ಬುಧವಾರ, ಜನವರಿ 22, 2020
28 °C
ಇಂದು ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಏಕದಿನ ಪಂದ್ಯ: ಗೆಲುವಿನ ಅನಿವಾರ್ಯತೆಯಲ್ಲಿ ಕೊಹ್ಲಿ ಬಳಗ

ಬಂದರು ನಗರಿಯಲ್ಲಿ ಬೆಳಗುವುದೇ ಭಾರತ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶಾಖಪಟ್ಟಣ: ಚೆಪಾಕ್‌ ಅಂಗಳದಲ್ಲಿ ಪೆಟ್ಟು ತಿಂದು ಗಾಯಗೊಂಡ ಹುಲಿಯಂತಾಗಿರುವ ಭಾರತ ತಂಡದವರು, ಬಂದರು ನಗರಿ ವಿಶಾಖಪಟ್ಟಣದಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಅಟ್ಟಹಾಸಕ್ಕೆ ಕಡಿವಾಣ ಹಾಕುವರೇ...

ಹೀಗೊಂದು ಪ್ರಶ್ನೆ ಈಗ ಭಾರತದ ಕ್ರಿಕೆಟ್‌ ಪ್ರಿಯರನ್ನು ಕಾಡುತ್ತಿದ್ದು, ಇದಕ್ಕೆ ಬುಧವಾರ ಉತ್ತರ ಸಿಗುವ ನಿರೀಕ್ಷೆ ಇದೆ.

ಉಭಯ ತಂಡಗಳ ನಡುವಣ ಎರಡನೇ ಏಕದಿನ ಪಂದ್ಯವು ಇಲ್ಲಿನ ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದು, ಈ ಹಣಾಹಣಿ ವಿರಾಟ್‌ ಬಳಗದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಸರಣಿ ಗೆಲುವಿನ ಆಸೆ ಜೀವಂತವಾಗಿ ಇಟ್ಟುಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಆತಿಥೇಯರು ಗೆಲ್ಲಲೇಬೇಕು.

2004ರ ನಂತರ ಭಾರತವು ತವರಿನಲ್ಲಿ ಸತತ ಎರಡು ಏಕದಿನ ಸರಣಿಗಳನ್ನು ಸೋತಿಲ್ಲ. ಒಂದೊಮ್ಮೆ ಬುಧವಾರ ವಿಂಡೀಸ್‌ ಎದುರು ಮಂಡಿಯೂರಿದರೆ 15 ವರ್ಷಗಳಿಂದ ಕಾಪಿಟ್ಟುಕೊಂಡು ಬಂದಿರುವ ಈ ದಾಖಲೆ ಪತನಗೊಳ್ಳುವುದು ನಿಶ್ಚಿತ. ಈ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ತಂಡ 3–2ರಿಂದ ಸೋತಿತ್ತು.

ಸ್ಪಿನ್ನರ್‌ಗಳ ಪಾಲಿನ ಸ್ವರ್ಗ ಎನಿಸಿದ್ದ ಚೆಪಾಕ್‌ನಲ್ಲಿ ಕೊಹ್ಲಿ ಹೂಡಿದ ತಂತ್ರಗಳು ಫಲಿಸಿರಲಿಲ್ಲ. ಅನುಭವಿ ರವೀಂದ್ರ ಜಡೇಜ ಮತ್ತು ಕುಲದೀಪ್‌ ಯಾದವ್‌ ವಿಕೆಟ್‌ ಉರುಳಿಸಲು ವಿಫಲರಾದರೆ, ಶಿವಂ ದುಬೆ ದುಬಾರಿಯಾಗಿದ್ದರು. 7.5 ಓವರ್‌ ಬೌಲ್‌ ಮಾಡಿದ್ದ ಅವರು 68 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಮೊಹಮ್ಮದ್‌ ಶಮಿ ಕೈಚಳಕವೂ ನಡೆದಿರಲಿಲ್ಲ. ದೀಪಕ್‌ ಚಾಹರ್‌ ಮಾತ್ರ ಎದುರಾಳಿ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದರು.

ವಿಶಾಖಪಟ್ಟಣದ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇದೆ. ಹೀಗಾಗಿ ಬೌಲಿಂಗ್‌ ವಿಭಾಗದಲ್ಲಿ ಕೊಹ್ಲಿ ಕೆಲ ಬದಲಾವಣೆಗಳನ್ನು ಮಾಡಲು ಮುಂದಾಗಬಹುದು. ಅವರು ಜಡೇಜ ಅಥವಾ ಕುಲದೀಪ್‌ ಅವರನ್ನು ಕೈಬಿಟ್ಟು ಯಜುವೇಂದ್ರ ಚಾಹಲ್‌ಗೆ ಅವಕಾಶ ನೀಡಬಹುದು.

ಬ್ಯಾಟಿಂಗ್‌ನಲ್ಲೂ ಆತಿಥೇಯರು ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ. ಆರಂಭಿಕರಾದ ರೋಹಿತ್‌ ಶರ್ಮಾ ಮತ್ತು ಕೆ.ಎಲ್‌.ರಾಹುಲ್‌ ಮೊದಲ ಪಂದ್ಯದಲ್ಲಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡಲು ವಿಫಲರಾಗಿದ್ದರು. ಕೊಹ್ಲಿ ಕೂಡ ವಿಕೆಟ್‌ ನೀಡಲು ಅವಸರಿಸಿದ್ದರು!

ವಿಶಾಖಪಟ್ಟಣದ ಅಂಗಳದಲ್ಲಿ ಕೊಹ್ಲಿ ಈ ಹಿಂದೆ ಯಶಸ್ಸು ಗಳಿಸಿದ್ದಾರೆ. ಹೀಗಾಗಿ ಅವರ ಮೇಲೆ ನಿರೀಕ್ಷೆಯ ಭಾರ ಇದೆ.  ಜೊತೆಗೆ ರೋಹಿತ್‌ ಮತ್ತು ರಾಹುಲ್‌ ಅವರೂ ಮಿಂಚಬೇಕಿದೆ.

ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್‌ ಪಂತ್‌ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಬಲ್ಲರು. ಮೊದಲ ಪಂದ್ಯದಲ್ಲಿ ಇವರು ಅರ್ಧಶತಕ ದಾಖಲಿಸಿ ತಂಡಕ್ಕೆ ಆಸರೆಯಾಗಿದ್ದರು. ಕೇದಾರ್‌ ಜಾಧವ್‌ ಮೊದಲ ಪಂದ್ಯದಲ್ಲಿ ಮಿಂಚಿರುವ ಕಾರಣ ಮನೀಷ್‌ ಪಾಂಡೆ ಮತ್ತೆ ‘ಬೆಂಚ್‌’ ಕಾಯಬೇಕಾಗಬಹುದು.

ವಿಶ್ವಾಸದಲ್ಲಿ ವಿಂಡೀಸ್‌: ಮೊದಲ ಪಂದ್ಯದಲ್ಲಿ ಭಾರತ ನೀಡಿದ್ದ 288 ರನ್‌ಗಳ ಗುರಿಯನ್ನು ಕೇವಲ ಎರಡು ವಿಕೆಟ್‌ ಕಳೆದುಕೊಂಡು ಮುಟ್ಟಿದ್ದ ಕೀರನ್‌ ಪೊಲಾರ್ಡ್‌ ಸಾರಥ್ಯದ ವಿಂಡೀಸ್‌ ತಂಡ ಈಗ ವಿಶ್ವಾಸದ ಉತ್ತುಂಗದಲ್ಲಿದೆ.

ಚೆನ್ನೈಯಲ್ಲಿ ಶಿಮ್ರೊನ್‌ ಹೆಟ್ಮೆಯರ್‌ ಮತ್ತು ಶಾಯ್‌ ಹೋಪ್‌ ಭಾರತದ ಬೌಲರ್‌ಗಳನ್ನು ಅಟ್ಟಾಡಿಸಿದ್ದರು. ಇವರನ್ನು ನಿಯಂತ್ರಿಸುವ ಸವಾಲೂ ಆತಿಥೇಯರ ಮುಂದಿದೆ.

ಸುನಿಲ್‌ ಆ್ಯಂಬ್ರಿಸ್‌, ನಿಕೋಲಸ್‌ ಪೂರನ್‌, ರಾಸ್ಟನ್‌ ಚೇಸ್‌ ಮತ್ತು ನಾಯಕ ಪೊಲಾರ್ಡ್‌ ಅವರೂ ಬ್ಯಾಟಿಂಗ್‌ನಲ್ಲಿ ಪ್ರವಾಸಿ ಪಡೆಯ ಬೆನ್ನೆಲುಬಾಗಿದ್ದಾರೆ.

ವೇಗದ ಬೌಲರ್‌ಗಳಾದ ಶೆಲ್ಡನ್‌ ಕಾಟ್ರೆಲ್‌, ಕಿಮೊ ಪಾಲ್‌ ಮತ್ತು ಅಲ್ಜಾರಿ ಜೋಸೆಫ್‌ ಅವರು ಲಯ ಕಂಡುಕೊಂಡಿರುವುದು ಕೆರಿಬಿಯನ್‌ ತಂಡಕ್ಕೆ ವರವಾಗಿ ಪರಿಣಮಿಸಿದೆ.

ಇವರು ಬುಧವಾರವೂ ಪರಿಣಾಮಕಾರಿ ದಾಳಿ ನಡೆಸಿದರೆ ಭಾರತದ ಗೆಲುವಿನ ಹಾದಿ ಕಠಿಣವಾಗಬಹುದು.

ಪ್ರಮುಖ ಮಾಹಿತಿಗಳು

- ಹೋದ ವರ್ಷ ವಿಶಾಖಪಟ್ಟಣದಲ್ಲಿ ಉಭಯ ತಂಡಗಳು ಎದುರಾಗಿದ್ದವು. ಆ ಪಂದ್ಯ ರೋಚಕ ‘ಟೈ’ ಆಗಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಭಾರತ 6 ವಿಕೆಟ್‌ಗೆ 321ರನ್‌ ಗಳಿಸಿತ್ತು. ಅಂತಿಮ ಎಸೆತದಲ್ಲಿ ವಿಂಡೀಸ್‌ ಗೆಲುವಿಗೆ ಐದು ರನ್‌ಗಳು ಬೇಕಿದ್ದವು. ಕ್ರೀಸ್‌ನಲ್ಲಿದ್ದ ಶಾಯ್‌ ಹೋಪ್‌ (123ರನ್‌) ಬೌಂಡರಿ ಬಾರಿಸಿ ಸಮಬಲಕ್ಕೆ ಕಾರಣರಾಗಿದ್ದರು.

- ಈ ಅಂಗಳದಲ್ಲಿ ನಡೆದಿರುವ ಹಿಂದಿನ ಆರು ಪಂದ್ಯಗಳಲ್ಲಿ ತಂಡವೊಂದು ಮೊದಲು ಬ್ಯಾಟ್‌ ಮಾಡಿ ಗೆದ್ದಿರುವುದು ಒಮ್ಮೆ ಮಾತ್ರ.

- ವಿಶಾಖಪಟ್ಟಣ ಮೈದಾನ, ಕೊಹ್ಲಿ ಪಾಲಿಗೆ ಅಚ್ಚುಮೆಚ್ಚು. ಈ ಅಂಗಳದಲ್ಲಿ ಐದು ಪಂದ್ಯಗಳನ್ನು ಆಡಿರುವ ಅವರು 556ರನ್‌ ಬಾರಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿವೆ.

ತಂಡಗಳು ಇಂತಿವೆ

ಭಾರತ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಮಯಂಕ್‌ ಅಗರವಾಲ್‌, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್, ಮನೀಷ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಶಿವಂ ದುಬೆ, ಕೇದಾರ್‌ ಜಾಧವ್‌, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ದೀಪಕ್‌ ಚಾಹರ್‌, ಮೊಹಮ್ಮದ್‌ ಶಮಿ ಮತ್ತು ಶಾರ್ದೂಲ್‌ ಠಾಕೂರ್‌.

ವೆಸ್ಟ್‌ ಇಂಡೀಸ್‌: ಕೀರನ್‌ ಪೊಲಾರ್ಡ್‌ (ನಾಯಕ), ಸುನಿಲ್‌ ಆ್ಯಂಬ್ರಿಸ್‌, ಶಾಯ್‌ ಹೋಪ್‌, ಖಾರಿ ಪಿಯೆರೆ, ರಾಸ್ಟನ್‌ ಚೇಸ್‌, ಅಲಜಾರಿ ಜೋಸೆಫ್‌, ಶೆಲ್ಡನ್‌ ಕಾಟ್ರೆಲ್‌, ಬ್ರೆಂಡನ್‌ ಕಿಂಗ್‌, ನಿಕೋಲಸ್‌ ಪೂರನ್‌, ಶಿಮ್ರೊನ್‌ ಹೆಟ್ಮೆಯರ್‌, ಎವಿನ್‌ ಲೂಯಿಸ್‌, ರೊಮೇರಿಯೊ ಶೆಫರ್ಡ್‌, ಜೇಸನ್‌ ಹೋಲ್ಡರ್‌, ಕಿಮೊ ಪಾಲ್‌ ಮತ್ತು ಹೇಡನ್‌ ವಾಲ್ಶ್‌ ಜೂನಿಯರ್‌.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು