ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 DC vs LSG: ರಾಹುಲ್ ಫಿಫ್ಟಿ, ಮೊಹಸಿನ್‌ಗೆ 4 ವಿಕೆಟ್; ಲಖನೌ ಜಯಭೇರಿ

ಅಕ್ಷರ ಗಾತ್ರ

ಮುಂಬೈ: ನಾಯಕ ಕೆ.ಎಲ್. ರಾಹುಲ್ (77) ಹಾಗೂ ದೀಪಕ್ ಹೂಡಾ (52) ಆಕರ್ಷಕ ಅರ್ಧಶತಕ ಮತ್ತುಮೊಹಸಿನ್ ಖಾನ್ ನಾಲ್ಕು ವಿಕೆಟ್ ಸಾಧನೆ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಲಖನೌ, 10 ಪಂದ್ಯಗಳಲ್ಲಿ ಏಳನೇ ಗೆಲುವಿನೊಂದಿಗೆ ಒಟ್ಟು 14 ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಅತ್ತ ರಿಷಭ್ ಪಂತ್ ಬಳಗವು ಒಂಬತ್ತು ಪಂದ್ಯಗಳಲ್ಲಿ ಐದನೇ ಸೋಲಿಗೆ ಶರಣಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ಮೂರು ವಿಕೆಟ್ ನಷ್ಟಕ್ಕೆ 195 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಡೆಲ್ಲಿ, ಮೊಹಸಿನ್ ದಾಳಿಗೆ ಸಿಲುಕಿ ಏಳು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಸವಾಲಿನ ಮೊತ್ತ ಬೆನ್ನಟ್ಟಿದ ಡೆಲ್ಲಿ ಆರಂಭ ಉತ್ತಮವಾಗಿರಲಿಲ್ಲ. 13 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಪೃಥ್ವಿ ಶಾ (5) ಹಾಗೂ ಡೇವಿಡ್ ವಾರ್ನರ್ (3) ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಹಂತದಲ್ಲಿ ಕ್ರೀಸಿಗಿಳಿದ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಶ್ ಕೌಂಟರ್ ಅಟ್ಯಾರ್ ರಣನೀತಿಯನ್ನು ಅನುಸರಿಸಿದರು. ಅಲ್ಲದೆ ತೃತೀಯ ವಿಕೆಟ್‌ಗೆ 60 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಈ ಜೋಡಿಯನ್ನು ಕೆ. ಗೌತಮ್ ಬೇರ್ಪಡಿಸಿದರು. 20 ಎಸೆತ ಎದುರಿಸಿದ ಮಾರ್ಶ್ 37 ರನ್ (3 ಸಿಕ್ಸರ್, 3 ಬೌಂಡರಿ) ಗಳಿಸಿದರು.

ರವಿ ಬಿಷ್ಣೋಯಿ ದಾಳಿಯಲ್ಲಿ ಲಲಿತ್ ಯಾದವ್ (3) ಕ್ಲೀನ್ ಬೌಲ್ಡ್ ಆದರು. ಅತ್ತ ಉತ್ತಮವಾಗಿ ಆಡುತ್ತಿದ್ದ ಪಂತ್ ಅವರನ್ನು ಮೊಹಸಿನ್ ಖಾನ್ ಹೊರದಬ್ಬುವುದರೊಂದಿಗೆ ಡೆಲ್ಲಿ 13 ಓವರ್‌ಗಳಲ್ಲಿ 120 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಕೊನೆಯ ಹಂತದಲ್ಲಿ ರೋವ್‌ಮ್ಯಾನ್ ಪೊವೆಲ್ (35 ರನ್, 21 ಎಸೆತ), ಅಕ್ಷರ್ ಪಟೇಲ್ (ಅಜೇಯ 42, 24 ಎಸೆತ) ಹಾಗೂ ಕುಲದೀಪ್ ಯಾದವ್ (ಅಜೇಯ 16, 8 ಎಸೆತ) ಗೆಲುವಿಗಾಗಿ ಯತ್ನಿಸಿದರೂ ಯಶ ಸಿಗಲಿಲ್ಲ.

ಲಖನೌ ಪರ ನಿಖರ ದಾಳಿ ಮಾಡಿದ ಮೊಹಸಿನ್ 16 ರನ್ ತೆತ್ತು ನಾಲ್ಕು ವಿಕೆಟ್ ಕಿತ್ತು ಮಿಂಚಿದರು.

ರಾಹುಲ್, ದೀಪಕ್ ಅಮೋಘ ಅರ್ಧಶತಕ...

ಈ ಮೊದಲುರಾಹುಲ್ ಹಾಗೂ ದೀಪಕ್ ಅರ್ಧಶತಕಗಳ ಬಲದಿಂದ ಲಖನೌ ಮೂರುವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ತಂಡಕ್ಕೆ ನಾಯಕ ಕೆ.ಎಲ್. ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ (23) ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 42 ರನ್ ಪೇರಿಸಿದರು.

ಬಳಿಕ ದೀಪಕ್ ಹೂಡಾ ಜೊತೆ ಸೇರಿದ ರಾಹುಲ್ ತಂಡವನ್ನು ಮುನ್ನಡೆಸಿದರು. ರಾಹುಲ್ ಹಾಗೂ ದೀಪಕ್ ಆಕ್ರಮಣಕಾರಿ ಆಟವಾಡುವ ಮೂಲಕ ಗಮನ ಸೆಳೆದರು.

ರಾಹುಲ್ 35 ಹಾಗೂ ದೀಪಕ್ 32 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಅಲ್ಲದೆ ದ್ವಿತೀಯ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ಕಟ್ಟಿದರು.

34 ಎಸೆತಗಳನ್ನು ಎದುರಿಸಿದ ಹೂಡಾ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು.

ಅತ್ತ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಅಮೋಘ ಆಟ ಮುಂದುವರಿಸಿದ ರಾಹುಲ್, ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

ಈ ಮೂಲಕ ಲಖನೌ ವಿಕೆಟ್ ನಷ್ಟಕ್ಕೆ ರನ್ ಗಳಿಸಿತು. 51 ಎಸೆತಗಳನ್ನು ಎದುರಿಸಿದ ರಾಹುಲ್ ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 77 ರನ್ ಗಳಿಸಿದರು.

ಇನ್ನುಳಿದಂತೆ ಮಾರ್ಕಸ್ ಸ್ಟೋಯಿನಿಸ್ 17* ಹಾಗೂ ಕೃಣಾಲ್ ಪಾಂಡ್ಯ 9*ರನ್ಗಳಿಸಿದರು. ಡೆಲ್ಲಿ ಪರ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಗಳಿಸಿದರು.

ಲಖನೌ ಬ್ಯಾಟಿಂಗ್ ಆಯ್ಕೆ...

ಈ ಮೊದಲುಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.


ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಲಖನೌ ಆಡಿರುವ 9 ಪಂದ್ಯಗಳಲ್ಲಿ ಆರು ಗೆಲುವಿನೊಂದಿಗೆ ಒಟ್ಟು 12 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಅತ್ತ ಡೆಲ್ಲಿ ಎಂಟು ಪಂದ್ಯಗಳಲ್ಲಿ ತಲಾ ನಾಲ್ಕು ಗೆಲುವು ಹಾಗೂ ಸೋಲಿನೊಂದಿಗೆ ಆರನೇ ಸ್ಥಾನದಲ್ಲಿದೆ.

ಇದರೊಂದಿಗೆ ಲಖನೌ ಹಾಗೂ ಡೆಲ್ಲಿ ನಡುವೆ ನಿಕಟ ಪೈಪೋಟಿ ನಿರೀಕ್ಷಿಸಲಾಗುತ್ತಿದೆ.

ಹನ್ನೊಂದರ ಬಳಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT