ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ‘ಹೊಸ ನಾಯಕ’ರ ಮುಖಾಮುಖಿಗೆ ರಂಗ ಸಜ್ಜು, ಚೆನ್ನೈ –ಕೋಲ್ಕತ್ತ ಹಣಾಹಣಿ

Last Updated 25 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಆಧಾರಸ್ತಂಭಗಳಾಗಿರುವ ಇಬ್ಬರು ಆಟಗಾರರು ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿಯಲಿದ್ದಾರೆ.

ಇಲ್ಲಿ ಆರಂಭವಾಗಲಿರುವ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಆ ಇಬ್ಬರು ಆಟಗಾರರು ರವೀಂದ್ರ ಜಡೇಜ ಮತ್ತು ಶ್ರೇಯಸ್ ಅಯ್ಯರ್. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಜಡೇಜ ಮತ್ತು ರನ್ನರ್ ಅಪ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳನ್ನು ಇವರಿಬ್ಬರೂ ಮುನ್ನಡೆಸಲಿದ್ದಾರೆ.

ಹೋದ ಬಾರಿ ಚಾಂಪಿಯನ್ ಆಗಿದ್ದ ತಂಡಕ್ಕೆ ಮಹೇಂದ್ರಸಿಂಗ್ ಧೋನಿ ನಾಯಕತ್ವ ವಹಿಸಿದ್ದರು. ಗುರುವಾರವಷ್ಟೇ ಅವರು ನಾಯಕತ್ವವನ್ನು ಜಡೇಜಗೆ ಹಸ್ತಾಂತರಿಸಿದ್ದಾರೆ. ಅದರಿಂದಾಗಿ ತಂಡದ ವರ್ಚಸ್ಸು ಉಳಿಸಿಕೊಳ್ಳುವ ಸವಾಲು ಎಡಗೈ ಆಲ್‌ರೌಂಡರ್ ಜಡೇಜ ಮುಂದಿದೆ. ಚೆನ್ನೈ ತಂಡದಲ್ಲಿ ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಡ್ವೆನ್ ಬ್ರಾವೊ ಅವರಂತಹ ಅನುಭವಿಗಳು ಮತ್ತು ಋತುರಾಜ್ ಗಾಯಕವಾಡ್, ಶಿವಂ ದುಬೆ ಮತ್ತು ರಾಜವರ್ಧನ್ ಹಂಗರ್ಗೆಕರ್ ಅವರಂತಹ ಯುವ ಪ್ರತಿಭೆಗಳೂ ಇದ್ದಾರೆ. ಆದ್ದರಿಂದ ಕಣಕ್ಕಿಳಿಯುವ ಹನ್ನೊಂದರ ಬಳಗದ ಆಯ್ಕೆ ಮಾಡುವಲ್ಲಿ ಜಡೇಜ ಯಾವ ರೀತಿ ಯೋಜನೆ ರೂಪಿಸುವರು ಎಂಬುದೇ ಈಗ ಕುತೂಹಲದ ಸಂಗತಿ. ಬೌಲಿಂಗ್‌ನಲ್ಲಿ ದೀಪಕ್ ಚಾಹರ್ ಪ್ರಮುಖ ಅಸ್ತವಾಗಲಿದ್ದಾರೆ.

ಕೋಲ್ಕತ್ತ ತಂಡದಲ್ಲಿಯೂ ಅಜಿಂಕ್ಯ ರಹಾನೆ ಅವರಂತಹ ಅನುಭವಿ ಆಟಗಾರನಿಗೆ ಶ್ರೇಯಸ್ ಯಾವ ರೀತಿಯ ಅವಕಾಶ ನೀಡುವರು ಎಂಬುದನ್ನು ಕಾದು ನೋಡಬೇಕಿದೆ. ಆ್ಯಂಡ್ರೆ ರಸೆಲ್, ಆ್ಯರನ್ ಫಿಂಚ್ ತಮ್ಮ ನೈಜ ಲಯಕ್ಕೆ ಮರಳಿದರೆ ಶ್ರೇಯಸ್ ಕಾರ್ಯ ನಿರ್ವಹಣೆ ಸುಲಭವಾಗಲಿದೆ. ವೆಂಕಟೇಶ್ ಅಯ್ಯರ್, ಸುನಿಲ್ ನಾರಾಯಣ್ ಆಲ್‌ರೌಂಡ್ ಆಟವೂ ಮಹತ್ವವಾಗಲಿದೆ.

ತಂಡಗಳು:ಚೆನ್ನೈ ಸೂಪರ್ ಕಿಂಗ್ಸ್:ರವೀಂದ್ರ ಜಡೇಜ(ನಾಯಕ),ಮಹೇಂದ್ರ ಸಿಂಗ್ ಧೋನಿ,ಸಿ. ಹರಿ ನಿಶಾಂತ್,ಡೆವೊನ್ ಕಾನ್ವೆ,ರಾಬಿನ್ ಉತ್ತಪ್ಪ,ಋತುರಾಜ್ ಗಾಯಕವಾಡ್,ಸುಬ್ರಾಂಶು ಸೇನಾಪತಿ,ಅಂಬಟಿ ರಾಯುಡು,ಎನ್.ಜಗದೀಶನ್,ಕ್ರಿಸ್ ಜೋರ್ಡಾನ್,ಡ್ವೇನ್ ಪ್ರಿಟೋರಿಯಸ್,ಡ್ವೇನ್ ಬ್ರಾವೊ,ಕೆ.ಭಗತ್ ವರ್ಮಾ,ಮಿಚೆಲ್ ಸ್ಯಾಂಟನರ್, ರಾಜವರ್ಧನ್ ಹಂಗರ್ಗೇಕರ್,ಶಿವಂ ದುಬೆ,ಆ್ಯಡಂ ಮಿಲ್ನೆ,ದೀಪಕ್ ಚಾಹರ್,ಕೆ.ಎಂ.ಆಸಿಫ್,ಮಹೀಶ್ ತೀಕ್ಷಣ,ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ,ಸಿಮರ್‌ಜೀತ್‌ ಸಿಂಗ್,ತುಷಾರ್ ದೇಶಪಾಂಡೆ,

ಕೋಲ್ಕತ್ತ ನೈಟ್ ರೈಡರ್ಸ್:ಶ್ರೇಯಸ್ ಅಯ್ಯರ್ (ನಾಯಕ),ಅಜಿಂಕ್ಯ ರಹಾನೆ,ರಿಂಕು ಸಿಂಗ್,ಅಲೆಕ್ಸ್ ಹೇಲ್ಸ್,ಆ್ಯರನ್‌ ಫಿಂಚ್,ಅಭಿಜೀತ್ ತೋಮರ್,ರಮೇಶ್ ಕುಮಾರ್,ಪ್ರಥಮ್ ಸಿಂಗ್,ಸ್ಯಾಮ್ ಬಿಲಿಂಗ್ಸ್,ಶೆಲ್ಡನ್ ಜಾಕ್ಸನ್,ಬಾಬಾ ಇಂದ್ರಜೀತ್,ಪ್ಯಾಟ್ ಕಮಿನ್ಸ್,ಮೊಹಮ್ಮದ್ ನಬಿ,ನಿತೀಶ್ ರಾಣಾ, ಶಿವಂ ಮಾವಿ,ಅನುಕೂಲ್ ರಾಯ್,ಚಮಿಕಾ ಕರುಣರತ್ನೆ,ಅಮನ್ ಖಾನ್,ಆ್ಯಂಡ್ರೆ ರಸೆಲ್,ವೆಂಕಟೇಶ್ ಅಯ್ಯರ್,ಉಮೇಶ್ ಯಾದವ್,ರಸಿಕ್‌ ದಾರ್,ಟಿಮ್ ಸೌಥಿ,ಅಶೋಕ್ ಶರ್ಮಾ,ಸುನಿಲ್ ನಾರಾಯಣ್,ವರುಣ್ ಚಕ್ರವರ್ತಿ

ಎರಡು ಡಿಆರ್‌ಎಸ್‌; ‘ಮಂಕಡಿಂಗ್‌’ಗೆ ಅವಕಾಶ
ಎರಡು ಡಿಆರ್‌ಎಸ್‌, ಮಂಕಂಡಿಂಗ್‌ನಲ್ಲಿ ರನೌಟ್ ಸೇರಿದಂತೆ ಎಂಸಿಸಿ ಜಾರಿಗೆ ತಂದಿರುವ ಹೊಸ ನಿಯಮಗಳೆಲ್ಲವೂ ಈ ಬಾರಿಯ ಐಪಿಎಲ್‌ನಲ್ಲಿ ಇರುತ್ತವೆ.

* ಅಂಪೈರ್ ತೀರ್ಪು ಮರುಪರಿಶೀಲನೆ (ಡಿಆರ್‌ಎಸ್‌) ಪದ್ಧತಿಯಡಿ ಈ ಹಿಂದೆ ಒಂದು ತಂಡಕ್ಕೆ ಇನಿಂಗ್ಸ್‌ನಲ್ಲಿ ಒಂದು ಅವಕಾಶ ಮಾತ್ರ ನೀಡಲಾಗುತ್ತಿತ್ತು. ಈ ಬಾರಿಯ ಟೂರ್ನಿಯ ಪಂದ್ಯಗಳಲ್ಲಿ ಪ್ರತಿ ತಂಡಕ್ಕೆ ಪ್ರತಿ ಇನಿಂಗ್ಸ್‌ನಲ್ಲಿ ಎರಡು ಡಿಆರ್‌ಎಸ್‌ ಅವಕಾಶಗಳು ಲಭಿಸಲಿವೆ.

* ಕೋವಿಡ್–19ರ ಸಂದರ್ಭದಲ್ಲಿ ಚೆಂಡಿಗೆ ಎಂಜಲು ಸವರುವುದರ ಮೇಲೆ ಐಸಿಸಿ ನಿಷೇಧ ಹೇರಿತ್ತು. ಐಪಿಎಲ್‌ನಲ್ಲಿ ಈ ಬಾರಿ ಈ ನಿಯಮ ಜಾರಿಯಲ್ಲಿರುತ್ತೆ.

* ಬೌಲರ್ ಚೆಂಡು ರಿಲೀಸ್ ಮಾಡುವ ಮೊದಲೇ ನಾನ್‌ ಸ್ಟ್ರೈಕರ್ ಕ್ರೀಸ್ ಬಿಟ್ಟರೆ ರನೌಟ್ ಮಾಡುವುದಕ್ಕೂ (ಮಂಕಡಿಂಗ್) ಹೊಸ ನಿಯಮದಲ್ಲಿ ಅವಕಾಶವಿದೆ.

* ತಂಡದಲ್ಲಿ ಸೋಂಕು ಕಾಣಿಸಿಕೊಂಡು 12 ಆಟಗಾರರು (ಭಾರತದ 7 ಆಟಗಾರರು ಕಡ್ಡಾಯ) ಆಟಕ್ಕೆ ಲಭ್ಯ ಇಲ್ಲದೇ ಇದ್ದರೆ ಆ ಪಂದ್ಯವನ್ನು ಮರುನಿಗದಿ ಮಾಡಲಾಗುತ್ತದೆ. ಈ ಕುರಿತು ಐಪಿಎಲ್ ತಾಂತ್ರಿಕ ಸಮಿತಿ ನಿರ್ಧಾರ ಕೈಗೊಳ್ಳಲಿದೆ.

* ಬ್ಯಾಟರ್ ಕ್ಯಾಚ್ ಔಟ್‌ ಆದಾಗ ನಾನ್‌ಸ್ಟ್ರೈಕರ್ ಕ್ರೀಸ್‌ನ ಅರ್ಧಭಾಗವನ್ನು ದಾಟಿದ್ದರೆ ಮುಂದಿನ ಎಸೆತ ಎದುರಿಸುವ ಅವಕಾಶ ಆ ಬ್ಯಾಟರ್‌ಗೆ ಲಭಿಸುತ್ತಿತ್ತು. ಆದರೆ ಇನ್ನು ಮುಂದೆ ಹೊಸ ಬ್ಯಾಟರ್ ಸ್ಟ್ರೈಕ್‌ ತೆಗೆದುಕೊಳ್ಳಲು ಅರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT