ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಮಹಿಳಾ ಟ್ವೆಂಟಿ–20: ವಿಂಡೀಸ್‌ ವಿರುದ್ಧ ಭಾರತಕ್ಕೆ ರೋಚಕ ಗೆಲುವು

Last Updated 18 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್‌: ಅಂತಿಮ ಓವರ್‌ನಲ್ಲಿ ಕೈಚಳಕ ತೋರಿದ ಸ್ಪಿನ್ನರ್‌ ಪೂನಮ್‌ ಯಾದವ್‌, ಭಾರತದ ಪಾಳಯದಲ್ಲಿ ಸಂಭ್ರಮ ಉಕ್ಕಿ ಹರಿಯುವಂತೆ ಮಾಡಿದರು.

ಪೂನಮ್‌ (20ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಭಾರತ ತಂಡ ಮಹಿಳಾ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಎರಡು ರನ್‌ಗಳಿಂದ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿದೆ.

ಅಲನ್‌ ಬಾರ್ಡರ್‌ ಮೈದಾನದಲ್ಲಿ ಮಂಗಳವಾರ ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ತಂಡ ಒಂಬತ್ತನೇ ಕ್ರಮಾಂಕದ ಆಟಗಾರ್ತಿ ಶಿಖಾ ಪಾಂಡೆ (ಔಟಾಗದೆ 24; 16ಎ, 3ಬೌಂ, 1ಸಿ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 107ರನ್‌ ಕಲೆಹಾಕಿತು. ವೆಸ್ಟ್‌ ಇಂಡೀಸ್‌ ತಂಡ 7 ವಿಕೆಟ್‌ಗೆ 105ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.

ಗುರಿ ಬೆನ್ನಟ್ಟಿದ ಸ್ಟೆಫಾನಿ ಟೇಲರ್‌ ಬಳಗ ಆರನೇ ಓವರ್‌ನಲ್ಲಿ ಬ್ರಿಟ್ನಿ ಕೂಪರ್‌ (1; 18ಎ) ವಿಕೆಟ್‌ ಕಳೆದುಕೊಂಡಿತು.

ನಂತರ ಲೀ ಆ್ಯನ್ ಕಿರ್ಬಿ (42; 41ಎ, 3ಬೌಂ, 2ಸಿ) ಮತ್ತು ನಾಯಕಿ ಸ್ಟೆಫಾನಿ (16; 24ಎ, 1ಬೌಂ) ದಿಟ್ಟ ಆಟ ಆಡಿ ವಿಂಡೀಸ್‌ ಪಾಳಯದಲ್ಲಿ ಗೆಲುವಿನ ಕನಸು ಚಿಗುರೊಡೆಯುವಂತೆ ಮಾಡಿದರು.

14ನೇ ಓವರ್‌ನ ಮೊದಲ ಎಸೆತದಲ್ಲಿ ಕಿರ್ಬಿ ವಿಕೆಟ್‌ ಉರುಳಿಸಿದ ದೀಪ್ತಿ ಶರ್ಮಾ ಭಾರತದ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ನಂತರದ ಓವರ್‌ನಲ್ಲಿ ಟೇಲರ್‌ ರನ್‌ಔಟ್‌ ಆದರು. ಬಳಿಕ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿದರು.

ಕೊನೆಯ ಓವರ್‌ನಲ್ಲಿ ವಿಂಡೀಸ್‌ ಗೆಲುವಿಗೆ 11 ರನ್‌ಗಳು ಬೇಕಿದ್ದವು. ನಾಲ್ಕು ಮತ್ತು ಆರನೇ ಎಸೆತಗಳಲ್ಲಿ ಕ್ರಮವಾಗಿ ಹೇಲಿ ಮ್ಯಾಥ್ಯೂಸ್‌ (25; 21ಎ, 2ಬೌಂ, 1ಸಿ) ಮತ್ತು ಚಿನೆಲ್‌ ಹೆನ್ರಿ (17; 10ಎ, 3ಬೌಂ) ಅವರ ವಿಕೆಟ್‌ ಕಬಳಿಸಿದ ಪೂನಮ್‌ ಸಂಭ್ರಮಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ; 20 ಓವರ್‌ಗಳಲ್ಲಿ 8 ವಿಕೆಟ್‌ಗೆ 107 (ಶಫಾಲಿ ವರ್ಮಾ 12, ಹರ್ಮನ್‌ಪ್ರೀತ್‌ ಕೌರ್‌ 11, ದೀಪ್ತಿ ಶರ್ಮಾ 21, ಪೂಜಾ ವಸ್ತ್ರಕರ್‌ 13, ತಾನಿಯಾ ಭಾಟಿಯಾ 10, ಶಿಖಾ ಪಾಂಡೆ ಔಟಾಗದೆ 24; ಶಮಿಲಿಯಾ ಕಾನೆಲ್‌ 20ಕ್ಕೆ2, ಅನಿಸಾ ಮೊಹಮ್ಮದ್‌ 16ಕ್ಕೆ2).

ವೆಸ್ಟ್‌ ಇಂಡೀಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 105 (ಲೀ ಆ್ಯನ್‌ ಕಿರ್ಬಿ 42, ಸ್ಟೆಫಾನಿ ಟೇಲರ್‌ 16, ಹೇಲಿ ಮ್ಯಾಥ್ಯೂಸ್‌ 25, ಚಿನೆಲ್‌ ಹೆನ್ರಿ 17; ಶಿಖಾ ಪಾಂಡೆ 18ಕ್ಕೆ1, ದೀಪ್ತಿ ಶರ್ಮಾ 12ಕ್ಕೆ1, ಹರ್ಮನ್‌ಪ್ರೀತ್‌ ಕೌರ್‌ 15ಕ್ಕೆ1, ಪೂನಮ್‌ ಯಾದವ್‌ 20ಕ್ಕೆ3).

ಫಲಿತಾಂಶ: ಭಾರತಕ್ಕೆ ಎರಡು ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT