 33, ಮೋಯಿನ್ ಅಲಿ 47, ಡೇವಿಡ್ ವಿಲಿ 41,ಯಜುವೇಂದ್ರ ಚಾಹಲ್ 47ಕ್ಕೆ 4, ಜಸ್‌ಪ್ರೀತ್ ಬೂಮ್ರಾ 49ಕ್ಕೆ 2, ಮೊಹಮ್ಮದ್‌ ಶಮಿ 48ಕ್ಕೆ 1, ಹಾರ್ದಿಕ್‌ ಪಾಂಡ್ಯ 28ಕ್ಕೆ 2

ಭಾರತ 146 (38.5 ಓವರ್) ವಿರಾಟ್‌ ಕೊಹ್ಲಿ 16, ಸೂರ್ಯಕುಮಾರ್‌ ಯಾದವ್ 27, ಹಾರ್ದಿಕ್‌ ಪಾಂಡ್ಯ 29, ರವೀಂದ್ರ ಜಡೇಜ 29, ಮೊಹಮ್ಮದ್‌ ಶಮಿ 23, ರೀಸ್‌ ಟೋಪ್ಲಿ 24ಕ್ಕೆ 6, ಡೇವಿಡ್‌ ವಿಲಿ 27ಕ್ಕೆ 1

ಫಲಿತಾಂಶ: ಇಂಗ್ಲೆಂಡ್‌ಗೆ 100 ರನ್ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT