ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020: ಭಾರತದ ವೇಗದ ಬೌಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಾರ್ನರ್

Last Updated 9 ನವೆಂಬರ್ 2020, 7:01 IST
ಅಕ್ಷರ ಗಾತ್ರ

ಐಪಿಎಲ್‌–2020 ಟೂರ್ನಿಯ ಕ್ವಾಲಿಫೈಯರ್‌–2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 17 ರನ್ ಅಂತರದ ಸೋಲು ಕಂಡಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಆದಾಗ್ಯೂ ಈ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ.

ನಾಯಕ ಡೇವಿಡ್ ವಾರ್ನರ್, ರಶೀದ್ ಖಾನ್, ಕೇನ್ ವಿಲಿಯಮ್ಸನ್, ಜೇಸನ್ ಹೋಲ್ಡರ್, ಮನೀಶ್ ಪಾಂಡೆ ಅವರಂತಹ ಅನುಭವಿ ಆಟಗಾರರು ತಂಡ ಪ್ಲೇ ಆಫ್‌ ಹಂತಕ್ಕೇರಲು ನೆರವಾಗಿದ್ದರು. ಅದರಂತೆ ಯುವ ಆಟಗಾರರಾದ ಅಬ್ದುಲ್ ಸಮದ್, ಪ್ರಿಯಂ ಗರ್ಗ್‌, ಟಿ.ನಟರಾಜನ್ ಅವರೂ ಭರವಸೆ ಮೂಡಿಸಿದರು.

ತಂಡದ ಪ್ರಮುಖ ಬೌಲರ್‌ ಭುವನೇಶ್ವರ್ ಕುಮಾರ್‌ ಗಾಯಾಳಾಗಿ ಟೂರ್ನಿಯಿಂದ ಹೊರಬಿದ್ದರೂ ಟಿ.ನಟರಾಜನ್ ಮತ್ತು ಸಂದೀಪ್‌ ಶರ್ಮಾ ಬೌಲಿಂಗ್ ವಿಭಾಗವನ್ನು ಯಶಸ್ವಿಯಾಗಿ ಮುನ್ನಡೆಸಿದರು. ತಂಡ ಫೈನಲ್‌ಗೆ ತಲುಪಲು ಸಾಧ್ಯವಾಗಿಲ್ಲವಾದರೂ ವಾರ್ನರ್‌, ಸಹಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಮುಂಬೈ ಇಂಡಿಯನ್ಸ್‌ ಅತ್ಯುತ್ತಮ ತಂಡ. ಹಾಗೆಯೇ ಡೆಲ್ಲಿ ಮತ್ತು ಆರ್‌ಸಿಬಿ ತಂಡಗಳು ಕೂಡ. ಆದರೆ, ನಾವು ಸದ್ಯ ಇರುವ ಸ್ಥಾನದ ಬಗ್ಗೆ ಹೆಮ್ಮೆ ಇದೆ. ನಟರಾಜನ್‌ ಈ ಐಪಿಎಲ್‌ನಲ್ಲಿ ಬೆಳಕಿಗೆ ಬಂದರು ಮತ್ತು ಅಮೋಘವಾಗಿ ಆಡಿದರು. ರಶೀದ್ ಖಾನ್ ಹಾಗೂ ಮೂರನೇ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಚೆನ್ನಾಗಿ ಆಡಿದರು. ಆಲ್‌ರೌಂಡ್‌ ದೃಷ್ಟಿಯಿಂದ ನೋಡಿದರೆ ತಂಡ ಉತ್ತಮವಾಗಿತ್ತು. ನಮ್ಮ ಎಲ್ಲ ಬೆಂಬಲಿಗರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ’ ಎಂದು ಹೇಳಿದ್ದಾರೆ.

‘ಮುಖ್ಯ ವಿಚಾರವೆಂದರೆ, ಫೀಲ್ಡಿಂಗ್‌ ಮಾಡುವುದು. ನೀವು ಕ್ಯಾಚ್‌ಗಳನ್ನು ಪಡೆಯದಿದ್ದರೆ, ಗೆಲ್ಲಲು ಸಾಧ್ಯವಾಗುವುದಿಲ್ಲ. ಇದು ನಿರಾಸೆ ಮೂಡಿಸಿತು. ಹಾಗಾಗಿ ಮುಂದಿನ ಬಾರಿ ಮತ್ತಷ್ಟು ಚೆನ್ನಾಗಿ ಆಡಬೇಕಾಗಿದೆ’ ಎಂದಿದ್ದಾರೆ.

ಭುವನೇಶ್ವರ್‌ ಕುಮಾರ್‌, ವೃದ್ಧಿಮಾನ್‌ ಸಾಹ ಅವರ ಗಾಯದ ಸಮಸ್ಯೆ ಬಗ್ಗೆ ಮಾತನಾಡಿದ ವಾರ್ನರ್‌, ‘ಇದು ಕಠಿಣವಾಗಿತ್ತು. ಆದರೆ, ಉಳಿದ ಆಟಗಾರರು ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿದರು. ಅದರಿಂದಲೇ ನಾವು ಈ ಸ್ಥಾನ ಪಡೆದಿರುವುದು’ ಎಂದಿದ್ದಾರೆ.

ಫೈನಲ್‌ ಪಂದ್ಯವು ನವೆಂಬರ್‌ 10ರಂದು ದುಬೈನಲ್ಲಿ ನಡೆಯಲಿದೆ. ಮುಂಬೈ ಮತ್ತು ಡೆಲ್ಲಿ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT