ಗುರುವಾರ , ಮಾರ್ಚ್ 23, 2023
32 °C
ಪೃಥ್ವಿ ಶಾ ಬಳಗದ ಎದುರಿನ ಹಣಾಹಣಿ: ಕೊಹ್ಲಿ ಪಡೆಗೆ ಗ್ಲೆನ್‌ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ ಬಲ

IPL 2021: ಆರ್‌ಸಿಬಿಗೆ ಜಯದ ಕಾತರ- ಡೆಲ್ಲಿ ನಿರಾಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಪ್ಲೇ ಆಫ್ ಹಂತದಲ್ಲಿ ಈಗಾಗಲೇ ಸ್ಥಾನ ಭದ್ರಪಡಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ.

ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಮುಂಬೈ ಮತ್ತು ಚೆನ್ನೈ ವಿರುದ್ಧ ಜಯ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಹ್ಯಾಟ್ರಿಕ್ ಗೆಲುವಿನೊಂದಿಗೆ ಲೀಗ್ ಹಂತದ ಅಭಿಯಾನ ಮುಕ್ತಾಯಗೊಳಿಸುವ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯಲಿದೆ. ಸನ್‌ರೈಸರ್ಸ್ ವಿರುದ್ಧ ಬುಧವಾರ ಸೋಲು ಕಂಡಿರುವ ಬೆಂಗಳೂರು ತಂಡ ಕೂಡ ಜಯದೊಂದಿಗೆ ಪ್ಲೇ ಆಫ್‌ ಪಂದ್ಯಕ್ಕೆ ಸಜ್ಜಾಗಲು ಪ್ರಯತ್ನಿಸಲಿದೆ.

13 ಪಂದ್ಯಗಳಿಂದ 20 ಪಾಯಿಂಟ್ ಸಂಪಾದಿಸಿರುವ ಡೆಲ್ಲಿ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಸನ್‌ರೈಸರ್ಸ್ ವಿರುದ್ಧದ ಸೋಲಿನಿಂದಾಗಿ ಎರಡನೇ ಸ್ಥಾನಕ್ಕೇರುವ ಬೆಂಗಳೂರು ತಂಡದ ಕನಸು ಭಗ್ನಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಗುರುವಾರದ ಪಂದ್ಯದಲ್ಲಿ ಸೋತಿದ್ದರೂ ಅದರ ರನ್‌ ರೇಟ್‌  ಬೆಂಗಳೂರಿಗಿಂತ ಹೆಚ್ಚು ಇದೆ. 

ಎಬಿ ಡಿವಿಲಿಯರ್ಸ್, ದೇವದತ್ತ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಅವರಂಥ ಹೆಸರಾಂತ ಬ್ಯಾಟರ್‌ಗಳು ಇದ್ದರೂ ಸನ್‌ರೈಸರ್ಸ್‌ ನೀಡಿದ ಸಾಮಾನ್ಯ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಲು ಬೆಂಗಳೂರು ತಂಡಕ್ಕೆ ಸಾಧ್ಯವಾಗಿರಲಿಲ್ಲ. ಇದು, ತಂಡದ ಮೇಲೆ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ಪಂದ್ಯ ಗೆಲ್ಲಿಸಲು ಗ್ಲೆನ್ ಮ್ಯಾಕ್ಸ್‌ವೆಲ್‌ ಸಾಕಷ್ಟು ಪ್ರಯತ್ನಪಟ್ಟಿದ್ದರು. ಹಿಂದಿನ ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿದ್ದ ಅವರ ಮೇಲೆ ಈಗಲೂ ತಂಡ ಭರವಸೆ ಇರಿಸಿದೆ. ಮ್ಯಾಕ್ಸ್‌ವೆಲ್ ಈ ವರೆಗೆ ಒಟ್ಟು ಐದು ಅರ್ಧಶತಕಗಳೊಂದಿಗೆ 447 ರನ್ ಕಲೆ ಹಾಕಿದ್ದಾರೆ.  

ದೇವದತ್ತ ಪಡಿಕ್ಕಲ್ ಜೊತೆ ವಿರಾಟ್ ಕೊಹ್ಲಿ ಲಯ ಕಂಡುಕೊಂಡರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನಿರಾತಂಕವಾಗಿ ಆಡಬಹುದಾಗಿದೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್‌, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್, ಶಹಬಾಜ್ ಅಹಮ್ಮದ್ ಮತ್ತು ಜಾರ್ಜ್ ಗಾರ್ಟನ್ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ.

ಭರವಸೆಯಲ್ಲಿ ಡೆಲ್ಲಿ

ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಪ್ಲೇ ಆಫ್ ಹಂತ ಸಮೀಪಿಸುತ್ತಿದ್ದಂತೆ ಹೆಚ್ಚು ಯಶಸ್ಸು ಕಂಡಿರುವ ತಂಡ ಹಿಂದಿನ ಐದು ಪಂದ್ಯಗಳ ಪೈಕಿ ನಾಲ್ಕನ್ನು ಗೆದ್ದುಕೊಂಡಿದೆ. ಪೃಥ್ವಿ ಶಾ ಅವರ ವೈಫಲ್ಯದ ನಡುವೆಯೂ ಡೆಲ್ಲಿ ತಂಡದ ಬ್ಯಾಟಿಂಗ್ ಬಳಗ ಬಲಿಷ್ಠವಾಗಿದೆ. 13 ಇನಿಂಗ್ಸ್‌ಗಳಲ್ಲಿ 501 ರನ್‌ ಗಳಿಸಿರುವ ಶಿಖರ್ ಧವನ್ ಅಗ್ರ ಕ್ರಮಾಂಕದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ಮತ್ತು ಪೃಥ್ವಿ ಶಾ ಅವರು ಕೆಲವು ಪಂದ್ಯಗಳಲ್ಲಿ ತಂಡದ ರಕ್ಷಣೆಗೆ ಬಂದಿದ್ದಾರೆ. 

ತಂಡದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಆ್ಯನ್ರಿಚ್ ನಾರ್ಕಿಯ, ಕಗಿಸೊ ರಬಾಡ ಮತ್ತು ಆವೇಶ್ ಖಾನ್ ವೇಗದ ದಾಳಿಯ ಮೂಲಕ ಎದುರಾಗಳಿಗಳನ್ನು ಕಂಗೆಡಿಸುತ್ತಿದ್ದು ಸ್ಪಿನ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಉತ್ತಮ ಕೊಡುಗೆ ನೀಡುತ್ತಿದ್ದಾರೆ.  

ಮುಖಾಮುಖಿ 

ಪಂದ್ಯಗಳು 26

ಬೆಂಗಳೂರು ಜಯ 15

ಡೆಲ್ಲಿ ಗೆಲುವು 10

ಫಲಿತಾಂಶವಿಲ್ಲ 1

ಮುಖಾಮುಖಿಯಲ್ಲಿ ಗರಿಷ್ಠ ರನ್‌

ಬೆಂಗಳೂರು 215

ಡೆಲ್ಲಿ 196

ಮುಖಾಮುಖಿಯಲ್ಲಿ ಕನಿಷ್ಠ ರನ್‌

ಬೆಂಗಳೂರು 137

ಡೆಲ್ಲಿ 95

ಪಂದ್ಯ ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು