ಸೋಮವಾರ, ಮೇ 23, 2022
30 °C

IPL 2021: ಚೆನ್ನೈ ಪ್ಲೇ-ಆಫ್‌ಗೆ ಪ್ರವೇಶ; ಹೈದರಾಬಾದ್ ಹೊರಕ್ಕೆ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಒಡ್ಡಿದ 135 ರನ್‌ಗಳ ಸವಾಲನ್ನು 19.4 ಓವರ್‌ಗಳಲ್ಲಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ಇದರೊಂದಿಗೆ ಮಹೇಂದ್ರ ಸಿಂಗ್ ಧೋನಿ ಬಳಗವು, 2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್‌ಗೆ ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ತ ಹೈದರಾಬಾದ್‌ನ ಪ್ಲೇ-ಆಫ್ ಕನಸು ಭಗ್ನಗೊಂಡಿದೆ. 

ಜೋಶ್ ಹೇಜಲ್‌ವುಡ್ (24ಕ್ಕೆ 3) ಹಾಗೂ ಡ್ವೇನ್ ಬ್ರಾವೊ (17ಕ್ಕೆ 2) ದಾಳಿಗೆ ಸಿಲುಕಿದ ಹೈದರಾಬಾದ್ ಏಳು ವಿಕೆಟ್ ನಷ್ಟಕ್ಕೆ 134 ರನ್ ಗಳಸಲಷ್ಟೇ ಸಮರ್ಥವಾಗಿತು. ಬಳಿಕ ಗುರಿ ಬೆನ್ನತ್ತಿದ ಚೆನ್ನೈ ತಂಡಕ್ಕೆ ಆರಂಭಿಕರಾದ ಋತುರಾಜ್ ಗಾಯಕವಾಡ್ (45) ಹಾಗೂ ಫಾಫ್ ಡು ಪ್ಲೆಸಿ (41) ಉತ್ತಮ ಅಡಿಪಾಯ ಹಾಕಿಕೊಟ್ಟರು. 

ಆದರೆ ಅಂತಿಮ ಹಂತದಲ್ಲಿ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯ ಹಂತದಲ್ಲಿ ಅಂಬಟಿ ರಾಯುಡು (17*) ಹಾಗೂ ಧೋನಿ (14*) ಗೆಲುವಿನ ದಡ ಸೇರಿಸಲು ನೆರವಾದರು. ನಾಯಕ ಧೋನಿ ಎಂದಿನಂತೆ ಸಿಕ್ಸರ್ ಎತ್ತುವುದರೊಂದಿಗೆ ಚೆನ್ನೈ ಗೆಲುವಿನ ನಗೆ ಬೀರಿತು.   

ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ 9ನೇ ಗೆಲುವಿನೊಂದಿಗೆ ಒಟ್ಟು 18 ಅಂಕಗಳನ್ನು ಸಂಪಾದಿಸಿರುವ ಚೆನ್ನೈ, ಅಧಿಕೃತವಾಗಿ ಪ್ಲೇ-ಆಫ್‌ಗೆ ಪ್ರವೇಶಿಸಿದೆ. ಅತ್ತ ಅಷ್ಟೇ ಪಂದ್ಯಗಳಲ್ಲಿ ಕೇವಲ ನಾಲ್ಕು ಅಂಕಗಳನ್ನು ಮಾತ್ರ ಹೊಂದಿರುವ ಹೈದರಾಬಾದ್, ಹೊರಬಿದ್ದಿದೆ. 

ಸಾಧಾರಣ ಮೊತ್ತ ಬೆನ್ನತ್ತಿದ ಚೆನ್ನೈ ತಂಡಕ್ಕೆ ಆರಂಭಿಕರಾದ ಋತುರಾಜ್ ಗಾಯಕವಾಡ್ ಹಾಗೂ ಫಾಫ್ ಡು ಪ್ಲೆಸಿ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 10.1 ಓವರ್‌ಗಳಲ್ಲಿ 75 ರನ್‌ಗಳ ಜೊತೆಯಾಟ ನೀಡಿದರು. 
 
ಆದರೆ ಅವರಿಬ್ಬರ ವಿಕೆಟ್‌ಗಳ ಜೊತೆಗೆ ಮೊಯಿನ್ ಅಲಿ (17) ಹಾಗೂ ಸುರೇಶ್ ರೈನಾ (2) ಪೆವಿಲಿಯನ್ ಸೇರುವುದರೊಂದಿಗೆ ಪಂದ್ಯ ರೋಚಕ ಹಂತವನ್ನು ತಲುಪಿತು. ಈ ನಡುವೆ ಮುರಿಯದ ಐದನೇ ವಿಕೆಟ್‌ಗೆ 31 ರನ್‌ಗಳ ಜೊತೆಯಾಟ ನೀಡಿದ ರಾಯುಡು ಹಾಗೂ ಧೋನಿ 19.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಲು ನೆರವಾದರು. 

ಹೈದರಾಬಾದ್ ಪರ ಜೇಸನ್ ಹೋಲ್ಡಾರ್ ಮೂರು ವಿಕೆಟ್ ಕಬಳಿಸಿದರು.  

ಹೇಜಲ್‌ವುಡ್, ಬ್ರಾವೊ ಮಿಂಚು; ಹೈದರಾಬಾದ್ ಸಾಧಾರಣ ಮೊತ್ತ...
ಈ ಮೊದಲು ಜೋಶ್ ಹೇಜಲ್‌ವುಡ್ (24ಕ್ಕೆ 3) ಹಾಗೂ ಡ್ವೇನ್ ಬ್ರಾವೊ (17ಕ್ಕೆ 2) ದಾಳಿಗೆ ನಲುಗಿದ ಹೈದರಾಬಾದ್ ಏಳು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿರುವ ಜೇಸನ್ ರಾಯ್ ಕೇವಲ 2 ರನ್ ಗಳಿಸಿ ಔಟ್ ಆದರು. ನಾಯಕ ಕೇನ್ ವಿಲಿಯಮ್ಸನ್ (11) ಅವರನ್ನು ಡ್ವೇನ್ ಬ್ರಾವೊ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಇದಾದ ಬೆನ್ನಲ್ಲೇ ಪ್ರಿಯಂ ಗಾರ್ಗ್ (7) ಸಹ ಬ್ರಾವೊ ದಾಳಿಯಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. 

ಇನ್ನೊಂದೆಡೆ ಉತ್ತಮವಾಗಿ ಆಡುತ್ತಿದ್ ಸಹಾ, ರವೀಂದ್ರ ಜಡೇಜ ಕೈಚಳಕವನ್ನು ಅರ್ಥೈಸಿಸಲಾಗದೇ ಅರ್ಧಶತಕದ ಸನಿಹದಲ್ಲಿ ಎಡವಿ ಬಿದ್ದರು. 46 ಎಸೆತಗಳನ್ನು ಎದುರಿಸಿದ ಸಹಾ 44 ರನ್ (2 ಸಿಕ್ಸರ್, 1 ಬೌಂಡರಿ) ಗಳಿಸಿದರು. 

ಅಭಿಷೇಕ್ ಶರ್ಮಾ ಹಾಗೂ ಅಬ್ದುಲ್ ಸಮದ್ ತಲಾ 18 ರನ್ ಗಳಿಸಿದರೂ ಅವರಿಬ್ಬರನ್ನು ಜೋಶ್ ಹೇಜಲ್‌ವುಡ್ ಹೊರದಬ್ಬಿದರು. 

ಕೊನೆಯ ಹಂತದಲ್ಲಿ ಅಜೇಯ 17 ರನ್ ಗಳಿಸಿದ ರಶೀದ್ ಖಾನ್ ತಂಡದ ಮೊತ್ತವನ್ನು 130ರ ಗಡಿ ದಾಟಿಸಲು ನೆರವಾದರು. 13 ಎಸೆತಗಳನ್ನು ಎದುರಿಸಿದ ರಶೀದ್ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿಗಳು ಸೇರಿದ್ದವು. ಇನ್ನುಳಿದಂತೆ ಜೇಸನ್ ಹೋಲ್ಡರ್ (5) ಹಾಗೂ ಭವನೇಶ್ವರ್ ಕುಮಾರ್ (2*) ರನ್ ಗಳಿಸಿದರು. 

ಚೆನ್ನೈ ಪರ ಜೋಶ್ ಹೇಜಲ್‌ವುಡ್ ಮೂರು ಹಾಗೂ ಡ್ವೇನ್ ಬ್ರಾವೊ ಎರಡು ವಿಕೆಟ್ ಪಡೆದು ಮಿಂಚಿದರು. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು