ಮಂಗಳವಾರ, ಅಕ್ಟೋಬರ್ 20, 2020
23 °C

ಐಪಿಎಲ್ | ಕೆಕೆಆರ್ ಚೆನ್ನಾಗಿ ಆಡದಿದ್ದರೆ ನಾಯಕತ್ವ ಬದಲಾವಣೆ; ಗವಾಸ್ಕರ್ ಸುಳಿವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋಲ್ಕತ್ತ ನೈಟ್‌ರೈಡರ್ಸ್ (ಕೆಕೆಆರ್‌) ತಂಡವು ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಆರಂಭ ಮಾಡದಿದ್ದರೆ, ನಾಯಕತ್ವ ಬದಲಾವಣೆ ಆಗಬಹುದು ಎಂದು ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್ ಸುಳಿವು ನೀಡಿದ್ದಾರೆ.

‘ಕೆಕೆಆರ್ ಆಕರ್ಷಕ ತಂಡವಾಗಿದ್ದು, ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡಿದೆ. ಮಧ್ಯಮ ಕ್ರಮಾಂಕಕ್ಕೆ ಮಾರ್ಗನ್‌ ಸೇರ್ಪಡೆಯಾಗಿರುವುದರಿಂದ ಸ್ಥಿರತೆ ಮತ್ತು ಅನುಭವವೂ ಬಂದಂತಾಗಿದೆ. ಹೀಗಾಗಿ ಅವರು ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನಾಯಕತ್ವದ ಬಗ್ಗೆ ಮಾತನಾಡಿರುವ ಅವರು, ತಂಡದ ಪ್ರದರ್ಶನದ ಆಧಾರದ ಮೇಲೆ ನಾಯಕತ್ವ ಬದಲಾವಣೆ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.

‘ಒಂದು ವೇಳೆ ಮೊದಲ ನಾಲ್ಕು–ಐದು ಪಂದ್ಯಗಳಲ್ಲಿ ಕೆಕೆಆರ್ ಒಳ್ಳೆಯ ಆರಂಭ ಮಾಡದಿದ್ದರೆ, ದಿನೇಶ್‌ ಕಾರ್ತಿಕ್‌ ಬದಲು ಮಾರ್ಗನ್‌ ನಾಯಕತ್ವ ವಹಿಸಿಕೊಳ್ಳಬಹುದು. ಏಕೆಂದರೆ ಅವರಲ್ಲಿ ಆ ಸಾಮರ್ಥ್ಯವಿದೆ’ ಎಂದಿದ್ದಾರೆ. ಮುಂದುವರಿದು, ಈ ಬಾರಿ ಹರಾಜಿನಲ್ಲಿ ₹ 15.5 ಕೋಟಿ ನೀಡಿ ಖರೀದಿಸಿರುವ ಪ್ಯಾಟ್‌ ಕಮಿನ್ಸ್ ಅವರ ಮೇಲೆ ಸಾಕಷ್ಟು ಒತ್ತಡ ಇರಲಿದೆ ಎಂದು ಹೇಳಿದ್ದಾರೆ.

‘ಟಿ20 ಕ್ರಿಕೆಟ್‌ ಪ್ರಬಲ ಆಟಗಾರ ಆಂಡ್ರೆ ರಸೆಲ್‌ ಕೆಕೆಆರ್‌ನಲ್ಲಿದ್ದಾರೆ. ಆದರೆ, ದುಬಾರಿ ಆಟಗಾರ ಪ್ಯಾಟ್‌ ಕಮಿನ್ಸ್‌ ಅವರೂ ತಂಡದಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಸರಣಿಯಲ್ಲಿ ಅವರ (ಕಮಿನ್ಸ್‌) ಪ್ರದರ್ಶನ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ. ಹಾಗಾಗಿ ಅವರ ಮೇಲೆ ಒಂದು ರೀತಿಯ ಒತ್ತಡ ಇರಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಯಾವಾಗ ನೀವು ದುಬಾರಿ ಆಟಗಾರರಾಗಿರುತ್ತೀರೋ, ಆಗ ಅಷ್ಟು ದೊಡ್ಡ ಮೊತ್ತದ ದರ ಪಟ್ಟಿಯೂ ಜೊತೆಗಿರುತ್ತದೆ. ಅವರು ಎಲ್ಲ ಪಂದ್ಯಗಳನ್ನೂ ಆಡುವರೇ? ಎಂಬುದನ್ನೂ ನಾವು ಅವಲೋಕಿಸಬೇಕು’ ಎಂದು ಹೇಳಿದ್ದಾರೆ.

2019ರ ಏಕದಿನ ವಿಶ್ವಕಪ್‌ನಲ್ಲಿ ಮಾರ್ಗನ್‌ ನಾಯಕತ್ವದಲ್ಲಿ ಆಡಿದ್ದ ಇಂಗ್ಲೆಂಡ್‌ ತಂಡ ಚೊಚ್ಚಲ ವಿಶ್ವಕಪ್‌ ಗೆದ್ದು ಇತಿಹಾಸ ಬರೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು