ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL Asia Cup 2022 Super 4| ಲಂಕಾ ಎದುರು ಎಡವಿದ ಭಾರತ

Last Updated 6 ಸೆಪ್ಟೆಂಬರ್ 2022, 19:05 IST
ಅಕ್ಷರ ಗಾತ್ರ

ದುಬೈ: ಯುವ ಆಟಗಾರರನ್ನು ಒಳಗೊಂಡ ಶ್ರೀಲಂಕಾ ತಂಡ, ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಭಾರತಕ್ಕೆ ಆಘಾತ ನೀಡಿತು.

ದುಬೈನಲ್ಲಿ ಮಂಗಳವಾರ ಜಿದ್ದಾಜಿದ್ದಿನ ಹೋರಾಟ ನಡೆದ ಪಂದ್ಯದಲ್ಲಿ ಲಂಕಾ ತಂಡ ಆರು ವಿಕೆಟ್‌ಗಳ ಜಯ ಸಾಧಿಸಿತು. ಸೂಪರ್‌ ಫೋರ್‌ ಹಂತದಲ್ಲಿ ಸತತ ಎರಡನೇ ಸೋಲು ಅನುಭವಿಸಿದ ರೋಹಿತ್‌ ಶರ್ಮ ಬಳಗದ ಫೈನಲ್‌ ಪ್ರವೇಶದ ಸಾಧ್ಯತೆ ಕ್ಷೀಣಿಸಿದೆ. ಪ್ರಶಸ್ತಿ ಸುತ್ತು ತಲುಪಬೇಕಾದರೆ ಇತರ ಪಂದ್ಯಗಳ ಫಲಿತಾಂಶ ಅವಲಂಬಿಸಬೇಕಾಗಿದೆ.

ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 173 ರನ್‌ ಗಳಿಸಿದರೆ, ಲಂಕಾ ತಂಡ ಇನ್ನೂ ಒಂದು ಎಸೆತ ಬಾಕಿಯಿರುವಂತೆ 4 ವಿಕೆಟ್‌ಗೆ 174 ರನ್‌ ಗಳಿಸಿ ಗೆಲುವಿನ ಕೇಕೆ ಹಾಕಿತು.

ಪಥುಮ್‌ ನಿಸ್ಸಂಕಾ (52 ರನ್‌, 37 ಎ., 4X4, 6X2) ಮತ್ತು ಕುಶಾಲ್‌ ಮೆಂಡಿಸ್‌ (57 ರನ್, 37 ಎ., 4X4, 6X3) ಅವರು ಮೊದಲ ವಿಕೆಟ್‌ಗೆ 97 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ಆ ಬಳಿಕ 13 ರನ್‌ಗಳ ಅಂತದಲ್ಲಿ ನಾಲ್ಕು ವಿಕೆಟ್‌ ಪಡೆದ ಭಾರತ, ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿತು. ಆದರೆ ಐದನೇ ವಿಕೆಟ್‌ಗೆ 34 ಎಸೆತಗಳಲ್ಲಿ 64 ರನ್‌ ಸೇರಿಸಿದ ನಾಯಕ ದಸುನ್‌ ಶನಕ (ಅಜೇಯ 33) ಮತ್ತು ಭಾನುಕ ರಾಜಪಕ್ಸ (ಅಜೇಯ 25) ಅವರು ಪಂದ್ಯವನ್ನು ಭಾರತದ ಕೈಯಿಂದ ಕಿತ್ತುಕೊಂಡರು.

ಲಂಕಾ ಜಯಕ್ಕೆ ಕೊನೆಯ ಎರಡು ಓವರ್‌ಗಳಲ್ಲಿ 21 ರನ್‌ಗಳು ಬೇಕಿದ್ದವು. ಭುವನೇಶ್ವರ್‌ ಬೌಲ್‌ ಮಾಡಿದ 19ನೇ ಓವರ್‌ನಲ್ಲಿ 14 ರನ್‌ಗಳು ಬಂದವು. ಆರ್ಷದೀಪ್‌ ಸಿಂಗ್‌ ಬೌಲ್‌ ಮಾಡಿದ ಕೊನೆಯ ಓವರ್‌ನಲ್ಲಿ ಏಳು ರನ್‌ಗಳ ಅಗತ್ಯವಿತ್ತು. ದಸುನ್‌ ಮತ್ತು ರಾಜಪಕ್ಸ ಒತ್ತಡ ಮೆಟ್ಟಿನಿಲ್ಲಲು ಯಶಸ್ವಿಯಾದರು.

ರೋಹಿತ್‌ ಅಬ್ಬರ: ಮೊದಲು ಬ್ಯಾಟ್‌ ಮಾಡಿದ ಭಾರತಕ್ಕೆ ಒಳ್ಳೆಯ ಆರಂಭ ಲಭಿಸಲಿಲ್ಲ. ಕೆ.ಎಲ್. ರಾಹುಲ್ (6 ರನ್) ಎರಡನೇ ಓವರ್‌ನಲ್ಲಿ ತೀಕ್ಷಣ ಹಾಕಿದ ಯಾರ್ಕರ್‌ ಎಸೆತಕ್ಕೆ ಎಲ್‌ಬಿಡಬ್ಲ್ಯು ಆದರು. ನಂತರದ ಓವರ್‌ನಲ್ಲಿ ಮಧುಶಂಕಾ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಲೀನ್‌ ಬೌಲ್ಡ್ ಆಗಿ ಸೊನ್ನೆ ಸುತ್ತಿದರು. ಕಳೆದ ಎರಡೂ ಪಂದ್ಯಗಳಲ್ಲಿ ವಿರಾಟ್ ಅರ್ಧಶತಕ ಗಳಿಸಿದ್ದರು.

ತಂಡವು 13 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆದರೆ ಈ ಆತಂಕವನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ (72; 41ಎ, 4X5, 6X4) ದೂರ ಮಾಡಿದರು. ಅವರಿಗೆ ಸೂರ್ಯಕುಮಾರ್ (34; 29ಎ) ಉತ್ತಮ ಜೊತೆ ನೀಡಿದರು.ಹಸರಂಗಾ ಬೌಲಿಂಗ್ ಮಾಡಿದ ಒಂಬತ್ತನೇ ಓವರ್‌ನಲ್ಲಿ ರೋಹಿತ್ ಕ್ಯಾಚ್ ಕೈಚೆಲ್ಲಿದ ಫೀಲ್ಡರ್‌ ಮಧುಶಂಕಾ ಜೀವದಾನ ನೀಡಿದರು. ಇದರ ಲಾಭ ಪಡೆದ ರೋಹಿತ್ ಮತ್ತಷ್ಟು ರನ್‌ಗಳನ್ನು ಗಳಿಸಿದರು.ಮುಂಬೈ ರೋಹಿತ್ ಹಾಗೂ ಸೂರ್ಯ ಜೋಡಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 97 ರನ್‌ ಗಳಿಸಿತು. ಇದರಿಂದಾಗಿ ತಂಡವು ಚೇತರಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT