ಸೋಮವಾರ, ಅಕ್ಟೋಬರ್ 18, 2021
24 °C

IPL 2021 | DC vs SRH: ಹೈದರಾಬಾದ್ ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರಿದ ಡೆಲ್ಲಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಮೊದಲ ಹಂತದಲ್ಲಿ ಕಳಪೆ ಪ್ರದರ್ಶನ ನೀಡಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ಎರಡನೇ ಹಂತದಲ್ಲೂ ನಿರಾಸೆಯ ಆರಂಭ ಕಂಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕೇನ್ ವಿಲಿಯಮ್ಸನ್ ಬಳಗ ಎಂಟು ವಿಕೆಟ್‌ಗಳಿಂದ ಸೋಲೊಪ್ಪಿಕೊಂಡಿತು. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಮೇಲೇಳಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಆಲ್‌ರೌಂಡ್ ಆಟ ಪ್ರದರ್ಶಿಸಿದ ಡೆಲ್ಲಿ ತಂಡ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

135 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ಪೃಥ್ವಿ ಶಾ ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಮತ್ತು ನಾಯಕ ರಿಷಭ್ ಪಂತ್ ಅವರು ಮೋಹಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

ಎರಡನೇ ವಿಕೆಟ್‌ಗೆ ಶಿಖರ್ ಮತ್ತು ಶ್ರೇಯಸ್ ಅಯ್ಯರ್ 52 ರನ್‌ಗಳ ಜೊತೆಯಾಟವಾಡಿದರು. ಶಿಖರ್ ಔಟಾದ ನಂತರ ಶ್ರೇಯಸ್ ಮತ್ತು ರಿಷಭ್‌ 67 ರನ್‌ಗಳ ಜೊತೆಯಾಟದ ಮೂಲಕ ಎದುರಾಳಿ ತಂಡದ ಬೌಲರ್‌ಗಳನ್ನು ಕಂಗೆಡಿಸಿದರು.

ರಬಾಡ, ನಾರ್ಕಿಯಾ ಮಿಂಚು: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್‌ ಪರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಲು ಯಾರಿಗೂ ಸಾಧ್ಯವಾಗಲಿಲ್ಲ.

ವೇಗದ ಬೌಲರ್‌ಗಳಾದ ಕಗಿಸೊ ರಬಾಡ (37ಕ್ಕೆ3) ದಾಳಿಯ ಮುಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಬಳಗ ಬಸವಳಿಯಿತು.  ಹೀಗಾಗಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 134 ರನ್‌ಗಳ ಸಾಧಾರಣ ಮೊತ್ತ ಗಳಿಸಲಷ್ಟೇ ಆ ತಂಡಕ್ಕೆ ಸಾಧ್ಯವಾಯಿತು.

ಕಗಿಸೊ ರಬಾಡ  ಅವರೊಂದಿಗೆ ಎನ್ರಿಚ್ ನಾರ್ಕಿಯಾ (12ಕ್ಕೆ2) ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ (21ಕ್ಕೆ2) ಕೂಡ ಉತ್ತಮ ಬೌಲಿಂಗ್ ಮೂಲಕ ಸನ್‌ರೈಸರ್ಸ್‌ಗೆ ಪೆಟ್ಟುಕೊಟ್ಟರು.

ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಮೊದಲ ಓವರ್‌ನಲ್ಲಿಯೇ ಸೊನ್ನೆ ಸುತ್ತಲು ಎನ್ರಿಚ್ ಕಾರಣರಾದರು.

ವೃದ್ಧಿಮಾನ್ ಸಹಾ (18), ಮನೀಷ್ ಪಾಂಡೆ (17) ಮತ್ತು ಅಬ್ದುಲ್ ಸಮದ್ (28)  ಅವರ ವಿಕೆಟ್‌ಗಳನ್ನು ರಬಾಡ ತಮ್ಮ ಬುಟ್ಟಿಗೆ ಹಾಕಿಕೊಂಡರು. ಆ ಮೂಲಕ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು.

ಕ್ಯಾಪ್ಟನ್ ಕೂಲ್ ಕೇನ್ ವಿಲಿಯಮ್ಸನ್ (18) ಅಕ್ಷರ್ ಪಟೇಲ್ ಸ್ಪಿನ್ ಮೋಡಿಗೆ ಚಿತ್ ಆದರು. ಅನುಭವಿ ಕೇದಾರ್ ಜಾಧವ್ ಅವರಿಗೂ ಬೌಲರ್‌ಗಳಿಗೆ ಉತ್ತರ ನಿಡಲು ಆಗಲಿಲ್ಲ. ಅವರನ್ನು ಎನ್ರಿಚ್ ವಾಪಸ್ ಕಳುಹಿಸಿದರು. 

ಇದ್ದುದರಲ್ಲಿ ಕಾಶ್ಮೀರಿ ಹುಡುಗ ಸಮದ್  ಮತ್ತು ಅಫ್ಗನ್ ಆಟಗಾರ ರಶೀದ್ ಖಾನ್ (22) ತಂಡಕ್ಕೆ ಬಲ ತುಂಬುವ ಪ್ರಯತ್ನ ಮಾಡಿದರು. ರಶೀದ್ 19 ಎಸೆತಗಳಲ್ಲಿ  ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಸಿಡಿಸಿದರು. ಬದಲೀ ಫೀಲ್ಡರ್ ಸ್ಟೀವನ್ ಸ್ಮಿತ್ ಅವರ ಚುರುಕಿನ ಫೀಲ್ಡಿಂಗ್‌ ಮತ್ತು ಥ್ರೋನಿಂದಾಗಿ ರಶೀದ್
ರನ್‌ಔಟ್ ಆದರು.

ನಟರಾಜನ್‌ಗೆ ಕೋವಿಡ್: ಐಸೊಲೇಷನ್‌ನಲ್ಲಿ ಆರು ಆಟಗಾರರು
ದುಬೈ
: ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮವೇಗಿ ಟಿ. ನಟರಾಜನ್ ಅವರಿಗೆ ಕೋವಿಡ್ ಇರುವುದು ಬುಧವಾರ ಖಚಿತವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದ ದಿನವೇ ಅವರಲ್ಲಿ ಸೋಂಕು ಪತ್ತೆಯಾಗಿದ್ದು ಅತಂಕಕ್ಕೆ ಕಾರಣವಾಯಿತು. ಪಂದ್ಯವನ್ನು ಮುಂದೂಡುವ ಅಥವಾ ರದ್ದು ಮಾಡುವ ಕುರಿತ ಸಂದೇಶಗಳು ಹರಿದಾಡಿದವು. ಇದರಿಂದಾಗಿ ತಂಡದ ಆಟಗಾರರನ್ನು ಆರ್‌ಟಿ–ಪಿಸಿಆರ್ ಟೆಸ್ಟ್‌ಗೆ ಒಳಪಡಿಸಲಾಯಿತು. ವರದಿ ನೆಗೆಟಿವ್ ಬಂದ ಕಾರಣ ಪಂದ್ಯ ನಡೆಸುವುದು ಖಚಿತವಾಯಿತು. ನಟರಾಜನ್ ಮತ್ತು ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಆಲ್‌ರೌಂಡರ್ ವಿಜಯಶಂಕರ್ ಅವರನ್ನು ಪ್ರತ್ಯೇಕವಾಸಕ್ಕೆ ಕಳಿಸಲಾಗಿದೆ. ಅವರಲ್ಲದೇ ಇನ್ನೂ ಆರು  ಆಟಗಾರರನ್ನು ಪ್ರತ್ಯೇಕವಾಸಕ್ಕೆ ಕಳಿಸಲಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ. ‘11 ದಿನಗಳ ಹಿಂದೆ ನಟರಾಜನ್ ಇಲ್ಲಿಗೆ ಬಂದಿದ್ದಾರೆ. ಅವರಲ್ಲಿ ಲಕ್ಷಣರಹಿತ ಸೋಂಕು ಪತ್ತೆಯಾಗಿದೆ’ ಎಂದು ತಂಡದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು