ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ 19ರಿಂದ ಐಪಿಎಲ್‌: ದುಬೈ ತಲುಪಿದ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು

ಸೆಪ್ಟೆಂಬರ್‌ 19ರಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್ ಕ್ರಿಕೆಟ್‌ ಟೂರ್ನಿ
Last Updated 12 ಸೆಪ್ಟೆಂಬರ್ 2021, 13:38 IST
ಅಕ್ಷರ ಗಾತ್ರ

ದುಬೈ: ಡೆಲ್ಲಿ ಕ್ಯಾಪಿಲಟ್ಸ್ ತಂಡದಲ್ಲಿ ಆಡುವ ಭಾರತದ ಆಟಗಾರರು ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾನುವಾರ ದುಬೈಗೆ ಬಂದಿಳಿದರು. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಈ ಆಟಗಾರರು ಭಾರತ ತಂಡದಲ್ಲಿದ್ದರು.

ಹೋದ ಏಪ್ರಿಲ್‌–ಮೇ ನಲ್ಲಿ ಐಪಿಎಲ್ ಟೂರ್ನಿಯ ಮೊದಲ ಹಂತವು ಭಾರತದಲ್ಲಿಯೇ ಆಯೋಜನೆಗೊಂಡಿತ್ತು. ಆದರೆ ಬಯೋಬಬಲ್‌ ವ್ಯವಸ್ಥೆಯಲ್ಲಿಯೇ ಕೊರೊನಾ ಸೋಂಕು ಹರಡಿ, ಕೆಲವು ಆಟಗಾರರು ಸೋಂಕಿತರಾಗಿದ್ದರು. ಅದರಿಂದಾಗಿ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಎರಡನೇ ಹಂತವು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಇದೇ 19ರಿಂದ ನಡೆಯಲಿದೆ.

‘ದುಬೈಗೆ ತಲುಪಿದ ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಅಕ್ಷರ್‌ ಪಟೇಲ್, ಪೃಥ್ವಿ ಶಾ ಮತ್ತು ಉಮೇಶ್ ಯಾದವ್ ಕೋವಿಡ್ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಎಲ್ಲ ಆಟಗಾರರು ನಿಯಮಗಳ ಅನ್ವಯ ಆರು ದಿನಗಳ ಕ್ವಾರಂಟೈನ್‌ಗೆ ಒಳಗಾಗುವರು. ಈ ಅವಧಿಯಲ್ಲಿ ಮೂರು ಬಾರಿ ಅವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ‘ ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್‌ ತಿಳಿಸಿದೆ.

ಕ್ವಾರಂಟೈನ್ ಬಳಿಕ ಈಗಾಗಲೇ ದುಬೈನಲ್ಲಿ ಇರುವ ತಂಡದ ಇನ್ನುಳಿದ ಆಟಗಾರರನ್ನು ಸೇರಿಕೊಳ್ಳಲಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ತಂಡವು ಮುಂಬೈ ಇಂಡಿಯನ್ಸ್ ಎದುರು ಸೋತು ರನ್ನರ್ ಅಪ್ ಆಗಿತ್ತು.

‘ಶ್ರೇಯಸ್‌ ಮರಳಿದ್ದರಿಂದ ತಂಡಕ್ಕೆ ಬಲ‘: ನಾಯಕ ಶ್ರೇಯಸ್‌ ಅಯ್ಯರ್‌ ಅವರು ಮರಳಿದ್ದರಿಂದ ತಂಡದ ಬಲ ವೃದ್ಧಿಸಿದ್ದು, ಈ ಬಾರಿಯ ಟೂರ್ನಿಯಲ್ಲಿ ಭರ್ಜರಿ ಆರಂಭದ ನಿರೀಕ್ಷೆಯಲ್ಲಿದ್ದೇವೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಶಿಖರ್ ಧವನ್ ಹೇಳಿದ್ದಾರೆ.

‘ಟೂರ್ನಿಯ ಮೊದಲಾರ್ಧದಲ್ಲಿ ನಾವು ಉತ್ತಮ ಲಯದಲ್ಲಿದ್ದೆವು. ಟೂರ್ನಿಯನ್ನು ಸ್ಥಗಿತಗೊಳಿಸಿದ ನಂತರ ಆ ಲಯ ಕಳೆದುಹೋಗಿತ್ತು. ಆ ಬಲವನ್ನು ಮರಳಿ ಪಡೆಯಬೇಕಿದೆ. ಈಗ ನಮ್ಮ ತಂಡ ಸಮತೋಲನದಲ್ಲಿದೆ. ಶ್ರೇಯಸ್‌ ಮರಳಿದ್ದು ತಂಡದ ಬಲ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ‘ ಎಂದು ಧವನ್ ಅವರು ಫ್ರಾಂಚೈಸ್‌ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್‌ ಅಯ್ಯರ್, ಐಪಿಎಲ್‌ನ ಮೊದಲಾರ್ಧದಲ್ಲಿ ಕಣಕ್ಕಿಳಿದಿರಲಿಲ್ಲ.

‘ಎದುರಾಳಿ ಆಟಗಾರರ ಮನಸ್ಥಿತಿ ಅರಿತುಕೊಳ್ಳುವೆವು’: ‘ಐಪಿಎಲ್‌ ಟೂರ್ನಿಯಲ್ಲಿ ಎದುರಾಳಿ ಆಟಗಾರರ ಮನಸ್ಥಿತಿ ಅರಿತು ಆ ಕುರಿತು ನಮ್ಮ ರಾಷ್ಟ್ರೀಯ ತಂಡಕ್ಕೆ ಮಾಹಿತಿ ನೀಡಲಿದ್ದೇವೆ. ಇದರಿಂದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ತಂಡಕ್ಕೆ ಅನುಕೂಲವಾಗಲಿದೆ ಎಂದು ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ ಶಕೀಬ್ ಅಲ್‌ ಹಸನ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಢಾಕಾದಲ್ಲಿ ಮಾತನಾಡಿರುವ ಅವರು ‘ಐಪಿಎಲ್‌ ಎಲ್ಲರಿಗೂ ಅನುಕೂಲವಾಗಲಿದೆ ಎಂಬ ನಂಬಿಕೆ ನನ್ನದು. ಬೌಲರ್‌ ಮುಸ್ತಫಿಜುರ್ ರೆಹಮಾನ್‌ ಮತ್ತು ನಾನು ನಮ್ಮ ತಂಡದ ಇನ್ನುಳಿದ ಆಟಗಾರರಿಗೆ ಐಪಿಎಲ್‌ ಅನುಭವವನ್ನು ಹಂಚಿಕೊಳ್ಳಲಿದ್ದೇವೆ‘ ಎಂದಿದ್ದಾರೆ.

ಐಪಿಎಲ್‌ನಲ್ಲಿ ಶಕೀಬ್ ಕೋಲ್ಕತ್ತ ನೈಟ್‌ ರೈಡರ್ಸ್‌ ಪರ ಮತ್ತು ಮುಸ್ತಫಿಜುರ್ ಅವರು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT