ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಕ್ರಮಾಂಕ ಹಿಂಬಡ್ತಿ ವಿಚಾರ: ಯಾವುದೇ ಕ್ರಮಾಂಕದಲ್ಲಿ ಆಡಲು ಸಿದ್ಧ ಎಂದ ಧವನ್

ಏಕದಿನ ಕ್ರಿಕೆಟ್
Last Updated 15 ಜನವರಿ 2020, 13:16 IST
ಅಕ್ಷರ ಗಾತ್ರ

ಮುಂಬೈ:ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ತಮ್ಮ ಎಂದಿನ ಮೂರನೇ ಕ್ರಮಾಂಕದ ಬದಲು ನಾಲ್ಕರಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದರ ಬೆನ್ನಲ್ಲೇಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ತಾವು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ.

ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಧವನ್,‘ಒಂದುವೇಳೆ ನನಗೆ ಮೂರನೇ ಕ್ರಮಾಂಕದಲ್ಲಿ ಆಡುವಂತೆ ಹೇಳಿದರೆ, ಖಂಡಿತಾ ಆಡುತ್ತೇನೆ. ನನ್ನ ದೇಶಕ್ಕಾಗಿ ಏನುಬೇಕಾದರೂ ಮಾಡುತ್ತೇನೆ’ ಎಂದಿದ್ದಾರೆ.

‘ನೀವು ಮಾನಸಿಕವಾಗಿ ಗಟ್ಟಿಯಾಗಿರಬೇಕಾಗುತ್ತದೆ.ಎಲ್ಲ ಆಟಗಾರರೂ ಮಾನಸಿಕವಾಗಿ ಸದೃಢರಿಗಿರುವುದರಿಂದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿದ್ದಾರೆ. ಕೆಲವೊಮ್ಮೆ ಅದಲುಬದಲಾಗುವ ಸ್ಥಾನಗಳಿಗೆ ಹೊಂದಿಕೊಳ್ಳಬೇಕಾಗಿ ಬರಬಹುದು. ಅದು ಆಟದ ಒಂದು ಭಾಗವೂ ಹೌದು’ ಎಂದು ಹೇಳಿದ್ದಾರೆ.

‘ಕೆ.ಎಲ್‌.ರಾಹುಲ್‌ರನ್ನು ಮೂರನೇ ಕ್ರಮಾಂಕದಲ್ಲಿ ಆಡಲು ಕಳುಹಿಸಿದ್ದು ನಾಯಕನ ನಿರ್ಧಾರ. ರಾಹುಲ್‌ ಬ್ಯಾಟಿಂಗ್ ಚೆನ್ನಾಗಿದೆ. ಕಳೆದ ಸರಣಿಯಲ್ಲಿ ಉತ್ತಮವಾಗಿ ಆಡಿದ್ದ ಅವರು ಇಲ್ಲಿಯೂ ಚೆನ್ನಾಗಿ ಆಡಿದರು. ತಾನುಯಾವ ಕ್ರಮಾಂಕದಲ್ಲಿ ಆಡಬೇಕು ಎಂಬುದು ನಾಯಕನ ಆಯ್ಕೆಗೆ ಬಿಟ್ಟದ್ದು. ಅವರು (ಕೊಹ್ಲಿ) ಮೂರನೇ ಕ್ರಮಾಂಕದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಹಾಗಾಗಿ ಬಹುಶಃ ತಮ್ಮ ನಿರ್ಧಾರವನ್ನು ಪುನರ್‌ ಪರಿಶೀಲಿಸಬಹುದು’ ಎಂದು ಹೇಳಿದ್ದಾರೆ.

ಮಧ್ಯಮ ಕ್ರಮಾಂಕದ ವೈಫಲ್ಯ ಕುರಿತು ಮಾತನಾಡಿರುವ ಅವರು, ‘ಮೊದಲ 10–15 ಓವರ್‌ಗಳನ್ನು ಚೆನ್ನಾಗಿ ನಿರ್ವಹಿಸಿದೆವು. ರಾಹುಲ್‌ ಔಟಾದ ಬಳಿಕ ರನ್‌ ಗತಿ ಹೆಚ್ಚಿಸಲು ನಿರ್ಧರಿಸಿದ್ದೆವು. ಈ ವೇಳೆನಾಲ್ಕು ವಿಕೆಟ್ ಕಳೆದುಕೊಂಡದ್ದು ದುಬಾರಿಯಾಯಿತು. ನಾವು 300 ರನ್ ಕಲೆಹಾಕುವ ಲೆಕ್ಕಾಚಾರದಲ್ಲಿದ್ದೆವು. ಆದರೆ, ಅದಕ್ಕಿಂತ ಕಡಿಮೆ ರನ್‌ ಗಳಿಸಿ ಇನಿಂಗ್ಸ್‌ ಮುಗಿಸಿದೆವು. ಬೌಲಿಂಗ್‌ನಲ್ಲಿ ಬೇಗನೆ ವಿಕೆಟ್‌ ಪಡೆಯಲು ಸಾಧ್ಯವಾಗದ್ದರಿಂದ ಅವರು (ಎದುರಾಳಿಗಳು) ನಮ್ಮ ಮೇಲೆ ಸವಾರಿ ಮಾಡಿದರು’ ಎಂದಿದ್ದಾರೆ.

ಭಾರತದ ಬ್ಯಾಟಿಂಗ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ನಿಮ್ಮ ಮೇಲೆ ಅವಲಂಬಿತವಾಗಿದೆಯೇ ಎಂಬ ಪ್ರಶ್ನೆಗೆ, ‘ನೋಡಿ ಇದೊಂದು ಕೆಟ್ಟ ದಿನ ಅಷ್ಟೆ. ಈ ಹಿಂದೆ ವೆಸ್ಟ್‌ ಇಂಡೀಸ್‌ ವಿರುದ್ಧ ಚೆನ್ನಾಗಿಯೇ ಆಡಿದ್ದೇವೆ. ಎಲ್ಲ ಬ್ಯಾಟ್ಸ್‌ಮನ್‌ಗಳೂ ಉತ್ತಮವಾಗಿ ಆಡಿದ್ದಾರೆ. ಯುವ ಆಟಗಾರ ಶ್ರೇಯಸ್‌ (ಅಯ್ಯರ್‌) ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಒಂದು ತಂಡವಾಗಿ ನಾವು ಒಬ್ಬರಿಗೊಬ್ಬರು ಬೆಂಬಲ ನೀಡುತ್ತೇವೆ. ಸೋಲನ್ನು ಅತಿಯಾಗಿ ತಲೆಗೆ ಹಾಕಿಕೊಳ್ಳುವುದಿಲ್ಲ’ ಎಂದು ಧವನ್‌ಉತ್ತರಿಸಿದರು.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಭಾರತ 255 ರನ್ ಗಳಿಸಿ ಆಲೌಟ್‌ ಆಗಿತ್ತು. ಈ ಮೊತ್ತವನ್ನು ಪ್ರವಾಸಿ ಪಡೆ ಒಂದೂ ವಿಕೆಟ್‌ ಕಳೆದುಕೊಳ್ಳದೆ ಮುಟ್ಟಿ ಜಯದ ನಗೆ ಬೀರಿತ್ತು.

ಕೆಳ ಕ್ರಮಾಂಕದಲ್ಲಿ ಆಡಿದ್ದ ವಿರಾಟ್‌ ಕೇವಲ 16 ರನ್ ಗಳಿಸಿ ಔಟಾಗಿದ್ದರು. ಆದರೆ,ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ಅವರುಬ್ಯಾಟಿಂಗ್‌ ಕ್ರಮಾಂಕ ಬದಲಾವಣೆ ನಿರ್ಧಾರವನ್ನು ಮರುಪರಿಶೀಲಿಸುವುದಾಗಿಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT