ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಇದರೊಂದಿಗೆ ಮಹೇಂದ್ರ ಸಿಂಗ್ ಧೋನಿ ಬಳಗವನ್ನು ಹಿಂದಿಕ್ಕಿರುವ ರಿಷಭ್ ಪಂತ್ ಪಡೆಯು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಅಂಬಟಿ ರಾಯುಡು ಅಜೇಯ ಅರ್ಧಶತಕದ (55*) ಹೊರತಾಗಿಯೂ ಐದು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಳಿಕ ಗುರಿ ಬೆನ್ನತ್ತಿದ ಡೆಲ್ಲಿ, ಶಿಖರ್ ಧವನ್ (39) ಹಾಗೂ ಶಿಮ್ರೊನ್ ಹೆಟ್ಮೆಯರ್ (28*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 19.4 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.
ಈ ಗೆಲುವಿನೊಂದಿಗೆ 13 ಪಂದ್ಯಗಳಲ್ಲಿ 10ನೇ ಗೆಲುವಿನೊಂದಿಗೆ ಒಟ್ಟು 20 ಅಂಕಗಳನ್ನು ಸಂಪಾದಿಸಿರುವ ಡೆಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಚೆನ್ನೈ ಅಷ್ಟೇ ಪಂದ್ಯಗಳಲ್ಲಿ 18 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಪೃಥಿ ಶಾ ಹಾಗೂ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿದರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಪೃಥ್ವಿ (18) ವಿಕೆಟ್ ಪತನವಾಯಿತು. ಅತ್ತ ದೀಪಕ್ ಚಾಹರ್ ಎಸೆದ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ ಧವನ್ 21 ರನ್ ಸೊರೆಗೈದರು.
ಇನ್ನೊಂದೆಡೆ ಶ್ರೇಯಸ್ ಅಯ್ಯರ್ (2) ನಿರಾಸೆ ಮೂಡಿಸಿದರು. ನಾಯಕ ರಿಷಭ್ ಪಂತ್ (15) ಹಾಗೂ ಚೊಚ್ಚಲ ಪಂದ್ಯ ಆಡುತ್ತಿರುವ ರಿಪಾಲ್ ಪಟೇಲ್ (18) ಉತ್ತಮ ಆರಂಭ ಪಡೆದರೂ ದೊಡ್ಡ ಹೊಡೆತಕ್ಕೆ ಮುಂದಾಗಿ ತಮ್ಮದೇ ತಪ್ಪಿನಿಂದಾಗಿ ವಿಕೆಟ್ ಒಪ್ಪಿಸಿದರು.
ಈ ನಡುವೆ ಒಂದೇ ಓವರ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದ ಶಿಖರ್ ಧವನ್ (39) ಹಾಗೂ ಆರ್. ಅಶ್ವಿನ್ (2) ಹೊರದಬ್ಬಿದ ಶಾರ್ದೂಲ್ ಠಾಕೂರ್ ಡಬಲ್ ಆಘಾತ ನೀಡಿದರು. ಪರಿಣಾಮ 15 ಓವರ್‌ಗಳಲ್ಲಿ 99 ರನ್ನಿಗೆ ಆರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಕೊನೆಯ ಹಂತದಲ್ಲಿ ಕೇವಲ 18 ಎಸೆತಗಳಲ್ಲಿ 28 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದ ಶಿಮ್ರೊನ್ ಹೆಟ್ಮೆಯರ್ ಡೆಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು, ಇನ್ನುಳಿದಂತೆ ಅಕ್ಷರ್ ಪಟೇಲ್ (5) ಹಾಗೂ ಕಗಿಸೊ ರಬಾಡ (4*) ರನ್ ಗಳಿಸಿದರು.
ಇದರೊಂದಿಗೆಇನ್ನು ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ನಿರ್ಣಾಯಕ ಹಂತದಲ್ಲಿ ಹೆಟ್ಮೆಯರ್ ಕ್ಯಾಚ್ ಅನ್ನು ಬದಲಿ ಆಟಗಾರ ಕೆ. ಗೌತಮ್ ಕೈಚೆಲ್ಲಿರುವುದು ಚೆನ್ನೈಗೆ ಹಿನ್ನಡೆಯಾಗಿ ಪರಿಣಮಿಸಿತು. ಚೆನ್ನೈ ಪರ ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.
ಚೆನ್ನೈ ಸಾಧಾರಣ ಮೊತ್ತ 136/5...
ಈ ಮೊದಲು ಡೆಲ್ಲಿ ಬೌಲರ್‌ಗಳು ಎದುರು ಅಮೋಘ ಫಾರ್ಮ್‌ನಲ್ಲಿರುವ ಋತುರಾಜ್ ಗಾಯಕವಾಡ್ ಹಾಗೂ ಫಾಫ್ ಡು ಪ್ಲೆಸಿ ಆಟ ನಡೆಯಲಿಲ್ಲ. ಕಳೆದ ಪಂದ್ಯದ ಶತಕವೀರ ಗಾಯಕವಾಡ್ ಕೇವಲ 13 ರನ್ ಗಳಿಸಿ ಔಟ್ ಆದರು. ಡು ಪ್ಲೆಸಿ ಸಹ 10 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಸುರೇಶ್ ರೈನಾ ಸ್ಥಾನದಲ್ಲಿ ಅವಕಾಶ ಪಡೆದಿದ್ದ ರಾಬಿನ್ ಉತ್ತಪ್ಪ (19) ಓಟಕ್ಕೆ ಸ್ಪಿನ್ನರ್ ಆರ್. ಅಶ್ವಿನ್ ಕಡಿವಾಣ ಹಾಕಿದರು. ಮೊಯಿನ್ ಅಲಿ (5) ಅವರು ಅಕ್ಷರ್ ಪಟೇಲ್ ಬಲೆಗೆ ಬಿದ್ದರು.
ಈ ಹಂತದಲ್ಲಿ ಜೊತೆಗೂಡಿದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಅಂಬಟಿ ರಾಯುಡು ತಂಡವನ್ನು ನಿಧಾನ ಗತಿಯಲ್ಲಿ ಮುನ್ನಡೆಸಿದರು. ಐದನೇ ವಿಕೆಟ್‌ಗೆ 70 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದರೂ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ.
ರಾಯುಡು 43 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿ ಔಟಾಗದೆ ಉಳಿದರು. ಇನ್ನೊಂದೆಡೆ ಧೋನಿ 27 ಎಸೆತಗಳಲ್ಲಿ 18 ರನ್ ಮಾತ್ರ ಗಳಿಸಿದರು.
ಡೆಲ್ಲಿ ಪರ ಅಕ್ಷರ್ ಪಟೇಲ್ ಎರಡು ಮತ್ತು ಏನ್ರಿಚ್ ನಾರ್ಕಿಯಾ, ಆರ್. ಅಶ್ವಿನ್ ಹಾಗೂ ಆವೇಶ್ ಖಾನ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.