ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IND vs SA 1st Test: ವೇಗಿಗಳ ಆರ್ಭಟಕ್ಕೆ ಮಣಿದ ಭಾರತ

ಬರ್ಗರ್, ಮಾರ್ಕೊ ಮಿಂಚಿನ ದಾಳಿ; ವಿರಾಟ್ ದಿಟ್ಟ ಹೋರಾಟ, 3ನೇ ದಿನವೇ ಮುಗಿದ ಪಂದ್ಯ
Published 28 ಡಿಸೆಂಬರ್ 2023, 15:22 IST
Last Updated 28 ಡಿಸೆಂಬರ್ 2023, 15:22 IST
ಅಕ್ಷರ ಗಾತ್ರ

ಸೆಂಚುರಿಯನ್: ಎಡಗೈ ವೇಗದ ಜೋಡಿ ನಾಂದ್ರೆ ಬರ್ಗರ್ ಮತ್ತು ಮಾರ್ಕೊ ಯಾನ್ಸನ್ ಅವರ ದಾಳಿಯ ಮುಂದೆ ಭಾರತದ ಬ್ಯಾಟರ್‌ಗಳು  ಪೆವಿಲಿಯನ್‌ಗೆ ‘ಪಥಸಂಚಲನ’ ನಡೆಸಿದರು. ದಿಟ್ಟ ಬ್ಯಾಟಿಂಗ್‌ನಿಂದ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ ಮಾತ್ರ ನೆನಪಿನಲ್ಲಿ ಉಳಿದರು.

ಆದರೆ ಇಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಬಳಗವು ಇನಿಂಗ್ಸ್ ಮತ್ತು 32 ರನ್‌ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಶರಣಾಯಿತು. ಮೂರನೇ ದಿನವೇ ಪಂದ್ಯ ಮುಕ್ತಾಯವಾಯಿತು. ಡೀನ್ ಎಲ್ಗರ್ (185; 287ಎ, 4X28) ಮತ್ತು ಮಾರ್ಕೊ ಯಾನ್ಸೆನ್ (ಅಜೇಯ 84; 14ಎ, 4X11, 6X1) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಆತಿಥೇಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 108.4 ಓವರ್‌ಗಳಲ್ಲಿ 408 ರನ್ ಗಳಿಸಿತು. ಅದರೊಂದಿಗೆ 163 ರನ್‌ಗಳ ಮುನ್ನಡೆ ಸಾಧಿಸಿತು.

ಇದಕ್ಕುತ್ತರವಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡವು 34.1 ಓವರ್‌ಗಳಲ್ಲಿ 131 ರನ್ ಗಳಿಸಿ ಆಟ ಮುಗಿಸಿತು.

ಪಿಚ್‌ ವೇಗಿಗಳ ಸ್ವರ್ಗದಂತಾಗಿತ್ತು. ಅನಿರೀಕ್ಷಿತ ಬೌನ್ಸ್ ಮತ್ತು ಮೊನಚಾದ ಸ್ವಿಂಗ್‌ಗಳನ್ನು ಎದುರಿಸುವಲ್ಲಿ ಭಾರತದ ಬ್ಯಾಟರ್‌ಗಳು ವಿಫಲರಾದರು. ಬರ್ಗರ್ (33ಕ್ಕೆ4) ಮತ್ತು ಮಾರ್ಕೊ (36ಕ್ಕೆ3) ಅವರು ಬ್ಯಾಟರ್‌ಗಳಿಗೆ ಕಾಲೂರಲು ಬಿಡಲಿಲ್ಲ. ಈ ಪಂದ್ಯದಲ್ಲಿ ಬರ್ಗರ್ ಒಟ್ಟು ಏಳು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. 

ಅವರಿಬ್ಬರಿಗೂ ಕಗಿಸೊ ರಬಾಡ (32ಕ್ಕೆ2) ಕೂಡ ಉತ್ತಮ ಜೊತೆ ನೀಡಿದರು.ಇದರಿಂದಾಗಿ ಕೆಂಪು ಚೆಂಡಿನ ಹೊಳಪು ಮಾಸುವ ಮುನ್ನವೇ ಪ್ರವಾಸಿ ಬಳಗದಲ್ಲಿ ನಿರಾಶೆಯ ಮಬ್ಬುಗತ್ತಲು ಆವರಿಸಿತು. ರೋಹಿತ್ ನಾಯಕತ್ವದಲ್ಲಿ ಇದೇ ಮೊದಲ ಬಾರಿ ತಂಡವು ಇನಿಂಗ್ಸ್ ಸೋಲು ಅನುಭವಿಸಿತು. ಆತಿಥೇಯ ಬೌಲರ್‌ಗಳು ವಿಜೃಂಭಿಸಿದ ಪಿಚ್‌ನಲ್ಲಿ ಭಾರತದ ಬೌಲರ್‌ಗಳು ಮಾರ್ಕೊ ಅವರನ್ನು ನಿಯಂತ್ರಿಸಲು ಪರದಾಡಿದರು. 

ಎರಡನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್‌ಗಳಿಗೆ 256 ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಡೀನ್ ಎಲ್ಗರ್ 140  ಮತ್ತು ಮಾರ್ಕೊ 3 ರನ್‌ ಗಳಿಸಿದ್ದರು. ಗುರುವಾರ ಬೆಳಿಗ್ಗೆ  ಇವರಿಬ್ಬರ ಜೊತೆಯಾಟವನ್ನು ಮುರಿಯಲು ಬೌಲರ್‌ಗಳು ಹರಸಾಹಸ ಪಟ್ಟರು. ಇವರಿಬ್ಬರೂ 6ನೇ ವಿಕೆಟ್ ಜೊತೆಯಾಟದಲ್ಲಿ 111 ರನ್‌ ಸೇರಿಸಿದರು. ದ್ವಿಶತಕದತ್ತ ಸಾಗಿದ್ದ ಡೀನ್ ವಿಕೆಟ್ ಗಳಿಸಿದ ಶಾರ್ದೂಲ್ ಠಾಕೂರ್ ಈ ಜೊತೆಯಾಟವನ್ನು ಮುರಿದರು.

ಮಾರ್ಕೊ ಮತ್ತು ಜೆರಾಲ್ಡ್‌ (19 ರನ್) ತಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು. ಕೊನೆಯ ಕ್ರಮಾಂಕದ ಬ್ಯಾಟರ್‌ಗಳು ಹೆಚ್ಚು ಹೊತ್ತ ಆಡದಂತೆ ಬೂಮ್ರಾ (69ಕ್ಕೆ4) ತಡೆಯೊಡ್ಡಿದರು.

ವಿರಾಟ್ ಹೋರಾಟ: ಚೇಸಿಂಗ್ ಮಾಸ್ಟರ್ ವಿರಾಟ್  ಆತಿಥೇಯ ವೇಗಿಗಳ ಎಸೆತಗಳನ್ನು ಅಪಾರ ಆತ್ಮವಿಶ್ವಾಸದಿಂದ ಎದುರಿಸಿದರು. ಕ್ಲೋಸ್ ಇನ್‌ ಫೀಲ್ಡಿಂಗ್ ಕೋಟೆಯನ್ನು ಚಾಣಾಕ್ಷತೆಯಿಂದ ಮೀರಿ ನಿಂತರು. 14ನೇ ಓವರ್‌ನಲ್ಲಿ ನಾಂದ್ರೆ  ಬರ್ಗರ್ ಬೌಲಿಂಗ್‌ನಲ್ಲಿ ಲಭಿಸಿದ್ದ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡರು.

ಆದರೆ ಉಳಿದ ಬ್ಯಾಟರ್‌ಗಳು ಇಂತಹ ಆಟವಾಡಲಿಲ್ಲ. ಆರಂಭಿಕ ಬ್ಯಾಟರ್ (26; 37ಎ)  ಮತ್ತು ಕೊಹ್ಲಿ ಅವರಿಬ್ಬರೇ ಎರಡಂಕಿ ಮೊತ್ತ ಗಳಿಸಿದ ಬ್ಯಾಟರ್‌ಗಳು. ನಾಯಕ ರೋಹಿತ್ ಹಾಗೂ ಅಶ್ವಿನ್ ಖಾತೆಯನ್ನೇ ತೆರೆಯಲಿಲ್ಲ. ಯಶಸ್ವಿ, ಶ್ರೇಯಸ್, ಮೊದಲ ಇನಿಂಗ್ಸ್‌ನಲ್ಲಿ ಶತಕ
ಗಳಿಸಿದ್ದ ರಾಹುಲ್ ಕೂಡ ಒಂದಂಕಿ ಗಳಿಸಿದರು. ವಿರಾಟ್  ಇನಿಂಗ್ಸ್‌ನಲ್ಲಿ ಕೊನೆಯವರಾಗಿ ಔಟಾದರು. ಎರಡೂ ಇನಿಂಗ್ಸ್‌ಗಳಲ್ಲಿ ಪ್ರಸಿದ್ಧ ಕೃಷ್ಣ  ಔಟಾಗದೇ ಉಳಿದರು. ಆದರೆ ಒಂದೂ ರನ್ ಗಳಿಸಲಿಲ್ಲ.

ಎಡಗೈ ವೇಗಿಗಳಿಗೆ 11 ವಿಕೆಟ್

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎಡಗೈ ವೇಗಿಗಳು ಒಟ್ಟು 11 ವಿಕೆಟ್‌ಗಳನ್ನು ಗಳಿಸಿದರು.

ಇದರೊಂದಿಗೆ 100 ವರ್ಷ ಹಳೆಯದಾದ ದಾಖಲೆಯನ್ನು ಸರಿಗಟ್ಟಿದರು. 1923ರಲ್ಲಿ ಕೇಪ್‌ಟೌನ್‌ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆತಿಥೇಯ ತಂಡದ ಎಡಗೈ ಬೌಲರ್‌ಗಳು ಈ ದಾಖಲೆ ಮಾಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT