ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

INDvsWI | ಸಿಕ್ಸರ್‌ಗಳ ಮಳೆ; ರನ್ ಹೊಳೆ; ರಾಹುಲ್, ರೋಹಿತ್, ವಿರಾಟ್ ಸೂಪರ್ ಹಿಟ್

ಭಾರತಕ್ಕೆ ಟಿ20 ಸರಣಿ
Last Updated 12 ಡಿಸೆಂಬರ್ 2019, 4:41 IST
ಅಕ್ಷರ ಗಾತ್ರ

ಮುಂಬೈ: ಇಪ್ಪತ್ತೆಂಟು ಸಿಕ್ಸರ್, ಮೂವತ್ತೊಂದು ಬೌಂಡರಿ, 40 ಓವರ್‌ಗಳು, 413 ರನ್‌ಗಳು..

ವಾಂಖೆಡೆ ಕ್ರೀಡಾಂಗಣದಲ್ಲಿ ಬುಧ ವಾರ ರಾತ್ರಿ ವೆಸ್ಟ್ ಇಂಡೀಸ್ ಎದುರಿನ ಸರಣಿಯ ಮೂರನೇ ಟ್ವೆಂಟಿ–20 ಪಂದ್ಯದ ಸಾರಾಂಶ ಇದು. ಈ ರನ್‌ಗಳ ಹೊಳೆಯಲ್ಲಿ ವಿರಾಟ್ ಕೊಹ್ಲಿ ಬಳಗವು ಸರಣಿ ಜಯಿಸಿ ತೇಲಾಡಿತು. ಮೂರು ಪಂದ್ಯಗಳ ಈ ಸರಣಿಯ ‘ಫೈನಲ್‌’ ಎಂದೇ ಬಿಂಬಿಸಲಾಗಿದ್ದ ಈ ಪಂದ್ಯದಲ್ಲಿ ಭಾರತ ತಂಡವು 67 ರನ್‌ಗಳಿಂದ ಜಯಿಸಿತು. 2–1ರಲ್ಲಿ ಸರಣಿ ಗೆದ್ದಿತು.

ಇದಕ್ಕೆ ಪ್ರಮುಖ ಕಾರಣವಾಗಿದ್ದು ಕನ್ನಡಿಗ ಕೆ.ಎಲ್. ರಾಹುಲ್ (91; 56ಎಸೆತ, 9ಬೌಂಡರಿ, 4ಸಿಕ್ಸರ್), ಮುಂಬೈಕರ್ ರೋಹಿತ್ ಶರ್ಮಾ (71;34ಎ, 6ಬೌಂ, 5ಸಿ) ಮತ್ತು ನಾಯಕ ವಿರಾಟ್ (ಅಜೇಯ 70;29ಎ,4ಬೌಂ, 7ಸಿ) ಅವರ ಸ್ಫೋಟಕ ಬ್ಯಾಟಿಂಗ್. ಇವರ ಅಬ್ಬರದ ಆಟಕ್ಕೆ ಭಾರತ ತಂಡವು 20 ಓವರ್‌ಗಳಲ್ಲಿ 3ಕ್ಕೆ 240 ರನ್‌ ಗಳಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಬಳಗ ಕೈಕೈ ಹಿಸುಕಿಕೊಂಡಿತು. ಬೃಹತ್ ಗುರಿ ಬೆನ್ನತ್ತಿದ ಕೆರಿಬಿಯನ್ ಪಡೆಯು 20 ಓವರ್‌ಗಳಲ್ಲಿ 8ಕ್ಕೆ 173 ರನ್‌ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಕೀರನ್ ಪೊಲಾರ್ಡ್ (68; 39ಎ, 5ಬೌಂ, 6ಸಿ) ಅವರ ಗದಾಪ್ರಹಾರವು ತಂಡಕ್ಕೆ ಗೆಲುವು ನೀಡಲಿಲ್ಲ. ಆದರೆ ಐಪಿಎಲ್ ಪಂದ್ಯದ ನೆನಪು ಮರುಕಳಿಸುವಂತೆ ಮಾಡಿತು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಪೊಲಾರ್ಡ್ ಅವರಿಗೆ ವಾಂಖೆಡೆ ಒಂದು ಬಗೆಯಲ್ಲಿ ತವರಿನ ಅಂಗಳ.

ಅದೇ ಮುಂಬೈ ಇಂಡಿಯನ್ಸ್‌ನ ‘ನಾಯಕ’ ರೋಹಿತ್ ಶರ್ಮಾ ಅವರು ರಾಹುಲ್ ಜೊತೆಗೂಡಿ ಮೊದಲ ವಿಕೆಟ್‌ಗೆ ಗಳಿಸಿದ 135 ರನ್‌ಗಳು ಭಾರತಕ್ಕೆ ದೊಡ್ಡ ಮೊತ್ತ ಗಳಿಸಲು ಅಡಿ ಪಾಯವಾಯಿತು. ಇವರಿಬ್ಬರ ಅಬ್ಬರಕ್ಕೆ ಕೇವಲ ಎಂಟು ಓವರ್‌ಗಳಲ್ಲಿ 100 ರನ್‌ಗಳು ಹರಿದುಬಂದವು. ರೋಹಿತ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಇನ್ನೊಂದೆಡೆ ಸುಂದರ ಡ್ರೈವ್ ಮತ್ತು ಫ್ಲಿಕ್‌ಗಳ ಆಟವಾಡಿದ ರಾಹುಲ್ 29 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಟಿ20 ಮಾದರಿಯಲ್ಲಿ ಇದು ಅವರ ಐದನೇ ಮತ್ತು ಈ ಸರಣಿಯಲ್ಲಿ ಎರಡನೇ ಅರ್ಧಶತಕವಾಗಿದೆ.

ಹೋದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಇವರಿಬ್ಬರೂ ಇಲ್ಲಿ ವಿಂಡೀಸ್ ಬೌಲರ್‌ಗಳ ಬೆವರಿಳಿಸಿದರು. ರೋಹಿತ್ ಒಟ್ಟು ಐದು ಸಿಕ್ಸರ್‌ಗಳನ್ನು ಎತ್ತಿದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 404 ಸಿಕ್ಸರ್‌ಗಳನ್ನು ಸಿಡಿಸಿದ ಸಾಧನೆ ಮಾಡಿದರು. 12ನೇ ಓವರ್‌ನಲ್ಲಿ ವೇಗಿ ಕೆಸ್ರಿಕ್ ವಿಲಿಯಮ್ಸ್‌ ಅವರ ಎಸೆತವನ್ನು ಬೌಂಡರಿಗೆರೆ ದಾಟಿಸುವಲ್ಲಿ ವಿಫಲರಾದ ರೋಹಿತ್ ಹೇಡನ್ ವಾಲ್ಶ್ ಅವರಿಗೆ ಕ್ಯಾಚ್ ಆದರು. ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರಿಷಭ್ ಪಂತ್ ತಾವೆದುರಿಸಿದ ಎರಡನೇ ಎಸೆತದಲ್ಲಿಯೇ ಜೇಸನ್ ಹೋಲ್ಡರ್‌ಗೆ ಕ್ಯಾಚ್ ಕೊಟ್ಟು, ಪೊಲಾರ್ಡ್‌ಗೆ ವಿಕೆಟ್ ಆದರು. ತಮಗೆ ಲಭಿಸಿದ್ದ ಮತ್ತೊಂದು ಅವಕಾಶವನ್ನು ಕೈಚೆಲ್ಲಿದರು.

ಸಂಭ್ರಮದಲ್ಲಿ ಜಿಗಿದಾಡಿದ ವಿಂಡೀಸ್ ಆಟಗಾರರಿಗೆ ಮತ್ತೆ ಸಂಭ್ರಮಿಸುವ ಅವಕಾಶ ಸಿಗಲಿಲ್ಲ. ಸಿಡಿಲಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಮಿಂಚಿನ ಸಂಚಲನ ಮೂಡಿಸಿದರು. ಇವರಿಬ್ಬರ ಆಟಕ್ಕೆ ಕೇವಲ 56 ಎಸೆತಗಳಲ್ಲಿ 95 ರನ್‌ಗಳು ಸೇರಿದವು. ಅದರಲ್ಲಿ ಕೊಹ್ಲಿಯದ್ದೇ ಸಿಂಹಪಾಲು. ಐದು ಅಬ್ಬರದ ಸಿಕ್ಸರ್‌ ಗಳನ್ನು ಸಿಡಿಸಿದ ಅವರು ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಸರಣಿಯ ಮೊದಲ ಪಂದ್ಯದಲ್ಲಿ ಅವರು ಅಜೇಯ 94 ರನ್‌ ಗಳಿಸಿದ್ದರು. ಶತಕದತ್ತ ಸಾಗಿದ್ದ ರಾಹುಲ್, ಇನಿಂಗ್ಸ್‌ನಲ್ಲಿ ಇನ್ನೂ ಎರಡು ಎಸೆತಗಳು ಬಾಕಿಯಿದ್ದಾಗ ಔಟಾದರು. ಚುಟುಕು ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸುವ ಅವಕಾಶ ಅವರ ಕೈತಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT