ವಿಶಾಖಪಟ್ಟಣ: ಇಲ್ಲಿ ನಡೆಯುತ್ತಿರುವ ಮೂರನೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಋತುರಾಜ್ ಗಾಯಕವಾಡ್ ಹಾಗೂ ಇಶಾನ್ ಕಿಶನ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದದಕ್ಷಿಣ ಆಫ್ರಿಕಾಕ್ಕೆ 180ರನ್ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತು.
ಟೀಮ್ ಇಂಡಿಯಾಕ್ಕೆ ಆರಂಭಿಕರಾದ ಗಾಯಕವಾಡ್ ಹಾಗೂ ಇಶಾನ್ ಭದ್ರ ಬುನಾದಿ ಹಾಕಿಕೊಟ್ಟರು. ಕಳೆದ ಎರಡು ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಗಾಯಕವಾಡ್, ಇಂದಿನ ಪಂದ್ಯದಲ್ಲಿ ಆರಂಭದಿಂದಲೇ ಅತಿಥೇಯ ತಂಡದ ಬೌಲರ್‌ಗಳನ್ನು ಚಚ್ಚತೊಡಗಿದರು. ಅವರು 35 ಎಸೆತಗಳಲ್ಲಿ 57 ರನ್ ಗಳಿಸಿ ಕೇಶವ್ ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿದ್ದವು.
ಇಶಾನ್ ಕಿಶನ್ 35 ಎಸೆತಗಳಲ್ಲಿ 54 ರನ್ ಗಳಿಸಿ ಡ್ವೇನ್ ಪ್ರಿಟೊರಿಯಸ್‌ಗೆ ವಿಕೆಟ್ ಒಪ್ಪಿಸಿದರು. ಇಶಾನ್ ಇನ್ನಿಂಗ್ಸ್‌ನಲ್ಲಿ ಎರಡು ಆಕರ್ಷಕ ಸಿಕ್ಸರ್ ಹಾಗೂ 5 ಬೌಂಡರಿ ಒಳಗೊಂಡಿದ್ದವು.
ಶ್ರೇಯಸ್ ಅಯ್ಯರ್ (14 ರನ್, 11 ಎಸೆತ) ಪರಿಣಾಮಕಾರಿಯಾಗಲಿಲ್ಲ. ಮೊದಲ ಮೂರು ವಿಕೆಟ್ ಪತನದ ಬಳಿಕ ರನ್ ಗತಿಯಲ್ಲಿ ತುಸು ಇಳಿಕೆ ಕಂಡುಬಂತು. ನಾಯಕ ರಿಷಭ್ ಪಂತ್ ಕೇವಲ 6 ರನ್ ಗಳಿಸಿ ಪೆವಿಲಿಯನ್ ಹಾದಿಹಿಡಿದರು. ದಿನೇಶ್ ಕಾರ್ತಿಕ್ ಸಹ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 31 ರನ್, ಅಕ್ಸರ್ ಪಟೇಲ್ 5 ರನ್ ಗಳಿಸಿ ಔಟಾಗದೆ ಉಳಿದರು.
ದಕ್ಷಿಣ ಆಫ್ರಿಕಾ ಪರ ಡ್ವೇನ್ ಪ್ರಿಟೊರಿಯಸ್ 2, ಕೇಶವ್ ಮಹಾರಾಜ್ 1, ತಬ್ರೆಜ್ ಶಮ್ಸಿ 1 ಹಾಗೂ ರಬಾಡ 1 ವಿಕೆಟ್ ಪಡೆದರು.
ಆಡುವ ಹನ್ನೊಂದರ ಬಳಗ ಹೀಗಿದೆ;
ಭಾರತ: ರಿಷಭ್ ಪಂತ್ (ನಾಯಕ–ವಿಕೆಟ್‌ಕೀಪರ್), ಋತುರಾಜ್ ಗಾಯಕವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್
ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ರೀಜಾ ಹೆನ್ರಿಕ್ಸ್, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ಕೀಪರ್), ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಎನ್ರಿಚ್ ನಾರ್ಕಿಯಾ, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೆಜ್ ಶಮ್ಸಿ, ರಸಿ ವ್ಯಾನ್ ಡರ್ ಡಸೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.