ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ರಾಜಸ್ಥಾನ್ ವಿರುದ್ಧ ಡೆಲ್ಲಿಗೆ 33 ರನ್ ಅಂತರದ ಜಯ

Last Updated 25 ಸೆಪ್ಟೆಂಬರ್ 2021, 16:15 IST
ಅಕ್ಷರ ಗಾತ್ರ

ಅಬುಧಾಬಿ: ಸಾಧಾರಣ ಮೊತ್ತ ಕಲೆ ಹಾಕಿದರೂ ಬೌಲಿಂಗ್‌ನಲ್ಲಿ ಎದುರಾಳಿ ತಂಡವನ್ನು ನಿಯಂತ್ರಿಸಿದ ಡೆಲ್ಲಿ ಕ್ಯಾಪಿಟಲ್ಸ್ ಇಂಡಿಯ‌ನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಅಮೋಘ ಜಯ ಸಾಧಿಸಿತು. ರಾಜಸ್ಥಾನ್ ರಾಯಲ್ಸ್ ತಂಡವನ್ನು 33 ರನ್‌ಗಳಿಂದ ಮಣಿಸಿದ ತಂಡ ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಇದು ತಂಡದ ಸತತ ನಾಲ್ಕನೇ ಜಯವಾಗಿದೆ.

155 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನ್ ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿತು. ನಂತರ ತಂಡದ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಹೀಗಾಗಿ ಆರು ವಿಕೆಟ್‌ಗಳಿಗೆ 121 ರನ್‌ ಗಲಿಸಲಷ್ಟೇ ತಂಡ ಸಮರ್ಥವಾಯಿತು.

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಸಂಜು ಸ್ಯಾಮ್ಸನ್ (70; 53 ಎಸೆತ, 8 ಬೌಂಡರಿ, 1 ಸಿಕ್ಸರ್) ಔಟಾಗದೇ ಉಳಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ಸಂಜು ಮತ್ತು ಮಹಿಪಾಲ್ ಲೊಮ್ರೊರ್ ಅವರನ್ನು ಬಿಟ್ಟರೆ ಉಳಿದ ಯಾರಿಗೂ ಎರಡಂಕಿ ಮೊತ್ತ ದಾಟಲು ಆಗಲಿಲ್ಲ.

ದಾಳಿ ನಡೆಸಿದ ಎಲ್ಲ ಬೌಲರ್‌ಗಳು ಕೂಡ ವಿಕೆಟ್ ಕಬಳಿಸಿ ಮಿಂಚಿದರು. ವಿಕೆಟ್ ಹಿಂದೆ ಕೈಚಳಕ ತೋರಿದ ರಿಷಭ್ ಪಂತ್ ಎರಡು ಕ್ಯಾಚ್‌ಗಳನ್ನು ಪಡೆದದ್ದಲ್ಲದೆ ಡೇವಿಡ್ ಮಿಲ್ಲರ್‌ ಅವರನ್ನು ಸ್ಟಂಪ್ ಔಟ್ ಮಾಡಿಯೂ ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು.

ಅಯ್ಯರ್–ಪಂತ್ ಜೊತೆಯಾಟದ ಸೊಗಸು
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮುಸ್ತಫಿಜುರ್ ರಹಿಮಾನ್ ಮತ್ತು ಚೇತನ್ ಸಕಾರಿಯ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 154 ರನ್‌ಗಳಿಗೆ ನಿಯಂತ್ರಿಸಲು ರಾಯಲ್ಸ್‌ಗೆ ಸಾಧ್ಯವಾಯಿತು.

21 ರನ್ ಗಳಿಸುವಷ್ಟರಲ್ಲಿ ಡೆಲ್ಲಿ ತಂಡ ಆರಂಭಿಕ ಜೋಡಿಯನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಆಸರೆಯಾದರು. ಮೂರನೇ ವಿಕೆಟ್‌ಗೆ 62 ರನ್‌ಗಳ ಜೊತೆಯಾಟವಾಡಿದ ಅವರು ಇನಿಂಗ್ಸ್‌ಗೆ ಚೇತರಿಕೆ ತುಂಬಿದರು. ರಿಷಭ್ ಪಂತ್ ಔಟಾದ ನಂತರ ಶಿಮ್ರಾನ್ ಹೆಟ್ಮೆಯರ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ವೇಗವಾಗಿ ರನ್ ಗಳಿಸಿಕೊಟ್ಟರು.

ರಾಜಸ್ಥಾನ್‌ಗೆ ಮೂರು ಬಾರಿ ಚೋಕ್‌
ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ವರೆಗೆ ಮೂರು ಬಾರಿ 154 ಅಥವಾ ಕಡಿಮೆ ಮೊತ್ತ ಗಳಿಸಿದ್ದರೂ ಜಯ ಗಳಿಸಿದೆ. ಈ ಮೂರು ಗೆಲುವು ಕೂಡ ರಾಜಸ್ಥಾನ್ ರಾಯಲ್ಸ್ ಎದುರು ಆಗಿತ್ತು. ಈಗ ಡೆಲ್ಲಿ ಬಳಿ 16 ಪಾಯಿಂಟ್‌ಗಳು ಇವೆ. ತಂಡ ಪ್ಲೇ ಆಫ್ ಹಂತಕ್ಕೇರಿರುವುದು ಅಧಿಕೃತವಾಗಿ ಘೋಷಣೆಯಾಗಲಿಲ್ಲ. ಆದರೆ 16 ಪಾಯಿಂಟ್‌ಗಳನ್ನು ಗಳಿಸಿದ ಯಾವ ತಂಡವೂ ಈ ವರೆಗೆ ಪ್ಲೇ ಆಫ್ ಹಂತಕ್ಕೇರದೆ ವಾಪಸಾಗಲಿಲ್ಲ ಎಂಬುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT