ಶನಿವಾರ, ಮೇ 8, 2021
27 °C
ಕ್ರಿಕೆಟ್ ಜಗತ್ತಿನ ಪ್ರಬುದ್ಧ ನಾಯಕರ ಮುಖಾಮುಖಿ: ಕೆಕೆಆರ್‌ಗೆ ಬ್ಯಾಟಿಂಗ್ ವೈಫಲ್ಯದ ಚಿಂತೆ

IPL 2021 | RCB vs KKR: ಆರ್‌ಸಿಬಿಗೆ ಹ್ಯಾಟ್ರಿಕ್ ಜಯದ ಕನಸು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಸತತ ಎರಡು ಪಂದ್ಯಗಳಲ್ಲಿ ಅಧಿಕಾರಯುತ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಕನಸಿನೊಂದಿಗೆ ಭಾನುವಾರ ಕಣಕ್ಕೆ ಇಳಿಯಲಿದೆ. 

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಗಳಕ್ಕೆ ಏಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತ ನೈಟ್‌ ರೈಡರ್ಸ್ ತಂಡ ಎದುರಾಳಿ. ಈ ಪಂದ್ಯ ಕ್ರಿಕೆಟ್ ಲೋಕದ ಇಬ್ಬರು ಪ್ರಬುದ್ಧ ಮತ್ತು ಚಾಣಾಕ್ಷ ನಾಯಕರ ನಡುವಿನ ಹಣಾಹಣಿಯೂ ಆಗಲಿದೆ. ಎರಡು ಪಂದ್ಯಗಳಲ್ಲಿ ಛಲ ಬಿಡದೆ ಕಾದಾಡಿ ಗೆದ್ದಿರುವುದು ಬೆಂಗಳೂರು ತಂಡದ ಆತ್ಮಸ್ಥೈರ್ಯ ಹೆಚ್ಚಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಕೋಲ್ಕತ್ತ ಪಾಳಯದಲ್ಲಿ ಚಿಂತೆಗೆ ಕಾರಣವಾಗಿದೆ.

ಮೊದಲ ಪಂದ್ಯದಲ್ಲಿ 10 ರನ್‌ಗಳಿಂದ ಹೈದರಾಬಾದ್ ವಿರುದ್ಧ ಜಯ ಗಳಿಸಿದ್ದ ಕೋಲ್ಕತ್ತ ನೈಟ್ ರೈಡರ್ಸ್‌ ಮುಂಬೈ ಎದುರಿನ ಎರಡನೇ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿತ್ತು. ಆದರೆ ಕೊನೆಯ ಓವರ್‌ಗಳಲ್ಲಿ ಮುಗ್ಗರಿಸಿ 10 ರನ್‌ಗಳಿಂದ ಸೋಲಿಗೆ ಶರಣಾಗಿತ್ತು.

ಇದನ್ನೂ ಓದಿ: 

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಕೋಲ್ಕತ್ತ ತಂಡ ಮುಂಬೈ ಎದುರು ಸೋತಿತ್ತು. ತಂತ್ರಗಳನ್ನು ಹೂಡುವಲ್ಲಿ ಮತ್ತು ಆಟಗಾರರನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬಲ್ಲ ಏಯಾನ್ ಮಾರ್ಗನ್ ಲೋಪಗಳನ್ನು ಸರಿ‍ಪಡಿಸಿ ಗೆಲುವಿನ ಹಾದಿಯಲ್ಲಿ ತಂಡವನ್ನು ಕರೆದೊಯ್ಯಲು ಪ್ರಯತ್ನಿಸಲಿದ್ದಾರೆ.

ತಂಡದ ಆಲ್‌ರೌಂಡರ್ ಆ್ಯಂಡ್ರೆ ರಸೆಲ್‌ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಹೊಸ ಹೊಣೆಯನ್ನು ಹೊತ್ತುಕೊಂಡಿದ್ದು ಯಶಸ್ಸು ಸಾಧಿಸಿದ್ದಾರೆ. ಎರಡು ಪಂದ್ಯಗಳಲ್ಲಿ ಒಟ್ಟು ಆರು ವಿಕೆಟ್ ಉರುಳಿಸಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ಅವರಿಂದ ನಿರೀಕ್ಷಿತ ಸಾಮರ್ಥ್ಯ ಕಂಡುಬರುತ್ತಿಲ್ಲ. ಉಪನಾಯಕ ದಿನೇಶ್ ಕಾರ್ತಿಕ್ ಕೂಡ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಈಗ ಒತ್ತಡದಲ್ಲಿದ್ದಾರೆ. ನಿತೀಶ್ ರಾಣಾ ಅವರು ಅಮೋಘ ಬ್ಯಾಟಿಂಗ್ ಮಾಡಿದ್ದು ಅವರ ಆರಂಭಿಕ ಜೋಡಿ ಶುಭಮನ್ ಗಿಲ್ ಗಮನ ಸೆಳೆಯಲು ವಿಫಲರಾಗಿದ್ದಾರೆ.‌

ಯಾವುದೇ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಬಲ್ಲ ಬ್ಯಾಟಿಂಗ್ ಪಡೆ ಆರ್‌ಸಿಬಿಯಲ್ಲಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ದೇವದತ್ತ ಪಡಿಕ್ಕಲ್ ಮುಂತಾದವರನ್ನು ನಿಯಂತ್ರಿಸಲು ಕುಲದೀಪ್ ಯಾದವ್ ಮತ್ತು ಹರಭಜನ್ ಸಿಂಗ್ ಬೆವರು ಸುರಿಸಬೇಕಾದೀತು. ಆರ್‌ಸಿಬಿ ಬೌಲರ್‌ಗಳಾದ ಶಹಬಾಜ್ ಅಹಮ್ಮದ್ ಮತ್ತು ಹರ್ಷಲ್ ಪಟೇಲ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮುಂಬೈ ಮತ್ತು ಸನ್‌ರೈಸರ್ಸ್‌ ತಂಡಗಳನ್ನು ನಿಯಂತ್ರಿಸುವಲ್ಲಿ ಇವರಿಬ್ಬರು ಪ್ರಮುಖ ಪಾತ್ರ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು