ಸೋಮವಾರ, ಅಕ್ಟೋಬರ್ 18, 2021
26 °C

IPL 2021: ಹೈದರಾಬಾದ್ ವಿರುದ್ಧ ಗೆದ್ದ ಮುಂಬೈ; ಈಡೇರಲಿಲ್ಲ ಪ್ಲೇ-ಆಫ್ ಕನಸು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ42 ರನ್ ಅಂತರದ ಗೆಲುವು ದಾಖಲಿಸಿದರೂ ಮುಂಬೈ ಇಂಡಿಯನ್ಸ್ ತಂಡವು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿದೆ. 

ಇದರೊಂದಿಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ-ಆಫ್ ಕನಸು ಭಗ್ನಗೊಂಡಿದೆ. ಅತ್ತ ಕೋಲ್ಕತ್ತ ನೈಟ್ ರೈಡರ್ಸ್ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದೆ. 

ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲು ಈ ಪಂದ್ಯದಲ್ಲಿ ಮುಂಬೈ 170ಕ್ಕೂ ಹೆಚ್ಚು ರನ್‌ಗಳ ಗೆಲುವು ದಾಖಲಿಸಬೇಕಿತ್ತು. ಇದಕ್ಕೆ ತಕ್ಕಂತೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ  ಮುಂಬೈ, ಇಶಾನ್ ಕಿಶನ್ (84) ಹಾಗೂ ಸೂರ್ಯಕುಮಾರ್ ಯಾದವ್ (82) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 235 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.  ಇಶಾನ್ 32 ಎಸೆತಗಳಲ್ಲಿ 84 ರನ್ ಹಾಗೂ ಸೂರ್ಯಕುಮಾರ್ 40 ಎಸೆತಗಳಲ್ಲಿ 82 ರನ್ ಗಳಿಸಿದರು. 

ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್ ಮನೀಶ್ ಪಾಂಡೆ ಅರ್ಧಶತಕದ (69*) ಹೊರತಾಗಿಯೂ ಎಂಟು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಸಮರ್ಥವಾಯಿತು.   

ಮುಂಬೈ ಅಬ್ಬರ, ಹೈದರಾಬಾದ್‌ಗೆ ಸೋಲು...
ಬೃಹತ್ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಆರಂಭಿಕರಾದ ಜೇಸನ್ ರಾಯ್ ಹಾಗೂ ಅಭಿಷೇಕ್ ಶರ್ಮಾ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 32 ಎಸೆತಗಳಲ್ಲಿ 64 ರನ್‌ಗಳ ಜೊತೆಯಾಟ ಕಟ್ಟಿದರು. 21 ಎಸೆತಗಳನ್ನು ಎದುರಿಸಿದ ರಾಯ್ ಆರು ಬೌಂಡರಿಗಳ ನೆರವಿನಿಂದ 34 ರನ್ ಗಳಿಸಿದರು. 

ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್ ಶರ್ಮಾ ಕೂಡಾ 33 ರನ್ ಗಳಿಸಿ ಔಟಾದರು. 16 ಎಸೆತಗಳನ್ನು ಎದುರಿಸಿದ ಅಭಿಷೇಕ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. 

ಮೊಹಮ್ಮದ್ ನಬಿ (3) ಹಾಗೂ ಅಬ್ದುಲ್ ಸಮದ್ (2) ನಿರಾಸೆ ಮೂಡಿಸದರು. ಅತ್ತ ಕನ್ನಡಿಗ ಮನೀಶ್ ಪಾಂಡೆ ಬಿರುಸಿನ ಆಟದ ಮೂಲಕ ಗಮನ ಸೆಳೆದರು. ಆದರೆ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ದೊರಕದೇ ನಿರಾಸೆ ಅನುಭವಿಸಿದರು.

ಅಲ್ಲದೆ ತಮ್ಮ ವಿರುದ್ಧದ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದರು. ಅಂತಿಮವಾಗಿ ಹೈದರಾಬಾದ್ ಎಂಟು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಸಾಧ್ಯವಾಯಿತು. 41 ಎಸೆತಗಳನ್ನು ಎದುರಿಸಿದ ಮನೀಶ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 69 ರನ್ ಗಳಿಸಿ ಅಜೇಯರಾಗುಳಿದರು. ಇನ್ನುಳಿದಂತೆ ಜೇಸನ್ ಹೋಲ್ಡರ್ (1), ರಶೀದ್ ಖಾನ್ (9), ವೃದ್ಧಿಮಾನ್ ಸಹಾ (2) ನಿರಾಸೆ ಮೂಡಿಸಿದರು. 

ಇಶಾನ್ 84, ಸೂರ್ಯ 82; ಮುಂಬೈ 235/9
ಈ ಮೊದಲು ಮುಂಬೈಗೆ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಬಿರುಸಿನ ಆರಂಭವೊದಗಿಸಿದರು. ರೋಹಿತ್‌ಗಿಂತಲೂ ಬಿರುಸಿನಿಂದ ಬ್ಯಾಟ್ ಬೀಸಿದ ಇಶಾನ್ ಕೇವಲ 16 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು. 

ರೋಹಿತ್ ಹಾಗೂ ಇಶಾನ್ ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲಿ 80 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ 18 ರನ್ ಗಳಿಸಿದ ರೋಹಿತ್ ಔಟಾದರು. 

ಅತ್ತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್, ಹೈದರಾಬಾದ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಪರಿಣಾಮ 7.1 ಓವರ್‌ಗಳಲ್ಲೇ ತಂಡದ ಮೊತ್ತ 100ರ ಗಡಿ ದಾಟಿತು. 

ಈ ನಡುವೆ ಹಾರ್ದಿಕ್ ಪಾಂಡ್ಯ (10) ನಿರಾಸೆ ಮೂಡಿಸಿದರು. ಇನ್ನೊಂದೆಡೆ ಬಿರುಸಿನ ಆಟ ಪ್ರದರ್ಶಿಸಿದ ಇಶಾನ್ ಶತಕದ ಸನಿಹದಲ್ಲಿ ಎಡವಿ ಬಿದ್ದರು. ಇಶಾನ್‌ ವಿಕೆಟ್ ಯುವ ವೇಗಿ ಉಮ್ರಾನ್ ಮಲಿಕ್ ಪಾಲಾಯಿತು. 32 ಎಸೆತಗಳನ್ನು ಎದುರಿಸಿದ ಇಶಾನ್ 11 ಬೌಂಡರಿ ಹಾಗೂ ನಾಲ್ಕು ಮನಮೋಹಕ ಸಿಕ್ಸರ್ ನೆರವಿನಿಂದ 84 ರನ್ ಗಳಿಸಿದರು. 

ನಿರ್ಣಾಯಕ ಪಂದ್ಯದಲ್ಲಿ ಕೀರನ್ ಪೊಲಾರ್ಡ್ (13) ಬ್ಯಾಟ್ ಕೂಡ ಸದ್ದು ಮಾಡಲಿಲ್ಲ. ಜೇಮ್ಸ್ ನೀಶಮ್ (0) ಸಹ ಪೆವಿಲಿಯನ್ ಸೇರುವುದರೊಂದಿಗೆ ಮುಂಬೈ 13 ಓವರ್‌ಗಳಲ್ಲಿ 151 ರನ್ನಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. 

ಅಂತಿಮ ಹಂತದಲ್ಲಿ ಬಿರುಸಿನ ಆಟವಾಡಿದ ಸೂರ್ಯಕುಮಾರ್ ಯಾದವ್ ಮುಂಬೈ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸೂರ್ಯಕುಮಾರ್ ಯಾದವ್ ಫಾರ್ಮ್‌ಗೆ ಮರಳಿದರು. 

ಅಲ್ಲದೆ ಮುಂಬೈ ಒಂಬತ್ತು ವಿಕೆಟ್ ನಷ್ಟಕ್ಕೆ 235 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು. 40 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ 13 ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್ ನೆರವಿನಿಂದ 82 ರನ್ ಗಳಿಸಿದರು. ಇನ್ನುಳಿದಂತೆ ಕೃಣಾಲ್ ಪಾಂಡ್ಯ (9), ನಥನ್ ಕೌಲ್ಟರ್ ನೈಲ್ (3), ಪಿಯೂಷ್ ಚಾವ್ಲಾ (0), ಹಾಗೂ ಜಸ್‌ಪ್ರೀತ್ ಬೂಮ್ರಾ (5*)ರನ್ ಗಳಿಸಿದರು. 

ಹೈದರಾಬಾದ್ ಪರ ಜೇಸನ್ ಹೋಲ್ಡರ್ 53 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು