ಬುಧವಾರ, ಜನವರಿ 22, 2020
24 °C
ರಾಹುಲ್, ವಿರಾಟ್ ಮೇಲೆ ಕಣ್ಣು

IND vs WI ಟಿ20 ಪಂದ್ಯ ಇಂದು: ಸರಣಿ ಕೈವಶಕ್ಕೆ ಕೊಹ್ಲಿ ಬಳಗದ ಚಿತ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ ಮತ್ತು ಕೆ.ಎಲ್. ರಾಹುಲ್ ಅವರ ಸುಂದರ ಆಟದಿಂದಾಗಿ ಭಾರತಕ್ಕೆ ಶುಕ್ರವಾರ ವೆಸ್ಟ್‌ ಇಂಡೀಸ್ ಎದುರು ಟ್ವೆಂಟಿ–20 ಪಂದ್ಯ ಜಯಿಸಲು ಸಾಧ್ಯವಾಯಿತು. ಇಲ್ಲದಿದ್ದರೆ ಸೋಲು ಖಚಿತವಾಗಿತ್ತು.

ಏಕೆಂದರೆ, ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ಬೌಲಿಂಗ್ ಮತ್ತು ಫೀಲ್ಡಿಂಗ್ ಎರಡರಲ್ಲೂ ಕಳಪೆ ಆಟವಾಡಿತ್ತು.

ಆದರೆ, ಭಾನುವಾರ ಇಲ್ಲಿಯ ಗ್ರೀನ್‌ಫೀಲ್ಡ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಲೋಪಗಳನ್ನು ತಿದ್ದಿಕೊಂಡು ಆಡಿದರೆ ಸರಣಿಯನ್ನು ಕೈವಶ ಮಾಡಿಕೊಳ್ಳಲು ಸಾಧ್ಯ. ‌

ಭಾರತ ತಂಡವು 13 ತಿಂಗಳಲ್ಲಿ ವಿಂಡೀಸ್ ಎದುರು ಒಟ್ಟು ಏಳು ಪಂದ್ಯಗಳನ್ನು ಗೆದ್ದಿದೆ.  ಈಗ ಎಂಟನೇ ಜಯದ ಮೇಲೆ ಕಣ್ಣಿಟ್ಟಿದೆ.

ಹೈದರಾಬಾದ್‌ನಲ್ಲಿ ಉಭಯ ತಂಡಗಳ ಬೌಲರ್‌ಗಳೂ ದಂಡನೆಗೊಳಗಾದರು. ಆದರೆ ಭಾರತದ ಬೌಲರ್‌ಗಳು ಮೊದಲಿಗೆ ಬೌಲಿಂಗ್ ಮಾಡಿದ್ದರಿಂದ ಉತ್ತಮವಾಗಿ ಎಸೆತಗಳನ್ನು ಹಾಕುವ ಎಲ್ಲ ಅವಕಾಶಗಳೂ ಇದ್ದವು.  ಆದರೆ ಲೈನ್ ಮತ್ತು ಲೆಂಗ್ತ್‌ ಕಾಪಾಡಿಕೊಳ್ಳುವಲ್ಲಿ ಮಧ್ಯಮವೇಗಿಗಳು ಎಡವಿದರು. ಭರವಸೆಯ ಬೌಲರ್ ದೀಪಕ್ ಚಾಹರ್ ದುಬಾರಿಯಾದರು.

ವಿಂಡೀಸ್‌ ಬ್ಯಾಟಿಂಗ್ ಕ್ರಮಾಂಕದ ಮೊದಲ ಆರು ಆಟಗಾರರನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕದೇ ಹೋದರೆ ಏನಾ ಗುತ್ತದೆ ಎಂಬುದರ ಅರಿವು ಈಗಾಗಲೇ ಭಾರತದ ಬೌಲರ್‌ಗಳಿಗೆ ಆಗಿದೆ.

ಫೀಲ್ಡಿಂಗ್‌ನಲ್ಲಿಯ ಲೋಪಗಳಿಂದಾಗಿ ವಿಂಡೀಸ್ ತಂಡವು 207 ರನ್‌ಗಳನ್ನು ಗಳಿಸಿತು. ಬಿಟ್ಟ ಕ್ಯಾಚುಗಳು ನಿಜಕ್ಕೂ ತುಟ್ಟಿಯಾದವು.

ಆದರೆ, ಅಜೇಯ 94 ರನ್ ಗಳಿಸಿದ ವಿರಾಟ್ ಆಟದಿಂದಾಗಿ ಭಾರತವು ಅತಿ ಹೆಚ್ಚು ರನ್‌ಗಳ ಚೇಸಿಂಗ್ ದಾಖಲೆ ನಿರ್ಮಿಸಿ ಗೆದ್ದಿತು. ಶಿಖರ್ ಧವನ್ ಗಾಯಗೊಂಡು ಹೊರಗುಳಿದಿರುವುದರಿಂದ ಸ್ಥಾನ ಪಡೆದಿರುವ ಕನ್ನಡಿಗ ರಾಹುಲ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ರೋಹಿತ್ ಶರ್ಮಾ ಬೇಗನೇ ಔಟಾದರೂ ರಾಹುಲ್ ಮತ್ತು ಕೊಹ್ಲಿಯ ಶತಕದ ಜೊತೆಯಾಟ ತಂಡಕ್ಕೆ ನೆರವಾಯಿತು. ಆದರೆ ರಿಷಭ್ ಪಂತ್ ಮತ್ತೊಂದು ಸಲ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಶ್ರೇಯಸ್ ಅಯ್ಯರ್ ಕೂಡ ಎಡವಿದರು.

ಆದರೂ ಇವರಿಬ್ಬರಿಗೂ ಮತ್ತೊಂದು ಅವಕಾಶ ಸಿಗಬಹುದು. ಒಂದೊಮ್ಮೆ ರಿಷಭ್‌ ಹೊರಗುಳಿದರೆ, ‘ಸ್ಥಳೀಯ ಹೀರೊ’ ಸಂಜು ಸ್ಯಾಮ್ಸನ್‌ ಸ್ಥಾನ ಪಡೆಯಬಹುದು.

ಬೌಲಿಂಗ್‌ ವಿಭಾಗದಲ್ಲಿ ಮೊಹ ಮ್ಮದ್ ಶಮಿಯನ್ನು ಕಣಕ್ಕಿಳಿಸಬ ಹುದು. ಆದರೆ ಅವರಿಗಾಗಿ ಭುವ ನೇಶ್ವರ್ ಅಥವಾ ದೀಪಕ್ ಚಾಹರ್ ಸ್ಥಾನ ಬಿಟ್ಟುಕೊಡಬೇಕು. ವಾಷಿಂಗ್ಟನ್ ಸುಂದರ್ ಮತ್ತು ಚಾಹಲ್ ಅವರು ಮತ್ತೊಂದು ಅವಕಾಶ ಪಡೆಯಬಹುದು.

ಕೀರನ್ ಪೊಲಾರ್ಡ್ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಯಾವುದೇ ಚಿಂತೆ ಇಲ್ಲ. ಆದರೆ, ಬೌಲಿಂಗ್‌ನದ್ದೇ ಸಮಸ್ಯೆ. ತಂಡವು ಮಧ್ಯಮವೇಗದ ಬೌಲರ್‌ಗಳನ್ನೇ ಹೆಚ್ಚು ಅವಲಂಬಿಸಿದೆ. ಇದೆಲ್ಲದರ ಜೊತೆಗೆ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕೆಣಕುವ (ಸ್ಲೆಡ್ಜಿಂಗ್) ಚಾಳಿಗೂ ತುಸು ಕಡಿವಾಣ ಹಾಕಿಕೊಂಡರೆ ಪಂದ್ಯವನ್ನು ತಮ್ಮ ಹಿಡಿತಕ್ಕೆ ಪಡೆಯಬಹುದು. ಇಲ್ಲದಿದ್ದರೆ, ಹೈದರಾಬಾದ್‌ನಲ್ಲಿ ಕೊಹ್ಲಿಯನ್ನು ಕೆಣಕಿ ಮಾಡಿಕೊಂಡ ಪ್ರಮಾದ ಇಲ್ಲಿಯೂ ಮರುಕಳಿಸಬಹುದು.

ಮಳೆ ಆಟ: ಭಾನುವಾರ  ಇಲ್ಲಿ ಸ್ವಲ್ಪ ಪ್ರಮಾಣದ ಮಳೆ ಸುರಿಯುವ ನಿರೀಕ್ಷೆ ಇದೆ. ಈ ಕ್ರೀಡಾಂಗಣದಲ್ಲಿ ಇದುವರೆಗೆ ನಡೆದಿರುವುದು ಏಕೈಕ ಟಿ20 ಪಂದ್ಯವಾಗಿದೆ.

2017ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಪಂದ್ಯಕ್ಕೆ ಮಳೆಯಿಂದಾಗಿ ವ್ಯತ್ಯಯವಾಗಿತ್ತು. ಕೇವಲ ಎಂಟು ಓವರ್‌ಗಳ ಪಂದ್ಯ ನಡೆದಿತ್ತು. ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿ ಎಂಟು ಓವರ್‌ಗಳಲ್ಲಿ 5ಕ್ಕೆ 67 ರನ್ ಗಳಿಸಿತ್ತು. ನ್ಯೂಜಿಲೆಂಡ್ ತಂಡವು ಆರು ವಿಕಟ್‌ಗಳಿಗೆ 61 ರನ್‌ ಗಳಿಸಿತ್ತು.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ರಿಷಭ್ ಪಂತ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಸಂಜು ಸ್ಯಾಮ್ಸನ್.

ವೆಸ್ಟ್‌ ಇಂಡೀಸ್: ಕೀರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಬ್ರೆಂಡನ್ ಕಿಂಗ್, ದಿನೇಶ್ ರಾಮ್ದಿನ್, ಶೇಲ್ಡನ್ ಕಾಟ್ರೆಲ್, ಎವಿನ್ ಲೂಯಿಸ್, ಶೆರ್ಫೆನ್ ರುದರ್‌ಫೋರ್ಡ್, ಶಿಮ್ರೊನ್ ಹೆಟ್ಮೆಯರ್, ಕಾರಿ ಪೀರ್, ಲೆಂಡ್ಲ್‌ ಸಿಮನ್ಸ್, ಜೇಸನ್ ಹೋಲ್ಡರ್, ಹೇಡನ್ ವಾಲ್ಶ್ ಜೂನಿಯರ್, ಕೀಮೊ ಪಾಲ್, ಕೆಸ್ರಿಕ್ ವಿಲಿಯಮ್ಸ್.

 

ಭಾರತದ ಫೀಲ್ಡಿಂಗ್ ಕಳಪೆ: ಯುವಿ

ಶುಕ್ರವಾರ ರಾತ್ರಿ ಹೈದರಾಬಾದ್‌ನಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಫೀಲ್ಡರ್‌ಳ ಕಳಪೆ ಆಟವನ್ನು ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಟೀಕಿಸಿದ್ದಾರೆ.

‘ಈ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಬಹಳ ಕಳಪೆ ಫೀಲ್ಡಿಂಗ್ ಮಾಡಿದರು. ಚೆಂಡಿನ ವೇಗ ಮತ್ತು ಅದರತ್ತ ಕ್ರಮಿಸುವ ಫೀಲ್ಡರ್‌ಗಳ ವೇಗಕ್ಕೆ ಬಹಳ ವ್ಯತ್ಯಾಸವಿತ್ತು. ಇದರಿಂದಾಗಿ ಬಹಳಷ್ಟು ರನ್‌ಗಳು ವಿಂಡೀಸ್ ಪಾಲಾದವು’ ಎಂದು ಯುವಿ ಹೇಳಿದ್ದಾರೆ.

16ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರು ವಿಂಡೀಸ್‌ನ ಶಿಮ್ರಾನ್ ಹೆಟ್ಮೆಯರ್ (44 ರನ್‌ ಗಳಿಸಿದ್ದ ಸಂದರ್ಭ) ಅವರ ಕ್ಯಾಚ್ ಕೈಚೆಲ್ಲಿದ್ದರು. ಅವರು ಅರ್ಧಶತಕ ಗಳಿಸಿದರು. ಅದೇ ಓವರ್‌ನಲ್ಲಿ ಕೀರನ್ ಪೊಲಾರ್ಡ್ ಅವರ ಕ್ಯಾಚ್ ಅನ್ನು ರೋಹಿತ್ ಶರ್ಮಾ ಬಿಟ್ಟರು. ಪೊಲಾರ್ಡ್ 19 ಎಸೆತಗಳಲ್ಲಿ 37 ರನ್‌ಗಳನ್ನು ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು