ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021; ಪಂಜಾಬ್ ತತ್ತರ; ಕೊನೆಗೂ ಗೆಲುವು ದಾಖಲಿಸಿದ ಸನ್‌ರೈಸರ್ಸ್

Last Updated 21 ಏಪ್ರಿಲ್ 2021, 13:45 IST
ಅಕ್ಷರ ಗಾತ್ರ

ಚೆನ್ನೈ: ಪಂಜಾಬ್ ಕಿಂಗ್ಸ್ ವಿರುದ್ಧ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಸನ್‌ರೈಸರ್ಸ್ ಹೈದರಾಬಾದ್, ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

ಬುಧವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಹೈದರಾಬಾದ್ ಸಾಂಘಿಕ ದಾಳಿಗೆ ಕುಸಿತ ಕಂಡ ಪಂಜಾಬ್ ಕೇವಲ 120 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್, ಜಾನಿ ಬೆಸ್ಟೊ ಅಜೇಯ ಅರ್ಧಶತಕ (63*) ಹಾಗೂ ನಾಯಕ ಡೇವಿಡ್ ವಾರ್ನರ್ (37) ಸಮಯೋಚಿತ ಆಟದ ನೆರವಿನಿಂದ 18.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು.

ಅತ್ತ ಪಂಜಾಬ್ ತಂಡವು ಮೊದಲ ಪಂದ್ಯದ ಗೆಲುವಿನ ಬಳಿಕ ಸತತ ಮೂರನೇ ಸೋಲಿಗೆ ಶರಣಾಗಿದೆ.

ಸುಲಭ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಓಪನರ್‌ಗಳಾದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೆಸ್ಟೊ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಪಂಜಾಬ್ ಬೌಲರ್‌ಗಳನ್ನು ಬೆವರಿಳಿಸಿದರು. ಪರಿಣಾಮ ಪವರ್ ಪ್ಲೇ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 50 ರನ್‌ಗಳು ಹರಿದು ಬಂದಿದ್ದವು.

ವಾರ್ನರ್ ಹಾಗೂ ಬೆಸ್ಟೊ ಮೊದಲ ವಿಕೆಟ್‌ಗೆ 10.1 ಓವರ್‌ಗಳಲ್ಲಿ 73 ರನ್‌ಗಳ ಜೊತೆಯಾಟ ನೀಡಿದರು. ಕೊನೆಗೂ ಈ ಜೋಡಿ ಬೇರ್ಪಡಿಸುವಲ್ಲಿ ಫ್ಯಾಬಿಯನ್ ಅಲೆನ್ ಯಶಸ್ವಿಯಾದರು. 37 ರನ್ ಗಳಿಸಿದ ವಾರ್ನರ್ ಔಟಾದರು.

ಇನ್ನೊಂದೆಡೆ ದಿಟ್ಟ ಹೋರಾಟ ಪ್ರದರ್ಶಿಸಿದ ಜಾನಿ ಬೆಸ್ಟೊ, ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 56 ಎಸೆತಗಳನ್ನು ಎದುರಿಸಿದ ಬೆಸ್ಟೊ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 63 ರನ್ ಗಳಿಸಿ ಔಟಾಗದೆ ಉಳಿದರು.

ಇವರಿಗೆ ತಕ್ಕ ಬೆಂಬಲ ನೀಡಿದ ಟೂರ್ನಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ಕೇನ್ ವಿಲಿಯಮ್ಸನ್ 16 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ ಸತತ ಮೂರು ಸೋಲುಗಳ ಬಳಿಕ ಡೇವಿಡ್ ವಾರ್ನರ್ ಪಡೆಯು ಗೆಲುವಿನ ಹಾದಿಗೆ ಮರಳಿದೆ.

ಹೈದರಾಬಾದ್ ಸಾಂಘಿಕ ದಾಳಿಗೆ ಪಂಜಾಬ್ ತತ್ತರ...
ಈ ಮೊದಲು ಹೈದರಾಬಾದ್ ತಂಡದ ಸಾಂಘಿಕ ದಾಳಿಗೆ ಕುಸಿತ ಕಂಡಿರುವ ಪಂಜಾಬ್ ಕಿಂಗ್ಸ್ ತಂಡವು 19.4 ಓವರ್‌ಗಳಲ್ಲಿ ಕೇವಲ 120 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ನಾಯಕ ಕೆಎಲ್ ರಾಹುಲ್, ಕ್ರಿಸ್ ಗೇಲ್, ಮಯಂಕ್ ಅಗರವಾಲ್ ಹೀಗೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಸನ್‌ರೈಸರ್ಸ್ ಬೌಲರ್‌ಗಳು ಕಟ್ಟಿ ಹಾಕಿದರು.

ನಾಯಕ ಕೆಎಲ್ ರಾಹುಲ್ (4), ಮಯಂಕ್ ಅಗರವಾಲ್ (22), ಕ್ರಿಸ್ ಗೇಲ್ (15), ನಿಕೋಲಸ್ ಪೂರನ್ (0), ದೀಪಕ್ ಹೂಡಾ (13), ಮೊಯಿಸಿಸ್ ಹೆನ್ರಿಕ್ಸ್ (14), ಶಾರೂಕ್ ಖಾನ್ (22) ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದರು.

ಯಾವ ಹಂತದಲ್ಲೂ ಪಂಜಾಬ್ ಬ್ಯಾಟ್ಸ್‌ಮನ್‌ಗಳು ಹೋರಾಟ ಮನೋಭಾವವನ್ನು ತೋರಲೇ ಇಲ್ಲ. 63 ರನ್ ಗಳಿಸುವುದರೆಡೆಗೆ ಅರ್ಧ ತಂಡವು ಪೆವಿಲಿಯನ್‌ಗೆ ಮರಳಿತ್ತು.

ಹೈದರಾಬಾದ್ ಪರ ಖಲೀಲ್ ಅಹಮ್ಮದ್ ಮೂರು ವಿಕೆಟ್ ಪಡೆದು ಮಿಂಚಿದರು. ಅಭಿಷೇಕ್ ಶರ್ಮಾ ಎರಡು ಮತ್ತು ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್ ಹಾಗೂ ರಶೀದ್ ಖಾನ್ ತಲಾ ಒಂದು ವಿಕೆಟ್‌ಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT