ಭಾನುವಾರ, ಏಪ್ರಿಲ್ 2, 2023
33 °C
ಭಾನುಕ ಜೊತೆ 87 ರನ್‌ಗಳ ಜೊತೆಯಾಟದಲ್ಲಿ ಭಾಗಿ; ರಬಾಡ ಪ್ರಭಾವಿ ದಾಳಿ

IPL 2022 | GT vs PBKS: ಮಿಂಚಿದ ಶಿಖರ್‌; ಪಂಜಾಬ್‌ಗೆ ಜಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವಿ ಮುಂಬೈ: ಅಮೋಘ ಅರ್ಧಶತಕ ಗಳಿಸಿದ ಶಿಖರ್ ಧವನ್ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ದಿಟ್ಟ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. 

ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ 144 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ 16 ಓವರ್‌ಗಳಲ್ಲಿ 145 ರನ್ ಗಳಿಸಿತು. ಇದಕ್ಕಾಗಿ ತಂಡ ಕಳೆದುಕೊಂಡದ್ದು 2 ವಿಕೆಟ್ ಮಾತ್ರ. ಮೊತ್ತ 10 ರನ್ ಆಗಿದ್ದಾಗ ಆರಂಭಿಕ ಬ್ಯಾಟರ್ ಜಾನಿ ಬೆಸ್ಟೊ ವಿಕೆಟ್ ಕಳೆದುಕೊಂಡ ಪಂಜಾಬ್‌ಗೆ ಶಿಖರ್ ಧವನ್ ಮತ್ತು ಭಾನುಕ ರಾಜಪಕ್ಸ 87 ರನ್‌ಗಳ ಜೊತೆಯಾಟದ ಮೂಲಕ ಬಲ ತುಂಬಿದರು. ರಾಜಪಕ್ಸ ಔಟಾದ ನಂತರ ಶಿಖರ್ ಜೊತೆಗೂಡಿದ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಉತ್ತಮ ಆಟವಾಡಿದರು. ಇಬ್ಬರೂ ಔಟಾಗದೆ ಉಳಿದರು. 

ಸಾಯಿ ಸುದರ್ಶನ್ ಆಸರೆ: ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಗಿಸೊ ರಬಾಡ ದಾಳಿಯ ಮುಂದೆ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ್ದ ಗುಜರಾತ್ ತಂಡ ಗೌರವಾರ್ಹ ಮೊತ್ತ ಗಳಿಸಲು ಬಿ. ಸಾಯಿ ಸುದರ್ಶನ್ ಕಾರಣರಾದರು. ತಂಡ 20 ಓವರ್‌ಗಳಲ್ಲಿ 8ಕ್ಕೆ 143 ರನ್ ಗಳಿಸಿತು. ಮೂರನೇ ಓವರ್‌ನಲ್ಲಿ ಶುಭಮನ್ ಗಿಲ್ ರನೌಟ್ ಆಗುವುದರೊಂದಿಗೆ ತಂಡದ ಸಂಕಷ್ಟ ಆರಂಭವಾಯಿತು. ನಂತರದ ಓವರ್‌ನಲ್ಲಿಯೇ ರಬಾಡ ಎಸೆತದಲ್ಲಿ ವೃದ್ಧಿಮಾನ್ ಸಹಾ ವಿಕೆಟ್ ಗಳಿಸಿದರು.

ರಾಹುಲ್ ತೆವಾಟಿಯಾ, ರಶೀದ್ ಖಾನ್ ಮತ್ತು ಲಾಕಿ ಫರ್ಗ್ಯುಸನ್ ವಿಕೆಟ್‌ಗಳನ್ನೂ ರಬಾಡ ಬುಟ್ಟಿಗೆ ಹಾಕಿಕೊಂಡರು. ಡೇವಿಡ್ ಮಿಲ್ಲರ್ ಅಬ್ಬರಿಸದಂತೆ ಲಿಯಾಮ್ ಲಿವಿಂಗ್‌ಸ್ಟೋನ್ ನೋಡಿಕೊಂಡರು.ಒಂದು ಕಡೆ ವಿಕೆಟ್‌ಗಳು ಪತನವಾಗುತ್ತಿದ್ದರೂ ಸುದರ್ಶನ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಏಕಾಗ್ರಚಿತ್ತದಿಂದ ಬ್ಯಾಟಿಂಗ್ ಮಾಡಿದ ಅವರು ಸುಂದರ ಹೊಡೆತಗಳನ್ನು ಆಡಿದರು.

ಪಂಜಾಬ್ ಕಿಂಗ್ಸ್ ತಂಡದ ಪರ ಬೌಲರ್ ಕಗಿಸೊ ರಬಾಡ ಅಮೋಘ ಆಟ ಪ್ರದರ್ಶಿಸಿದರು.

 

ಟಾಸ್ ಸೋತರೂ, ಪಂಜಾಬ್ ಮಾತ್ರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿತು. 15 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್ ತಂಡದ ಪ್ರಮುಖ ನಾಲ್ಕು ವಿಕೆಟ್ ಪಡೆದುಕೊಂಡು ಹೆಚ್ಚಿನ ಮೊತ್ತ ಪೇರಿಸದಂತೆ ಬೌಲರ್‌ಗಳು ನೋಡಿಕೊಂಡರು.

ಗುಜರಾತ್ ಟೈಟನ್ಸ್ ತಂಡ, 15 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 100 ರನ್ ಗಳಿಸಿತ್ತು. ಉಭಯ ತಂಡಗಳಲ್ಲಿ ಆಟಗಾರರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಗುಜರಾತ್ ಟೈಟನ್ಸ್ ತಂಡ ಪ್ರಮುಖ ಮತ್ತು ಆರಂಭಿಕ ಆಟಗಾರರಾದ ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಐಪಿಎಲ್‌–2022 ಟೂರ್ನಿಯ 48ನೇ ಪಂದ್ಯದಲ್ಲಿ ಮಂಗಳವಾರ, ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಮುಂಬೈನ ಇಲ್ಲಿನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಇಂದಿನ ಪಂದ್ಯದಲ್ಲಿ, ಗುಜರಾತ್‌ ಟೈಟನ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಟೈಟನ್ಸ್‌ ಟೂರ್ನಿಯಲ್ಲಿ ಇರುವರೆಗೆ 9 ಪಂದ್ಯಗಳನ್ನು ಎಂಟರಲ್ಲಿ ಜಯ ಕಂಡಿದೆ. 16 ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಈ ಪಂದ್ಯವನ್ನೂ ಗೆದ್ದು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ಯೋಜನೆಯಲ್ಲಿದೆ.

ಆದರೆ, ಕನ್ನಡಿಗ ಮಯಂಕ್‌ ಅಗರವಾಲ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಸಹ ಇಷ್ಟೇ ಪಂದ್ಯಗಳನ್ನು ಆಡಿದೆಯಾದರೂ, ಕೇವಲ 4ರಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಪಾಯಿಂಟ್‌ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಪ್ಲೇ ಆಫ್‌ನತ್ತ ಹೆಜ್ಜೆ ಹಾಕಬೇಕಾದರೆ, ಪ್ರತಿ ಪಂದ್ಯವನ್ನೂ ಗೆಲ್ಲಬೇಕಾದ ಒತ್ತಡವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು