ಶನಿವಾರ, ಅಕ್ಟೋಬರ್ 23, 2021
20 °C

IPL 2021: ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಭರತ್; ಆರ್‌ಸಿಬಿಗೆ ಗೆಲುವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಶ್ರೀಕರ್ ಭರತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಮೋಘ ಶತಕದ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಶ್ರೀಕರ್ ಭರತ್ ಗೆಲುವಿನ ರೂವಾರಿ ಎನಿಸಿದರು. 51 ಎಸೆತಗಳನ್ನು ಎದುರಿಸಿದ ಭರತ್ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 78 ರನ್ ಗಳಿಸಿ ಅಜೇಯರಾಗುಳಿದರು. 

ಅವರಿಗೆ ತಕ್ಕ ಸಾಥ್ ನೀಡಿದ ಮ್ಯಾಕ್ಸ್‌ವೆಲ್ ಕೇವಲ 33 ಎಸೆತಗಳಲ್ಲಿ ಎಂಟು ಬೌಂಡರಿ ನೆರವಿನಿಂದ 51 ರನ್ ಗಳಿಸಿ ಔಟಾಗದೆ ಉಳಿದರು. 

ಆಗಲೇ ಪ್ಲೇ-ಆಫ್ ಖಚಿತಪಡಿಸಿರುವ ಇತ್ತಂಡಗಳ ಬಲಾಬಲ ಪ್ರದರ್ಶನಕ್ಕಷ್ಟೇ ಈ ಪಂದ್ಯವು ಸೀಮಿತಗೊಂಡಿತ್ತು. ವಿರಾಟ್ ಕೊಹ್ಲಿ ಬಳಗವೀಗ ಅಕ್ಟೋಬರ್ 11ರಂದು ನಡೆಯಲಿರುವ ಎಲಿಮಿನೇಟರ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ. ಅತ್ತ ಡೆಲ್ಲಿ ತಂಡವು ಭಾನುವಾರದಂದು ನಡೆಯಲಿರುವ ಮೊದಲ ಕ್ವಾಲಿಫೈಯರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ. 

ಪೃಥ್ವಿ ಶಾ (48) ಹಾಗೂ ಶಿಖರ್ ಧವನ್ (43) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿತಂಡವು ಐದು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಆರ್‌ಸಿಬಿ ಭರತ್ (78*) ಹಾಗೂ ಮ್ಯಾಕ್ಸ್‌ವೆಲ್ (51*) ಬಿರುಸಿನ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ಭರತ್ ಗೆಲುವಿನ ಸಿಕ್ಸರ್...
ಅಂತಿಮ ಓವರ್‌ನಲ್ಲಿ15 ಹಾಗೂ ಕೊನೆಯ ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ ಐದು ರನ್‌ಗಳ ಅವಶ್ಯಕತೆಯಿತ್ತು. ಆವೇಶ್ ಖಾನ್ ಎಸೆದ ಅಂತಿಮ ಎಸೆತವನ್ನು ಸಿಕ್ಸರ್‌ಗಟ್ಟಿದ ಭರತ್ ಆರ್‌ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 

ಸವಾಲಿನ ಮೊತ್ತ ಬೆನ್ನತ್ತಿದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ತಂಡವು 6 ರನ್ ಗಳಿಸುವದರೆಡೆಗೆ ಆರಂಭಿಕರಾದ ದೇವದತ್ತ ಪಡಿಕ್ಕಲ್ (0) ಹಾಗೂ ನಾಯಕ ವಿರಾಟ್ ಕೊಹ್ಲಿ (4) ವಿಕೆಟ್ ಪತನವಾಯಿತು. 

ಈ ಹಂತದಲ್ಲಿ ಜೊತೆಗೂಡಿದ ಶ್ರೀಕರ್ ಭರತ್ ಹಾಗೂ ಎಬಿ ಡಿವಿಲಿಯರ್ಸ್ ಮಹತ್ವದ 49 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ 26 ರನ್ ಗಳಿಸಿ ವಿಲಿಯರ್ಸ್ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 

ಬಳಿಕ ಕ್ರೀಸಿಗಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೂಡಿದ ಶ್ರೀಕರ್ ಭರತ್ ತಂಡವನ್ನು ಮುನ್ನಡೆಸಿದರು. ಈ ಜೋಡಿ ಕೌಂಟರ್ ಅಟ್ಯಾಕ್ ಮಾಡುವ ಮೂಲಕ ನೆರವಾದರು. 

ಅಂತಿಮ 30 ಎಸೆತಗಳಲ್ಲಿ ಆರ್‌ಸಿಬಿಗೆ ಗೆಲುವಿಗೆ 57 ರನ್‌ಗಳ ಅವಶ್ಯಕತೆಯಿತ್ತು. ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಭರತ್ ಕೇವಲ 37 ಎಸೆತಗಳಲ್ಲಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಸಾಧನೆ ಮಾಡಿದರು. 

ಅಲ್ಲದೆ ಮ್ಯಾಕ್ಸ್‌ವೆಲ್ ಜೊತೆಗೆ ಮುರಿಯದ ನಾಲ್ಕನೇ ವಿಕೆಟ್‌ಗೆ 111 ರನ್‌ಗಳ ಜೊತೆಯಾಟ ಕಟ್ಟಿದರು. ಈ ಮೂಲಕ ಭರತ್-ಮ್ಯಾಕ್ಸ್‌ವೆಲ್ ಜೋಡಿ ಗೆಲುವಿನ ರೂವಾರಿ ಎನಿಸಿದರು. 

ಧವನ್-ಪೃಥ್ವಿ ಮಿಂಚು, ಡೆಲ್ಲಿ 164/5
ಈ ಮೊದಲು ಡೆಲ್ಲಿಗೆ ಓಪನರ್‌ಗಳಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಆರ್‌ಸಿಬಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅಲ್ಲದೆ ಮೊದಲ ವಿಕೆಟ್‌ಗೆ 10.1 ಓವರ್‌ಗಳಲ್ಲಿ 88 ರನ್‌ಗಳ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿಕೊಟ್ಟರು. 

ಈ ಜೊತೆಯಾಟವನ್ನು ಹರ್ಷಲ್ ಪಟೇಲ್ ಮುರಿದರು. 35 ಎಸೆತಗಳನ್ನು ಎದುರಿಸಿದ ಧವನ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು.

ಇದಾದ ಬೆನ್ನಲ್ಲೇ ಯಜುವೇಂದ್ರ ಚಾಹಲ್ ಬಲೆಗೆ ಪೃಥ್ವಿ ಶಾ ಬಿದ್ದರು. 31 ಎಸೆತಗಳನ್ನು ಎದುರಿಸಿದ ಪೃಥ್ವಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 48 ರನ್ ಗಳಿಸಿದರು.

ಬಳಿಕ ಕ್ರೀಸಿಗಿಳಿದ ನಾಯಕ ರಿಷಭ್ ಪಂತ್ (10) ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಮೂಲಕ ಡೆಲ್ಲಿ ಇನ್ನಿಂಗ್ಸ್‌ನ ಮಧ್ಯಂತರ ಅವಧಿಯಲ್ಲಿ ತಿರುಗೇಟು ನೀಡುವಲ್ಲಿ ಆರ್‌‍ಸಿಬಿ ಬೌಲರ್‌ಗಳು ಯಶಸ್ವಿಯಾದರು. 

ಕೊನೆಯ ಹಂತದಲ್ಲಿ ಶಿಮ್ರೊನ್ ಹೆಟ್ಮೆಯರ್ (29) ಹಾಗೂ ಶ್ರೇಯಸ್ ಅಯ್ಯರ್ (18) ಉತ್ತಮ ಆಟದ ನೆರವಿನಿಂದ ಡೆಲ್ಲಿ ಐದು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಇನ್ನುಳಿದಂತೆ ರಿಪಾಲ್ ಪಟೇಲ್ 7* ರನ್ ಗಳಿಸಿದರು. ಆರ್‌ಸಿಬಿ ಪರ ಮೊಹ್ಮದ್ ಸಿರಾಜ್ ಎರಡು ವಿಕೆಟ್ ಕಬಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು