ಮಂಗಳವಾರ, ನವೆಂಬರ್ 29, 2022
28 °C

IND vs SA 1st ODI: ಶಿಖರ್ ಬಳಗಕ್ಕೆ ದಕ್ಷಿಣ ಆಫ್ರಿಕಾ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ : ಮುಂದಿನ ವರ್ಷ ಭಾರತದಲ್ಲಿಯೇ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯುವ ಉತ್ಸಾಹದಲ್ಲಿರುವ ಯುವಪಡೆಯು ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಟಿ20 ಸರಣಿಯಲ್ಲಿ 2–1ರಿಂದ ಗೆದ್ದ ರೋಹಿತ್ ಶರ್ಮಾ ಬಳಗದ ಬಹುತೇಕ ಆಟಗಾರರು ಚುಟುಕು ಕ್ರಿಕೆಟ್‌ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಇದರಿಂದಾಗಿ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ಎಡಗೈ ಬ್ಯಾಟರ್ ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಟಿ20 ಸರಣಿಯಲ್ಲಿ ಆಡಿದ್ದ ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್ ಹಾಗೂ ಶ್ರೇಯಸ್ ಅಯ್ಯರ್‌ ಅವರು ಈ ತಂಡದಲ್ಲಿದ್ಧಾರೆ. 

ಪ್ರಥಮ ದರ್ಜೆ ಹಾಗೂ ಐಪಿಎಲ್‌ ಪಂದ್ಯಗಳಲ್ಲಿ ಮಿಂಚಿರುವ ರಜತ್ ಪಾಟೀದಾರ್, ಮಧ್ಯಮವೇಗಿ ಮುಕೇಶ್ ಕುಮಾರ್ ಅವರಿಗೂ ಈ ಬಳಗದಲ್ಲಿ ಸ್ಥಾನ ಲಭಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯ ಅವಕಾಶ ಸಿಗುವ ಸಾಧ್ಯತೆ ಇದೆ. ಇಬ್ಬರು ವಿಕೆಟ್‌ ಕೀಪರ್‌ಗಳಾದ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ತಂಡದಲ್ಲಿದ್ದಾರೆ.  ಗಾಯಗೊಂಡಿರುವ ವೇಗಿ ಜಸ್‌ಪ್ರೀತ್ ಬೂಮ್ರಾ ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಆದ್ದರಿಂದ ಅವರ ಸ್ಥಾನಕ್ಕೆ ಮೊಹಮ್ಮದ್ ಶಮಿ, ಸಿರಾಜ್ ಹಾಗೂ ದೀಪಕ್  ಹೆಸರುಗಳು ಕೇಳಿಬರುತ್ತಿವೆ. ಒಂದೊಮ್ಮೆ ಶಮಿ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಅವರು ಆಸ್ಟ್ರೇಲಿಯಾ ವಿಮಾನ ಹತ್ತುವುದು ಬಹುತೇಕ ಖಚಿತ. ಇಲ್ಲದಿದ್ದರೆ ಉಳಿದ ಬೌಲರ್‌ಗಳ ಸೇರ್ಪಡೆಯತ್ತ  ಆಯ್ಕೆ ಸಮಿತಿ ಗಮನ ಹರಿಸಲಿದೆ. 

ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಗಮನ ಸೆಳೆದಿರುವ ಪ್ರವಾಸಿ ಬಳಗವು ಏಕದಿನ ಸರಣಿ ಜಯಿಸುವ ವಿಶ್ವಾಸದಲ್ಲಿದೆ. ಆತಿಥೇಯ ಬಳಗದಲ್ಲಿ ಅನುಭವಿ ಹಾಗೂ ಖ್ಯಾತನಾಮ ಆಟಗಾರರಿಲ್ಲದಿರುವುದರ ಲಾಭ ಪಡೆಯಲು ತೆಂಬಾ ಬವುಮಾ ಯೋಜನೆ ಹೆಣೆದಿದೆ. ಟಿ20 ಪಂದ್ಯದಲ್ಲಿ ಶತಕ ದಾಖಲಿಸಿರುವ ಡೇವಿಡ್ ಮಿಲ್ಲರ್, ಅನುಭವಿ ಕ್ವಿಂಟನ್ ಡಿ ಕಾಕ್, ಬೌಲರ್‌ಗಳಾದ ಕಗಿಸೊ ರಬಾಡ, ಲುಂಗಿ ಗಿಡಿ ಅವರು ಶಿಖರ್ ಬಳಗಕ್ಕೆ ಕಠಿಣ ಸವಾಲೊಡ್ಡಬಲ್ಲರು.  

ಪಿಚ್ ರಿಪೋರ್ಟ್

ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಎಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ 2020ರ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಏಕದಿನ ಪಂದ್ಯವು ಕೋವಿಡ್ –19 ತಡೆಗೆ ಲಾಕ್‌ಡೌನ್ ಆರಂಭವಾಗಿದ್ದರಿಂದ  ರದ್ದಾಗಿತ್ತು. ಅದರಿಂದಾಗಿ ಈ ಅಂಗಣದಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. 2019ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಫ್ಗಾನಿಸ್ತಾನ ತಂಡಗಳು ಮೂರು ಪಂದ್ಯಗಳನ್ನು ಇಲ್ಲಿ ಆಡಿದ್ದವು. 

ಇಲ್ಲಿಯ ಪಿಚ್ ಕಪ್ಪುಮಣ್ಣಿನ ಮೇಲ್ಪದರ ಹೊಂದಿದೆ. ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಇನಿಂಗ್ಸ್‌ನ ಆರಂಭದಲ್ಲಿ ವೇಗಿಗಳಿಗೆ ಹಾಗೂ ಕೊನೆಯಲ್ಲಿ ಸ್ಪಿನ್ನರ್‌ಗಳಿಗೆ ತುಸು ನೆರವು ಸಿಗಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು