ಶನಿವಾರ, ಜುಲೈ 2, 2022
25 °C

IPL 2022: ಹಾಲಿ ಚಾಂಪಿಯನ್ ಚೆನ್ನೈ ವಿರುದ್ಧ ಕೆಕೆಆರ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಕಳೆದ ವರ್ಷ ಯುಎಇನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ. 

ಇದನ್ನೂ ಓದಿ: 

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ, ಮಹೇಂದ್ರ ಸಿಂಗ್ ಧೋನಿ ಸಮಯೋಚಿತ ಅರ್ಧಶತಕದ (50*) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 131 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ ಕೆಕೆಆರ್, ಅಜಿಂಕ್ಯ ರಹಾನೆ (44) ಹಾಗೂ ಸ್ಯಾಮ್ಸ್ ಬಿಲ್ಲಿಂಗ್ಸ್ (25) ಆಕರ್ಷಕ ಬ್ಯಾಟಿಂಗ್ ನೆರವಿನಿಂದ 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.  

ಕೆಕೆಆರ್‌ಗೆ ಸುಲಭ ಗುರಿ...
ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಅಜಿಂಕ್ಯ ರಹಾನೆ ಹಾಗೂ ವೆಂಕಟೇಶ್ ಅಯ್ಯರ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 43 ರನ್ ಪೇರಿಸಿದರು. 

ಈ ವೇಳೆ ಉತ್ತಮವಾಗಿ ಆಡುತ್ತಿದ್ದ ವೆಂಕಟೇಶ್ ಅಯ್ಯರ್ (16) ಅವರನ್ನು ಡ್ವೇನ್ ಬ್ರಾವೊ ಹೊರದಬ್ಬಿದರು. ಈ ಹಂತದಲ್ಲಿ ಜೊತೆಗೂಡಿದ ರಹಾನೆ ಹಾಗೂ ನಿತೀಶ್ ರಾಣಾ ತಂಡವನ್ನು ಮುನ್ನಡೆಸಿದರು. 

ಆದರೆ ರಾಣಾ (21) ಅವರಿಗೂ ಪೆವಿಲಿಯನ್ ಹಾದಿ ತೋರಿಸಿದ ಬ್ರಾವೊ ಮಗದೊಮ್ಮೆ ತಿರುಗೇಟು ನೀಡಿದರು. ಈ ವೇಳೆ ತಂಡವು 10 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತ್ತು. 

ಈ ನಡುವೆ ಅರ್ಧಶತಕದ ಸನಿಹದಲ್ಲಿ ಅಜಿಂಕ್ಯ ರಹಾನೆ ಎಡವಿದರು. 34 ಎಸೆತಗಳನ್ನು ಎದುರಿಸಿದ ರಹಾನೆ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 44 ರನ್ ಗಳಿಸಿದರು. 

ಅಂತಿಮ ಹಂತದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ಸುಲಭ ಗೆಲುವು ದಾಖಲಿಸುವಲ್ಲಿ ನೆರವಾದರು. 

ನಾಯಕನ ಆಟವಾಡಿದ ಅಯ್ಯರ್ 20 ರನ್ ಗಳಿಸಿ ಔಟಾಗದೆ ಉಳಿದರು. 

ಬ್ರಾವೊ ದಾಖಲೆ...
ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ ಡ್ವೆನ್ ಬ್ರಾವೊ, ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಶ್ರೀಲಂಕಾದ ಲಸಿತ್ ಮಾಲಿಂಗ (170 ವಿಕೆಟ್) ದಾಖಲೆಯನ್ನು ಸರಿಗಟ್ಟಿದ್ದರು.  

ಧೋನಿ ಅರ್ಧಶತಕ...
ಈ ಮೊದಲು ಮಹೇಂದ್ರ ಸಿಂಗ್ ಧೋನಿ ಅರ್ಧಶತಕದ (50*) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 131 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. 

ಟಾಸ್ ಸೋತು ಬ್ಯಾಟಿಂಗ್‌ಗೆ  ಆಹ್ವಾನಿಸಲ್ಪಟ್ಟ ಚೆನ್ನೈ ತಂಡದ ಆರಂಭ ಉತ್ತಮವಾಗಿರಲಿಲ್ಲ. 28 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಋತುರಾಜ್ ಗಾಯಕವಾಡ್ (0) ಹಾಗೂ ಡೆವೊನ್ ಕಾನ್ವೆ (3) ವಿಕೆಟ್‌ಗಳನ್ನು ಕಳೆದುಕೊಂಡಿತು. ಇವರಿಬ್ಬರನ್ನು ಹೊರದಬ್ಬಿದ ಉಮೇಶ್ ಯಾದವ್ ನಿಖರ ದಾಳಿ ಸಂಘಟಿಸಿದರು.  

ರಾಬಿನ್ ಉತ್ತಪ್ಪ (28) ಹಾಗೂ ಅಂಬಡಿ ರಾಯುಡು (15) ಉತ್ತಮ ಆರಂಭ ಪಡೆದರೂ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ. ಶಿವಂ ದುಬೆ (3) ಕೂಡ ನಿರಾಸೆ ಮೂಡಿಸಿದರು. ಪರಿಣಾಮ 10.5 ಓವರ್‌ಗಳಲ್ಲಿ 61 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. 

ಈ ಹಂತದಲ್ಲಿ ಜೊತೆಗೂಡಿದ ನಾಯಕ ರವೀಂದ್ರ ಜಡೇಜ ಹಾಗೂ ಮಹೇಂದ್ರ ಸಿಂಗ್ ಧೋನಿ ಮುರಿಯದ ಆರನೇ ವಿಕೆಟ್‌ಗೆ 70 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 

ಆರಂಭದಲ್ಲಿ ನಿಧಾನವಾಗಿ ಆಡಿದ ಧೋನಿ, ಬಳಿಕ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು.  

ಅಲ್ಲದೆ ಐಪಿಎಲ್ 15ನೇ ಆವೃತ್ತಿಯಲ್ಲಿ ಅರ್ಧಶತಕ ಗಳಿಸಿದ ಮೊದಲ ಬ್ಯಾಟರ್ ಎನಿಸಿದರು. 38 ಎಸೆತಗಳನ್ನು ಎದುರಿಸಿದ ಧೋನಿ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. 

ಅವರಿಗೆ ತಕ್ಕ ಸಾಥ್ ನೀಡಿದ ಜಡೇಜ 28 ಎಸೆತಗಳಲ್ಲಿ ಒಂದು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಔಟಾಗದೆ ಉಳಿದರು. ಕೆಕೆಆರ್ ಪರ ಉಮೇಶ್ ಯಾದವ್ ಎರಡು ಮತ್ತು ವರುಣ್ ಚಕ್ರವರ್ತಿ ಹಾಗೂ ಆ್ಯಂಡ್ರೆ ರಸೆಲ್ ತಲಾ ಒಂದು ವಿಕೆಟ್ ಪಡೆದರು. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು