ಗುರುವಾರ , ಮೇ 13, 2021
16 °C

IPL 2021: ಮ್ಯಾಕ್ಸ್‌ವೆಲ್, ಎಬಿ ಡಿ ಅಬ್ಬರದ ಮುಂದೆ ಕೆಕೆಆರ್ ಠುಸ್ ಪಟಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಗ್ಲೆನ್ ಮ್ಯಾಕ್ಸ್‌ವೆಲ್ (78) ಹಾಗೂ ಎಬಿ ಡಿ ವಿಲಿಯರ್ಸ್ (76*) ಬಿರುಸಿನ ಅರ್ಧಶತಕಗಳ ನೆರವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 38 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಐಪಿಎಲ್ 14ನೇ ಆವೃತ್ತಿಯಲ್ಲಿ ಸತತ ಮೂರನೇ ಗೆಲುವು ಬಾರಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ಮ್ಯಾಕ್ಸ್‌ವೆಲ್ ಹಾಗೂ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ನರೆವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 204 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ ಕೋಲ್ಕತ ಯಾವ ಹಂತದಲ್ಲೂ ಹೋರಾಟದ ಮನೋಭಾವ ತೋರಲೇ ಇಲ್ಲ. ಅಂತಿಮವಾಗಿ ಎಂಟು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆರ್‌ಸಿಬಿ ಪರ ಮ್ಯಾಕ್ಸ್‌ವೆಲ್ 49 ಎಸೆತಗಳಲ್ಲಿ 78 ರನ್ ಬಾರಿಸಿದರೆ ಅದಕ್ಕಿಂತಲೂ ಬಿರುಸಾಗಿ ಬ್ಯಾಟ್ ಬೀಸಿದ ಎಬಿಡಿ 34 ಎಸೆತಗಳಲ್ಲಿ ಅಜೇಯ 76 ರನ್ ಸಾಧನೆ ಮಾಡಿದರು. 

ಕೆಕೆಆರ್ ಪರ ನಿತೀಶ್ ರಾಣಾ (18), ಶುಭಮನ್ ಗಿಲ್ (21), ರಾಹುಲ್ ತ್ರಿಪಾಠಿ (25), ಏಯಾನ್ ಮಾರ್ಗನ್ (29), ಶಕೀಬ್ ಅಲ್ ಹಸನ್ (26) ಹಾಗೂ ಆ್ಯಂಡ್ರೆ ರಸೆಲ್ (31) ಉತ್ತಮ ಆರಂಭವನ್ನು ಪಡೆದರು ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗಲಿಲ್ಲ. ಆರ್‌ಸಿಬಿ ಪರ ಕೈಲ್ ಜೇಮಿಸನ್ ಮೂರು ಮತ್ತು ಯಜುವಂದ್ರ ಚಾಹಲ್ ಮತ್ತು ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು. 

ಮ್ಯಾಕ್ಸ್‌ವೆಲ್ 78, ವಿಲಿಯರ್ಸ್ 76*; ಆರ್‌ಸಿಬಿ 204/4
ಚೆನ್ನೈನ ಎಂ.ಎ. ಚಿದಂಬರಂ ಮೈದಾನದಲ್ಲಿ ಚೇಸ್ ಮಾಡುವುದು ಕಷ್ಟ ಎಂಬುದನ್ನು ಮನಗಂಡಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ನಾಯಕನ ನಿರ್ಣಯ ಆರಂಭದಲ್ಲೇ ಸರಿಯೆನಿಸಲಿಲ್ಲ. 

ಪಂದ್ಯದ ಎರಡನೇ ಓವರ್‌ನಲ್ಲಿ ಕೊಹ್ಲಿ (5) ಹಾಗೂ ರಜತ್ ಪಾಟೀದಾರ್ (1) ಅವರನ್ನು ಹೊರದಬ್ಬಿದ ವರುಣ್ ಚಕ್ರವರ್ತಿ ಡಬಲ್ ಆಘಾತ ನೀಡಿದರು. ಈ ಹಂತದಲ್ಲಿ ಜೊತೆಗೂಡಿದ ದೇವದತ್ತ ಪಡಿಕ್ಕಲ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಂಡವನ್ನು ಮುನ್ನಡೆಸಿದರು. 

ಪಡಿಕ್ಕಲ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಮ್ಯಾಕ್ಸ್‌ವೆಲ್ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದರು. ಆರ್‌ಸಿಬಿ ಕ್ಯಾಂಪ್ ಸೇರಿಕೊಂಡ ಬಳಿಕ ಅಮೋಘ ಫಾರ್ಮ್ ಮುಂದುವರಿಸಿದ ಮ್ಯಾಕ್ಸ್‌ವೆಲ್ ಕೇವಲ 28 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದರು. ಇದು ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ಸಿಡಿದ 8ನೇ ಅರ್ಧಶತಕವಾಗಿದೆ. 

25 ರನ್ ಗಳಿಸಿದ ಪಡಿಕ್ಕಲ್ ಔಟ್ ಆಗುವುದರೊಂದಿಗೆ 86 ರನ್‌ಗಳ ಜೊತೆಯಾಟವು ಮುರಿತುಬಿತ್ತು. ಈ ಹಂತದಲ್ಲಿ ಜೊತೆಗೂಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ಜೋಡಿಯು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 

ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ನಾಲ್ಕನೇ ವಿಕೆಟ್‌ಗೆ 53 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 49 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 78 ರನ್ ಗಳಿಸಿದರು. ಅವರ ಈ ಮನಮೋಹಕ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. 

ಚೆನ್ನೈನ ಕಠಿಣ ಪಿಚ್‌ನಲ್ಲೂ ಕೆಕೆಆರ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ಮ್ಯಾಕ್ಸ್‌ವೆಲ್ ಹಾಗೂ ಎಬಿಡಿ, ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 204 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು. 

ಎಬಿ ಡಿ ವಿಲಿಯರ್ಸ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಫಿಫ್ಟಿ ಸಾಧನೆಯ ಬಳಿಕ ಮತ್ತಷ್ಟು ಬಿರುಸಾಗಿ ಬ್ಯಾಟ್ ಬೀಸಿದರು. ಅಲ್ಲದೆ 34 ಎಸೆತಗಳಲ್ಲಿ 76 ರನ್ ಗಳಿಸಿ ಅಜೇಯರಾಗುಳಿದರು. ಕಾಕತಾಳೀಯವೆಂಬಂತೆ ವಿಲಿಯರ್ಸ್ ಹಾಗೂ ಮ್ಯಾಕ್ಸ್‌ವೆಲ್ ಇನ್ನಿಂಗ್ಸ್‌ನಲ್ಲಿ ತಲಾ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸಿಡಿದಿದ್ದವು. 

ಇದು ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ಸಿಡಿದ ಎಂಟನೇ ಅರ್ಧಶತಕ ಸಾಧನೆಯಾಗಿದೆ. ಅತ್ತ ವಿಲಿಯರ್ಸ್ 39ನೇ ಬಾರಿಗೆ ಫಿಫ್ಟಿ ಗೆರೆ ದಾಟಿದರು. ಇನ್ನುಳಿದಂತೆ ಕೈಲ್ ಜೇಮಿಸನ್ 11 ರನ್ ಗಳಿಸಿ ಅಜೇಯರಾಗುಳಿದರು. ಕೆಕೆಆರ್ ಪರ ವರುಣ್ ಚಕ್ರವರ್ತಿ ಎರಡು ವಿಕೆಟ್ ಪಡೆದರು. 
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು