ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 CSK vs PBKS: ಚೆನ್ನೈಗೆ ಸತತ 3ನೇ ಸೋಲು; ಪಂಜಾಬ್ ಜಯಭೇರಿ

Last Updated 3 ಏಪ್ರಿಲ್ 2022, 17:49 IST
ಅಕ್ಷರ ಗಾತ್ರ

ಮುಂಬೈ: ಲಿಯಾಮ್ ಲಿವಿಂಗ್‌ಸ್ಟೋನ್ ಆಲ್‌ರೌಂಡರ್ ಆಟದ (60 ರನ್ ಹಾಗೂ 2 ವಿಕೆಟ್) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ನಡೆದ ಐಪಿಎಲ್ ಪಂದ್ಯದಲ್ಲಿ 54 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಮಯಂಕ್ ಅಗರವಾಲ್ ಪಡೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ. ಅತ್ತ ಸಿಎಸ್‌ಕೆ ಸತತ ಮೂರನೇ ಸೋಲಿನ ಮುಖಭಂಗಕ್ಕೊಳಗಾಗಿದೆ.

ಭಾನುವಾರ ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಲಿಯಾಮ್ ಲಿವಿಂಗ್‌ಸ್ಟೋನ್ ಚೊಚ್ಚಲ ಐಪಿಎಲ್ ಅರ್ಧಶತಕದ ನೆರವಿನಿಂದ 180 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.

ಬಳಿಕ ಗುರಿ ಬೆನ್ನತ್ತಿದ ಚೆನ್ನೈ ಶಿವಂ ದುಬೆ ಅರ್ಧಶತಕದ (57) ಹೋರಾಟದ ಹೊರತಾಗಿಯೂ 18 ಓವರ್‌ಗಳಲ್ಲಿ 126 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಚೇಸಿಂಗ್ ವೇಳೆ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. 7.3 ಓವರ್‌ಗಳಲ್ಲಿ 36 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಾಬಿನ್ ಉತ್ತಪ್ಪ (13), ಋತುರಾಜ್ ಗಾಯಕವಾಡ್ (1), ಮೊಯಿನ್ ಅಲಿ (0), ಅಂಬಟಿ ರಾಯುಡು (13) ಹಾಗೂ ನಾಯಕ ರವೀಂದ್ರ ಜಡೇಜ (0) ನಿರಾಸೆ ಮೂಡಿಸಿದರು.

ಅಂತಿಮ 10 ಓವರ್‌ಗಳಲ್ಲಿ ಸಿಎಸ್‌ಕೆ ಗೆಲುವಿಗೆ 128 ರನ್ ಬೇಕಿತ್ತು. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ಜೊತೆಗೂಡಿದ ಶಿವಂ ದುಬೆ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಿರುಗೇಟು ನೀಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (23) ಔಟ್ ಆಗುವುದರೊಂದಿಗೆ ಚೆನ್ನೈ ಸೋಲು ಖಚಿತಗೊಂಡಿತು. ಇನ್ನುಳಿದಂತೆ ಡ್ವೇನ್ ಬ್ರಾವೊ (0), ಡ್ವೇನ್ ಪ್ರಿಟೋರಿಯಸ್ (8) ವೈಫಲ್ಯರಾದರು.

ಪಂಜಾಬ್ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡುತ್ತಿರುವ ವೈಭವ್ ಅರೋರಾ ಎರಡು ವಿಕೆಟ್ ಕಿತ್ತು ಮಿಂಚಿದರು. ರಾಹುಲ್ ಚಾಹರ್ ಮೂರು ಹಾಗೂ ಲಿವಿಂಗ್‌ಸ್ಟೋನ್ ಎರಡು ವಿಕೆಟ್ ಕಬಳಿಸಿದರು.

ಲಿವಿಂಗ್‌ಸ್ಟೋನ್ ಚೊಚ್ಚಲ ಐಪಿಎಲ್ ಅರ್ಧಶತಕ...
ಈ ಮೊದಲು ಮಧ್ಯಮ ಕ್ರಮಾಂಕದ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಬಿರುಸಿನ ಅರ್ಧಶತಕದ (60) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು, ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು.

ಲಿವಿಂಗ್‌ಸ್ಟೋನ್ ಕೇವಲ 27 ಎಸೆತಗಳಲ್ಲಿ ಐಪಿಎಲ್‌ನ ಚೊಚ್ಚಲ ಅರ್ಧಶತಕದ ಸಾಧನೆ ಮಾಡಿದರು.

32 ಎಸೆತಗಳನ್ನು ಎದುರಿಸಿದ ಲಿವಿಂಗ್‌ಸ್ಟೋನ್ ಇನ್ನಿಂಗ್ಸ್‌ನಲ್ಲಿ ತಲಾ ಐದು ಬೌಂಡರಿ ಹಾಗೂ ಸಿಕ್ಸರ್‌ಗಳು ಸೇರಿದ್ದವು.

ಚೊಚ್ಚಲ ಪಂದ್ಯ ಆಡುತ್ತಿರುವ ವಿಕೆಟ್ ಕೀಪರ್, ಬ್ಯಾಟರ್ ಜಿತೇಶ್ ಶರ್ಮಾ ಕೂಡ 17 ಎಸೆತಗಳಲ್ಲಿ ಮೂರು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಪ್ರಭಾವಿ ಎನಿಸಿಕೊಂಡರು.

ಅನುಭವಿ ಶಿಖರ್ ಧವನ್ 33 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಆದರೆ ನಾಯಕ ಮಯಂಕ್ ಅಗರವಾಲ್ (4), ಭಾನುಕ ರಜಪಕ್ಸ (9), ಶಾರೂಕ್ ಖಾನ್ (6) ಹಾಗೂ ಒಡೀನ್ ಸ್ಮಿತ್ (3) ವೈಫಲ್ಯ ಅನುಭವಿಸಿದರು. ಇನ್ನುಳಿದಂತೆ ಕಗಿಸೊ ರಬಾಡ (12*) ಹಾಗೂ ರಾಹುಲ್ ಚಾಹರ್ (12) ರನ್ ಗಳಿಸಿದರು.

ಕೊನೆಯ ಹಂತದಲ್ಲಿ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಪಂಜಾಬ್‌ಗೆ ಹಿನ್ನಡೆಯಾಗಿ ಪರಿಣಮಿಸಿತು. ಚೆನ್ನೈ ಪರ ಕ್ರಿಸ್ ಜಾರ್ಡನ್ ಹಾಗೂ ಡ್ವೇನ್ ಪ್ರಿಟೋರಿಯಸ್ ತಲಾ ಎರಡು ವಿಕೆಟ್ ಕಬಳಿಸಿದರು.

ಚೆನ್ನೈ ಫೀಲ್ಡಿಂಗ್ ಆಯ್ಕೆ...
ಈ ಮೊದಲುಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಚೆನ್ನೈ ತಂಡದಲ್ಲಿ ಒಂದು ಬದಲಾವಣೆ ತರಲಾಗಿದ್ದು, ತುಷಾರ್ ದೇಶಪಾಂಡೆ ಸ್ಥಾನಕ್ಕೆ ಕ್ರಿಸ್ ಜಾರ್ಡನ್ ಆಯ್ಕೆಯಾಗಿದ್ದಾರೆ. ಇನ್ನೊಂದೆಡೆ ಪಂಜಾಬ್ ತಂಡದಲ್ಲಿ ಹರಪ್ರೀತ್ ಹಾಗೂ ರಾಜ್ ಬಾವಾ ಸ್ಥಾನಕ್ಕೆ ಕ್ರಮವಾಗಿ ವೈಭವ್ ಹಾಗೂ ಜಿತೇಶ್ ಆಯ್ಕೆಯಾಗಿದ್ದಾರೆ.

ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಚೆನ್ನೈ, ಲಯಕ್ಕೆ ಮರಳುವ ಇರಾದೆಯಲ್ಲಿದೆ. ಈ ಎಲ್ಲ ಸವಾಲುಗಳನ್ನು ಹೊಸ ನಾಯಕ ರವೀಂದ್ರ ಜಡೇಜ ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲವೆನಿಸಿದೆ.

ಇನ್ನೊಂದೆಡೆ ಪಂಜಾಬ್ ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಸೋಲನ್ನು ಕಂಡಿದೆ. ಮಯಂಕ್ ಅಗರವಾಲ್ ಪಡೆ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT