ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಪಂಜಾಬ್ ಗೆಲುವಿನಲ್ಲಿ ಕನ್ನಡಿಗರ ಮಿಂಚು; ಪ್ಲೇ-ಆಫ್ ಕನಸು ಜೀವಂತ!

Last Updated 1 ಅಕ್ಟೋಬರ್ 2021, 18:19 IST
ಅಕ್ಷರ ಗಾತ್ರ

ದುಬೈ: ಕನ್ನಡಿಗರಾದ ನಾಯಕ ಕೆ.ಎಲ್. ರಾಹುಲ್ (67) ಹಾಗೂ ಮಯಂಕ್ ಅಗರವಾಲ್ (40) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕೋಲ್ಕತ್ತ, ವೆಂಕಟೇಶ್ ಅಯ್ಯರ್ ಅರ್ಧಶತಕದ (67) ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 165 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.

ಬಳಿಕ ನಾಯಕನ ಆಟವಾಡಿದ ರಾಹುಲ್ ಹಾಗೂ ಮಯಂಕ್ ನೆರವಿನಿಂದ ಪಂಜಾಬ್ ತಂಡವು ಇನ್ನು ಮೂರು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.

ಇದರೊಂದಿಗೆ ಆಡಿರುವ 12 ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ ಒಟ್ಟು 10 ಅಂಕಗಳನ್ನು ಸಂಪಾದಿಸಿರುವ ಪಂಜಾಬ್, ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಅಷ್ಟೇ ಪಂದ್ಯಗಳಲ್ಲಿ 10 ಅಂಕಗಳನ್ನು ಹೊಂದಿರುವ ಕೆಕೆಆರ್, ರನ್‌ರೇಟ್ ಲೆಕ್ಕಾಚಾರದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಸವಾಲಿನ ಮೊತ್ತ ಬೆನ್ನತ್ತಿದ ಪಂಜಾಬ್ ತಂಡಕ್ಕೆ ರಾಹುಲ್ ಹಾಗೂ ಮಯಂಕ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 70 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ 40 ರನ್ ಗಳಿಸಿದ ಮಯಂಕ್ ಅವರನ್ನು ವರುಣ್ ಚಕ್ರವರ್ತಿ ಹೊರದಬ್ಬಿದರು. 27 ಎಸೆತಗಳನ್ನು ಎದುರಿಸಿದ ಮಯಂಕ್ ಇನ್ನಿಂಗ್ಸ್‌ನಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್‌ಗಳು ಸೇರಿದ್ದವು.

ನಿಕೋಲಸ್ ಪೂರನ್ (12) ಕೂಡ ಚಕ್ರವರ್ತಿ ಬಲೆಗೆ ಬಿದ್ದರು. ಈ ಹಂತದಲ್ಲಿ ರಾಹುಲ್ ಹಾಗೂ ಏಡೆನ್ ಮಾರ್ಕ್ರಂ ಮಗದೊಂದು 45 ರನ್‌ಗಳ ಉಪಯುಕ್ತ ಜೊತೆಯಾಟ ಕಟ್ಟಿದರು. ನಾಯಕನ ಆಟವಾಡಿದ ರಾಹುಲ್ ಆಕರ್ಷಕ ಅರ್ಧಶತಕ ಬಾರಿಸಿದರು.

ಈ ನಡುವೆ ಮಾರ್ಕ್ರಂ (18) ಓಟಕ್ಕೆ ಸುನಿಲ್ ನಾರಾಯಣ್ ಕಡಿವಾಣ ಹಾಕಿದರು. ದೀಪಕ್ ಹೂಡಾ (3) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಅಂತಿಮ ಓವರ್‌ ತನಕ ನೆಲೆಯೂರಿ ನಿಂತ ರಾಹುಲ್ ಪಂಜಾಬ್ ತಂಡ ಅರ್ಹ ಗೆಲುವು ದಾಖಲಿಸಲು ನೆರವಾದರು.

ಕೊನೆಯ ಹಂತದಲ್ಲಿ ಕೇವಲ 9 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಅಜೇಯ 22 ರನ್ ಗಳಿಸಿದ ಶಾರೂಕ್ ಖಾನ್ ಪಂಜಾಬ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಕೆಕೆಆರ್ ಪರ ವರುಣ್ ಚಕ್ರವರ್ತಿ ಎರಡು ವಿಕೆಟ್ ಪಡೆದರು.

ವೆಂಕಟೇಶ್ ಹೋರಾಟ ವ್ಯರ್ಥ...
ಈ ಮೊದಲು ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. ಶುಭಮನ್ ಗಿಲ್ 7 ರನ್ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ವೆಂಕಟೇಶ್ ಅಯ್ಯರ್ ಹಾಗೂ ರಾಹುಲ್ ತ್ರಿಪಾಠಿ ಮಹತ್ವದ 72 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 34 ರನ್ ಗಳಿಸಿದ ತ್ರಿಪಾಠಿ ಅವರನ್ನು ರವಿ ಬಿಷ್ಣೋಯಿ ಬಲೆಗೆ ಬೀಳಿಸಿದರು.

ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಅಯ್ಯರ್ 39 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಅಯ್ಯರ್‌ಗೆ ಕಡಿವಾಣ ಹಾಕಿದ ಬಿಷ್ಣೋಯಿ ಮಗದೊಮ್ಮೆ ಕಂಟಕವಾದರು. 49 ಎಸೆತಗಳನ್ನು ಎದುರಿಸಿದ ಅಯ್ಯರ್ ಒಂಬತ್ತು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು.

ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ನಾಯಕ ಏಯಾನ್ ಮಾರ್ಗನ್ 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಕೊನೆಯ ಹಂತದಲ್ಲಿ ಕೇವಲ 18 ಎಸೆತಗಳಲ್ಲಿ 31 ರನ್ (ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್) ಗಳಿಸಿದ ನಿತೀಶ್ ರಾಣಾ, ಕೆಕೆಆರ್ ತಂಡವನ್ನು ಸ್ಪರ್ಧಾತ್ಕಕ ಮೊತ್ತದತ್ತ ಮುನ್ನಡೆಸಿದರು.

ಅಂತಿಮವಾಗಿ ಏಳು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಇನ್ನುಳಿದಂತೆ ದಿನೇಶ್ ಕಾರ್ತಿಕ್ (11), ಟಿಮ್ ಸೀಫರ್ಟ್ (2) ಹಾಗೂ ಸುನಿಲ್ ನಾರಾಯಣ್ (3*) ರನ್ ಗಳಿಸಿದರು. ಕೆಕೆಆರ್ ಪರ ಅರ್ಶ್‌ದೀಪ್ ಸಿಂಗ್ ಮೂರು ಹಾಗೂ ರವಿ ಬಿಷ್ಣೋಯಿ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT