ಶುಕ್ರವಾರ, ಜನವರಿ 22, 2021
27 °C
ದುಬೈಗೆ ಬಂದಿಳಿದ ಸನ್‌ರೈಸರ್ಸ್‌ ಹೈದರಾಬಾದ್‌, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಆಟಗಾರರು

ಐಪಿಎಲ್ ಆಟಗಾರರಿಗೆ ಸುಡು ಬಿಸಿಲಿನ ಸ್ವಾಗತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಮಾಸ್ಕ್‌ ಹಾಗೂ ಮುಖಕ್ಕೆ ಶೀಲ್ಡ್‌ ಧರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ಭಾರತೀಯ ಆಟಗಾರರು ಭಾನುವಾರ ದುಬೈ ತಲುಪಿದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಆಡಲು ಬಂದ ಆಟಗಾರರನ್ನು ಸುಡುಬಿಸಿಲು ಹಾಗೂ ಒಣಹವೆ ಸ್ವಾಗತಿಸಿತು.

ಭಾರತದಲ್ಲಿ ಕೋವಿಡ್‌–19 ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ಗೆ(ಯುಎಇ) ಸ್ಥಳಾಂತರ ಮಾಡಲಾಗಿದೆ. ಅಲ್ಲಿಯ ದುಬೈ, ಅಬುಧಾಬಿ ಹಾಗೂ ಶಾರ್ಜಾ ಕ್ರೀಡಾಂಗಣಗಳಲ್ಲಿ ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಪಂದ್ಯಗಳು ನಡೆಯಲಿವೆ.

ಹೈದರಾಬಾದ್‌ ಫ್ರ್ಯಾಂಚೈಸ್‌ ಆಟಗಾರರು ಮೊದಲು ದುಬೈ ತಲುಪಿದರು. ಬಳಿಕ ಡೆಲ್ಲಿ ತಂಡದ ಆಟಗಾರರು ಮುಂಬೈ ಮೂಲಕ ಯುಎಇಗೆ ಬಂದಿಳಿದರು. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಧಿಸಿರುವ ನಿಯಮಗಳ (ಎಸ್‌ಒಪಿ) ಪ್ರಕಾರ ಈ ಎಲ್ಲ ಆಟಗಾರರು ಆರು ದಿನಗಳ ಕಡ್ಡಾಯ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಬೇಕು.

ಕ್ವಾರಂಟೈನ್ ಅವಧಿಯ 1,3 ಹಾಗೂ 6ನೇ ದಿನಗಳಂದು ಆಟಗಾರರನ್ನು ಆರ್‌ಟಿ–ಪಿಸಿಆರ್‌ (ಕೋವಿಡ್ ಸಂಬಂಧಿತ) ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಮೂರೂ ಪರೀಕ್ಷೆಗಳಲ್ಲಿ ಸೋಂಕು ಕಂಡುಬಂದಿಲ್ಲ ಎಂದಾದರೆ ಜೀವಸುರಕ್ಷಾ ವಾತಾವರಣದಲ್ಲಿ ಟೂರ್ನಿ ಆಡಲು ಅವಕಾಶ ನೀಡಲಾಗುತ್ತದೆ.

ದೀರ್ಘಕಾಲದ ಬಳಿಕ ಆಟಗಾರರನ್ನು ಭೇಟಿಯಾದ ಡೆಲ್ಲಿ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧೀರಜ್‌ ಮಲ್ಹೊತ್ರಾ ಹಾಗೂ ಸಹಾಯಕ ಕೋಚ್‌ ಮೊಹಮ್ಮದ್‌ ಕೈಫ್‌ ಅವರು ಸಂತಸ ಹಂಚಿಕೊಂಡರು.

‘ಕ್ರಿಕೆಟ್‌ ಚಟುವಟಿಕೆ ಪುನರಾರಂಭಗೊಂಡಿರುವುದು ಖುಷಿಯ ಸಂಗತಿ. ತಂಡದ ಆಟಗಾರರನ್ನು ಭೇಟಿ ಆಗಿರುವುದರಿಂದ ನಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿದಷ್ಟೇ ಸಂತಸ ತಂದಿದೆ‘ ಎಂದು ಧೀರಜ್‌ ಹೇಳಿದರು.

‘ಮೂರು ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದು, ಪ್ರತಿಯೊಬ್ಬರ ವರದಿಯು ‘ನೆಗೆಟಿವ್‌’ ಬರುವ ವಿಶ್ವಾಸವಿದೆ. ಆ ಬಳಿಕ ನಾವು ಅಭ್ಯಾಸಕ್ಕಾಗಿ ಅಂಗಣಕ್ಕಿಳಿಯಲಿದ್ದೇವೆ‘ ಎಂದು ಕೈಫ್‌ ನುಡಿದರು.

ಎರಡೂ ಫ್ರಾಂಚೈಸ್‌ಗಳು ತಮ್ಮ ಆಟಗಾರರು ಭಾರತದಿಂದ ನಿರ್ಗಮಿಸಿದ ಹಾಗೂ ದುಬೈಗೆ ತಲುಪಿದ ಚಿತ್ರಗಳನ್ನು ಹಂಚಿಕೊಂಡಿವೆ. ಚೆನ್ನೈ ಸೂಪರ್‌ ಕಿಂಗ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಕಿಂಗ್ಸ್‌ ಇಲೆವನ್‌ ಪಂಜಾಬ್‌, ಕೋಲ್ಕತ್ತ ನೈಟ್‌ ರೈಡರ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳ ಆಟಗಾರರು ಶುಕ್ರವಾರವೇ ದುಬೈಗೆ ತಲುಪಿದ್ದಾರೆ.

ಭಾರತದಿಂದ ತೆರಳುವ ವೇಳೆಯೇ ಆಟಗಾರರು ಹಲವು ಬಾರಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಟೂರ್ನಿ ನಡೆಯುವ ಸಂದರ್ಭದಲ್ಲಿ ಆಟಗಾರರು ಹಾಗೂ ನೆರವು ಸಿಬ್ಬಂದಿಗೆ ಪ್ರತಿ ಐದು ದಿನಗಳಿಗೊಮ್ಮೆ ಕೋವಿಡ್‌ ಪರೀಕ್ಷೆ ಇರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು