ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 4th Test: ರೂಟ್ ಶತಕ; ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್ 302/7

ರಾಂಚಿಯಲ್ಲಿ ನಾಲ್ಕನೇ ಟೆಸ್ಟ್‌: ಆಕಾಶ್‌ ದೀಪ್‌ಗೆ ಮೂರು ವಿಕೆಟ್‌
Published 23 ಫೆಬ್ರುವರಿ 2024, 9:02 IST
Last Updated 23 ಫೆಬ್ರುವರಿ 2024, 9:02 IST
ಅಕ್ಷರ ಗಾತ್ರ

ರಾಂಚಿ: ಇಂಗ್ಲೆಂಡ್‌ನ ಪ್ರಮುಖ ಬ್ಯಾಟರ್ ಜೋ ರೂಟ್ ‘ಬಾಝ್‌ಬಾಲ್‌’ ಆಟವನ್ನು ಬದಿಗಿಟ್ಟು ತಮ್ಮ ಸಹಜ ಆಟಕ್ಕೆ ಮರಳಿದರು. ಈ ಸರಣಿಯಲ್ಲಿ ಸತತವಾಗಿ ವಿಫಲರಾಗಿ ಟೀಕೆಗೆ ಗುರಿಯಾಗಿದ್ದ ಅವರು ತಾವು ಅದಕ್ಕೆ ಮಿಗಿಲಾದ ಆಟಗಾರ ಎಂಬುದನ್ನು ಶುಕ್ರವಾರ ಆರಂಭವಾದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಅಜೇಯ ಶತಕದ ಮೂಲಕ ತೋರಿಸಿಕೊಟ್ಟರು.

ರೂಟ್, ರಾಂಚಿಗೆ ಬಂದಿಳಿಯುವ ಮೊದಲು ಆರು ಇನಿಂಗ್ಸ್‌ಗಳಿಂದ 77 ರನ್ ಗಳಿಸಿದ್ದರು. ಕ್ರಿಕೆಟ್‌ ಇತಿಹಾಸದಲ್ಲೇ ಅಚ್ಚುಕಟ್ಟುತನದ ಆಟಕ್ಕೆ ಹೆಸರಾಗಿದ್ದ ಅವರು ಈ ಸರಣಿಯಲ್ಲಿ ತದ್ವಿರುದ್ಧ ರೀತಿ ವಿಕೆಟ್‌ ಕಳೆದುಕೊಳ್ಳುತ್ತಿದ್ದರು. ‘ಬಾಝ್‌ಬಾಲ್‌ ಬ್ರ್ಯಾಂಡ್’ ಇದಕ್ಕೆ ಕಾರಣ ಎನ್ನಲಾಗುತಿತ್ತು.

ಆದರೆ ನಾಲ್ಕನೇ ಟೆಸ್ಟ್‌ನಲ್ಲಿ ನೈಜ ಆಟ ಪ್ರದರ್ಶಿಸಿದ ಅವರು 226 ಎಸೆತಗಳಲ್ಲಿ 106 ರನ್‌ ಗಳಿಸಿ ಆಟವನ್ನು ಎರಡನೇ ದಿನಕ್ಕೆ ಕಾಯ್ದಿರಿಸಿಕೊಂಡರು. ಕುಸಿತದ ಹಾದಿಯಲ್ಲಿದ್ದ ಇಂಗ್ಲೆಂಡ್ ಚೇತರಿಸಿ 90 ಓವರುಗಳಲ್ಲಿ 7 ವಿಕೆಟ್‌ಗೆ 302 ರನ್‌ಗಳೊಡನೆ ದಿನದಾಟ ಮುಗಿಸಿತು.

ಟಾಸ್‌ ಗೆದ್ದ ಬೆನ್‌ ಸ್ಟೋಕ್ಸ್‌ ಬ್ಯಾಟ್ ಮಾಡಲು ನಿರ್ಧರಿಸಿದರು. ಬೆಳಿಗ್ಗೆ ಬೌಲರ್‌ಗಳು ಮೇಲುಗೈ ಸಾಧಿಸಿದರೂ ತೇವಾಂಶ ಕಡಿಮೆಯಾದ ಬಳಿಕ ಬ್ಯಾಟರ್‌ಗಳು ನಿಟ್ಟುಸಿರಿಟ್ಟರು. ಇಂಗ್ಲೆಂಡ್‌ ಇನಿಂಗ್ಸ್‌ ಬೆಳೆದಷ್ಟೂ, ಈ ಪಿಚ್‌ನಲ್ಲಿ ನಾಲ್ಕನೇ ಇನಿಂಗ್ಸ್ ಆಡಬೇಕಾಗಿರುವ ಭಾರತಕ್ಕೆ ಒತ್ತಡ ಎದುರಾಗಬಹುದು.

ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆಕಾಶ್ ದೀಪ್ ಭೋಜನಕ್ಕೆ ಮೊದಲೇ ಮೊದಲ ಮೂರು ವಿಕೆಟ್‌ಗಳನ್ನು ಪಡೆದು ಸಂಭ್ರಮಿಸಿದರು. ದೀಪ್‌ ಮತ್ತು ಸಿರಾಜ್ ಇಂಗ್ಲೆಂಡ್ ತಂಡವನ್ನು ಕಾಡಿದ್ದರಿಂದ ಬೂಮ್ರಾ ಅನುಪಸ್ಥಿತಿ ಕಾಡಲಿಲ್ಲ.

ತಮ್ಮ ಐದನೇ ಓವರ್‌ನಲ್ಲಿ (ಪಂದ್ಯದ 10ನೇ ಓವರ್) ಬೆನ್ ಡಕೆಟ್‌ ಮತ್ತು ಓಲಿ ಪೋಪ್ ವಿಕೆಟ್‌ ಪಡೆದ ಬಂಗಾಲದ ಬೌಲರ್, ಮರು ಓವರ್‌ನಲ್ಲಿ ಜಾಕ್‌ ಕ್ರಾಲಿ (42, 42 ಎಸೆತ) ಅವರನ್ನು ಬೌಲ್ಡ್‌ ಮಾಡಿದ್ದರು.

ಸ್ಪಿನ್ನರ್‌ಗಳು ದಾಳಿಗಿಳಿಯುತ್ತಿದ್ದಂತೆ ಹೊಡೆಬಡಿಯ ಆಟಕ್ಕಿಳಿದ ಬೇಸ್ಟೊ (38, 35 ಎಸೆತ) ಅವರನ್ನು ಆರ್‌.ಅಶ್ವಿನ್ ಪೆವಿಲಿಯನ್‌ಗಟ್ಟಿದರು. ಸ್ಟೋಕ್ಸ್‌ ಅವರು ಜಡೇಜ ಬೌಲಿಂಗ್‌ನಲ್ಲಿ ಸ್ವಲ್ಪ ಕೆಳಮಟ್ಟದಲ್ಲಿ ಹೊರಳಿದ ಚೆಂಡಿಗೆ ಎಲ್‌ಬಿಡಬ್ಲ್ಯು ಆಗಿ ಬೇಗ ನಿರ್ಗಮಿಸಿದರು. ಆಗ ಇಂಗ್ಲೆಂಡ್ ಮೊತ್ತ 5 ವಿಕೆಟ್‌ಗೆ 112.

ಆದರೆ ಪ್ರವಾಸಿ ತಂಡದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ರೂಟ್‌ ಇನ್ನೊಂದೆಡೆ ಸಂಯಮ ವಹಿಸಿ ಆಡಿದರಲ್ಲದೇ, ಎರಡು ಜೊತೆಯಾಟಗಳ ಮೂಲಕ ತಂಡ ಕುಸಿಯದಂತೆ ನೋಡಿಕೊಂಡರು. ಯಾವುದೇ ಸಾಹಸದ ಹೊಡೆತಗಳಿಗೆ ಹೋಗಲಿಲ್ಲ. ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಪ್ರಯೋಗಗಳಲ್ಲಿ ಎಚ್ಚರಿಕೆ ವಹಿಸಿದರು. ರಿವರ್ಸ್‌ ಸ್ಕೂಪ್‌ಗಳಿಗೆ ಹೋಗಲಿಲ್ಲ. ಮುನ್ನುಗ್ಗಿ ಬಾರಿಸಲು ಯತ್ನಿಸಲಿಲ್ಲ. ಸಾಂಪ್ರದಾಯಿಕ ಶೈಲಿಯಲ್ಲೇ ಆಡಿದರು.

ಆರನೇ ವಿಕೆಟ್‌ಗೆ ಬೆನ್‌ ಫೋಕ್ಸ್‌ ಜೊತೆ 113 ರನ್‌ಗಳು ಬಂದವು. ಪೋಕ್ಸ್ ನಿರ್ಗಮನವೂ 33 ವರ್ಷ ವಯಸ್ಸಿನ ಆಟಗಾರನ ಏಕಾಗ್ರತೆಗೆ ಭಂಗ ತರಲಿಲ್ಲ. ಬ್ಯಾಟರ್‌ಗಿಂತ ಉತ್ತಮ ಆಫ್‌ ಸ್ಪಿನ್ನರ್ ಎಂದು ಮೂಡುತ್ತಿದ್ದ ಭಾವನೆ ಹುಸಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT