ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವಲ್ಲಿ ವಿಲಿಯರ್ಸ್ ವಿಫಲ; ಆರ್‌ಸಿಬಿಗೆ ಸೋಲು!

Last Updated 6 ಅಕ್ಟೋಬರ್ 2021, 18:29 IST
ಅಕ್ಷರ ಗಾತ್ರ

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ರನ್ ಅಂತರದ ಸೋಲಿಗೆ ಶರಣಾಗಿದೆ.

ಈ ಮೂಲಕ ಅತಿ ವಿರಳ ಸನ್ನಿವೇಶವೆಂಬಂತೆ 'ಮಿಸ್ಟರ್ 360 ಡಿಗ್ರಿ' ಬ್ಯಾಟ್ಸ್‌ಮನ್ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಔಟಾಗದೆ ಉಳಿದರೂ ಆರ್‌ಸಿಬಿಗೆ ಪಂದ್ಯ ಗೆಲ್ಲಲಾಗಲಿಲ್ಲ.

ಮೊದಲು ಹರ್ಷಲ್ ಪಟೇಲ್ (33ಕ್ಕೆ 3) ಹಾಗೂ ಡೇನಿಯಲ್ ಕ್ರಿಸ್ಟಿಯನ್ (14ಕ್ಕೆ 2) ಪ್ರಭಾವಿ ದಾಳಿಗೆ ಸಿಲುಕಿದ ಹೈದರಾಬಾದ್ ಏಳು ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಬಳಿಕ ದೇವದತ್ತ ಪಡಿಕ್ಕಲ್ (41) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (40) ಉಪಯುಕ್ತ ಬ್ಯಾಟಿಂಗ್ ಹೊರತಾಗಿಯೂ ಆರ್‌ಸಿಬಿ ಆರು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಸಮರ್ಥವಾಯಿತು.

ಕೊನೆಯ ಹಂತದಲ್ಲಿ ಎಬಿ ಡಿವಿಲಿಯರ್ಸ್ (19*) ಹಾಗೂ ಶಾಬಾಜ್ ಅಹಮದ್ (14) ಶಕ್ತಿಮೀರಿ ಪ್ರಯತ್ನಿಸಿದರೂ ಆರ್‌ಸಿಬಿಗೆ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ.

ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಿಗೆ ಬಡ್ತಿ ಪಡೆಯುವ ಆರ್‌ಸಿಬಿ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಹಾಗಿದ್ದರೂ ಆಗಲೇ ಪ್ಲೇ-ಆಫ್ ಪ್ರವೇಶಿಸಿರುವ ವಿರಾಟ್ ಕೊಹ್ಲಿ ಬಳಗವು 13 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಅತ್ತ ಹೈದರಾಬಾದ್ ಈ ಗೆಲುವಿನ ಹೊರತಾಗಿಯೂ 13 ಪಂದ್ಯಗಳಲ್ಲಿ ಆರು ಅಂಕಗಳೊಂದಿಗೆ ಅಂತಿಮ ಸ್ಥಾನದಲ್ಲಿದೆ. ಇದು ಟೂರ್ನಿಯಲ್ಲಿ ಹೈದರಾಬಾದ್ ಗಳಿಸಿದ ಮೂರನೇ ಗೆಲುವಾಗಿದೆ.

ಆರ್‌ಸಿಬಿಗೆ ಸೋಲಿನ ಆಘಾತ...
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. 6.5 ಓವರ್‌ಗಳಲ್ಲಿ 38 ರನ್ ಗಳಿಸುವುದರೆಡೆಗೆ ಮೂರು ವಿಕೆಟ್ ನಷ್ಟವಾಯಿತು. ನಾಯಕ ವಿರಾಟ್ ಕೊಹ್ಲಿ (5), ಡೇನಿಯಲ್ ಕ್ರಿಸ್ಟಿಯನ್ (1), ಶ್ರೀಕರ್ ಭರತ್ (10) ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಜೊತೆಗೂಡಿದ ದೇವದತ್ತ ಪಡಿಕ್ಕಲ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಂಡವನ್ನು ನಿಧಾನವಾಗಿ ಮುನ್ನಡೆಸಿದರು. ಅಲ್ಲದೆ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಪಡಿಕ್ಕಲ್ ರಕ್ಷಣಾತ್ಮಕ ಇನ್ನಿಂಗ್ಸ್ ಕಟ್ಟಿದರೆ ಮ್ಯಾಕ್ಸ್‌ವೆಲ್ ಎಂದಿನಂತೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಆದರೆ ಕೇನ್ ವಿಲಿಯಮ್ಸನ್ ನೇರ ಥ್ರೋದಲ್ಲಿ ರನೌಟ್ ಆದ ಮ್ಯಾಕ್ಸ್‌ವೆಲ್ ಸತತ ನಾಲ್ಕನೇ ಅರ್ಧಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. 25 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 40 ರನ್ ಗಳಿಸಿದರು.

ಅಂತಿಮ 30 ಎಸೆತಗಳಲ್ಲಿ ಆರ್‌ಸಿಬಿ ಗೆಲುವಿಗೆ 44 ರನ್‌ಗಳ ಅವಶ್ಯಕತೆಯಿತ್ತು. ಅತ್ತ ಉತ್ತಮವಾಗಿ ಆಡುತ್ತಿದ್ದ ದೇವದತ್ತ ಪಡಿಕ್ಕಲ್ (41) ಕೂಡ ನಿರ್ಗಮಿಸುವುದರೊಂದಿಗೆ ಪಂದ್ಯ ರೋಚಕ ಹಂತವನ್ನು ತಲುಪಿತು.

ಕೊನೆಯ ಹಂತದಲ್ಲಿ ಶಾಬಾಜ್ ಅಹಮದ್ 14 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಅತ್ತ ಫಿನಿಶರ್ ಜವಾಬ್ದಾರಿ ಹೊತ್ತುಕೊಂಡಿದ್ದ ಎಬಿಡಿ ವಿಲಿಯರ್ಸ್ ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡಿದರು.

ಭುವನೇಶ್ವರ್ ಕುಮಾರ್ ಅವರ ಅಂತಿಮ ಓವರ್‌ನಲ್ಲಿ ಗೆಲುವಿಗೆ 13 ರನ್‌ಗಳ ಅವಶ್ಯಕತೆಯಿತ್ತು. ಆದರೆ ಒಂದು ಸಿಕ್ಸರ್ ಎತ್ತುವಲ್ಲಿ ಮಾತ್ರ ವಿಲಿಯರ್ಸ್ ಯಶಸ್ವಿಯಾದರು. ಅಂತಿಮ ಎಸೆತದಲ್ಲಿ ಆರು ರನ್ ಅಗತ್ಯವಿತ್ತು. ಆದರೆ ಎರಡನೇ ಬಾರಿಗೆ ವಿಲಿಯರ್ಸ್ ಸಿಕ್ಸರ್ ಎತ್ತುವಲ್ಲಿ ವಿಫಲರಾಗುವುದರೊಂದಿಗೆ ಆರ್‌ಸಿಬಿ ಸೋಲೊಪ್ಪಿಕೊಳ್ಳಬೇಕಾಯಿತು.

ಇದರೊಂದಿಗೆ ಆರು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಸಾಧ್ಯವಾಯಿತು. ವಿಲಿಯರ್ಸ್ 13 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 19 ರನ್ ಗಳಿಸಿ ಔಟಾಗದೆ ಉಳಿದರು. ಇನ್ನುಳಿದಂತೆ ಜಾರ್ಜ್ ಗಾರ್ಟನ್ 2* ರನ್ ಗಳಿಸಿದರು.

ಹೈದರಾಬಾದ್ ಪರ ಭುವನೇಶ್ವರ್ ಕುಮಾರ್, ಜೇಸನ್ ಹೋಲ್ಡರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್ ಹಾಗೂ ರಶೀದ್ ಖಾನ್ ತಲಾ ಒಂದು ವಿಕೆಟನ್ನು ಹಂಚಿದರು.

ಹರ್ಷಲ್‌ಗೆ ಮೂರು ವಿಕೆಟ್, ಹೈದರಾಬಾದ್ 141/7...
ಈ ಮೊದಲು ಹೈದರಾಬಾದ್ ಆರಂಭ ಉತ್ತಮವಾಗಿರಲಿಲ್ಲ. ಅಭಿಷೇಕ್ ಶರ್ಮಾ (13) ಬೇಗನೇ ಪೆವಿಲಿಯನ್‌ಗೆ ಸೇರಿದರು. ಈ ಹಂತದಲ್ಲಿ ಜೊತೆಗೂಡಿದ ಜೇಸನ್ ರಾಯ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿದರು.

ಬೆಂಗಳೂರು ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ, ಎರಡನೇ ವಿಕೆಟ್‌ಗೆ ಮಹತ್ವದ ಅರ್ಧಶತಕದ ಜೊತೆಯಾಟವನ್ನು ನೀಡಿದರು. 10 ಓವರ್ ಅಂತ್ಯಕ್ಕೆ ಹೈದರಾಬಾದ್ ಒಂದು ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.

ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ವಿಲಿಯಮ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಹರ್ಷಲ್ ಪಟೇಲ್ ತಿರುಗೇಟು ನೀಡಿದರು. 29 ಎಸೆತಗಳನ್ನು ಎದುರಿಸಿದ ವಿಲಿಯಮ್ಸನ್ ನಾಲ್ಕು ಬೌಂಡರಿಗಳ ನೆರವಿನಿಂದ 31 ರನ್ ಗಳಿಸಿದರು.

ಪ್ರಿಯಂ ಗಾರ್ಗ್ ಅವರಿಗೂ ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಾಗಲಿಲ್ಲ. ಪ್ರಿಯಂ ಜೊತೆಗೆ ಉತ್ತಮವಾಗಿ ಆಡುತ್ತಿದ್ದ ಜೇಸನ್ ರಾಯ್ ಅವರನ್ನು ಪೆವಿಲಿಯನ್‌ಗೆ ರವಾನಿಸಿದ ಡೇನಿಯಲ್ ಕ್ರಿಸ್ಟಿಯನ್ ಡಬಲ್ ಆಘಾತ ನೀಡಿದರು.

ಯಜುವೇಂದ್ರ ಚಾಹಲ್ ದಾಳಿಯಲ್ಲಿ ಅಬ್ದುಲ್ ಸಮದ್ (1) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕುವುದರೊಂದಿಗೆ 107 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಕೊನೆಯ ಹಂತದಲ್ಲಿ ಜೇಸನ್ ಹೋಲ್ಡರ್ (16), ವೃದ್ಧಿಮಾನ್ ಸಹಾ (10) ಹಾಗೂ ರಶೀದ್ ಖಾನ್ (7*) ಉಪಯುಕ್ತ ಕಾಣಿಕೆ ನೀಡಿದ ಪರಿಣಾಮ ಹೈದರಾಬಾದ್ ಏಳು ವಿಕೆಟ್ ನಷ್ಟಕ್ಕೆ 141 ರನ್ ಗಳಿಸಲು ನೆರವಾಯಿತು.

ಆರ್‌ಸಿಬಿ ಪರ ಹರ್ಷಲ್ ಮೂರು ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹಿರಿಮೆಗೆ ಭಾಜನರಾದರು. ಇನ್ನೊಂದೆಡೆ ಡೇನಿಯಲ್ ಕ್ರಿಸ್ಟಿಯನ್ ಎರಡು ವಿಕೆಟ್ ಪಡೆದು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT