ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

INDW vs SAW | ಶೆಫಾಲಿ ಚೊಚ್ಚಲ ದ್ವಿಶತಕ, ಮಂದಾನ 149: ದಾಖಲೆ ಜೊತೆಯಾಟ

Published 28 ಜೂನ್ 2024, 10:21 IST
Last Updated 28 ಜೂನ್ 2024, 10:21 IST
ಅಕ್ಷರ ಗಾತ್ರ

ಚೆನ್ನೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಶೆಫಾಲಿ ವರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕದ ಸಾಧನೆ ಮಾಡಿದ್ದಾರೆ. ಮತ್ತೊಂದೆಡೆ ಉಪನಾಯಕಿ ಸ್ಮೃತಿ ಮಂದಾನ 149 ರನ್ ಗಳಿಸಿ ಅಬ್ಬರಿಸಿದ್ದಾರೆ.

ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕಮಾತ್ರ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಶೆಫಾಲಿ ಹಾಗೂ ಮಂದಾನ ಅತ್ಯಮೋಘ ಸಾಧನೆ ಮಾಡಿದ್ದಾರೆ.

ಟಾಸ್ ಗೆದ್ದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಶೆಫಾಲಿ ಹಾಗೂ ಮಂದಾನ ಮೊದಲ ವಿಕೆಟ್‌ಗೆ 51.6 ಓವರ್‌ಗಳಲ್ಲೇ 292 ರನ್ ಪೇರಿಸಿದರು.

ಆ ಮೂಲಕ ಮಹಿಳೆಯರ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ಅತಿ ಹೆಚ್ಚು ರನ್‌ಗಳ ಜೊತೆಯಾಟದ ದಾಖಲೆ ಬರೆದರು. ಅಲ್ಲದೆ ಯಾವುದೇ ವಿಕೆಟ್‌ಗೆ ದಾಖಲಾದ ಎರಡನೇ ಗರಿಷ್ಠ ಜೊತೆಯಾಟ ಇದಾಗಿದೆ.

ಸ್ಮೃತಿ ಮಂದಾನ 161 ಎಸೆತಗಳಲ್ಲಿ 149 ರನ್ (27 ಬೌಂಡರಿ, 1 ಸಿಕ್ಸರ್) ಗಳಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಮೃತಿ ಗಳಿಸಿದ ಎರಡನೇ ಶತಕವಾಗಿದೆ.

ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶೆಫಾಲಿ 197 ಎಸೆತಗಳಲ್ಲಿ 205 ರನ್ ಗಳಿಸಿ ರನೌಟ್ ಆದರು. ಅವರ ಇನಿಂಗ್ಸ್‌ನಲ್ಲಿ 23 ಬೌಂಡರಿ ಹಾಗೂ ಎಂಟು ಸಿಕ್ಸರ್‌ಗಳು ಸೇರಿದ್ದವು.

194 ಎಸೆತಗಳಲ್ಲಿ ದ್ವಿಶತಕ ಬಾರಿಸಿದ ಶೆಫಾಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಗಳಿಸಿದ ಹಿರಿಮೆಗೆ ಭಾಜನರಾದರು.

ಭಾರತ ದಾಖಲೆಯ ಮೊತ್ತ...

ಮೊದಲ ದಿನದಂತ್ಯಕ್ಕೆ ಭಾರತ 98 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ525 ರನ್ ಪೇರಿಸಿದೆ. ಇದು ಮಹಿಳಾ ಟೆಸ್ಟ್ ಕ್ರಿಕೆಟ್‌ನ ಪ್ರಥಮ ದಿನದಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ.

ಜೆಮಿಮಾ ರಾಡ್ರಿಗಸ್ (55) ಹಾಗೂ ಶುಭಾ ಸತೀತ್ 15 ರನ್ ಗಳಿಸಿ ಔಟ್ ಆದರು. ನಾಯಕಿ ಹರ್ಮನ್‌ಪ್ರೀತ್ ಕೌರ್ (42*) ಹಾಗೂ ರಿಚಾ ಘೋಷ್ (43*) ಕ್ರೀಸಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT