ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಹರಾಜಿಗೂ ಮುನ್ನವೇ ರಾಹುಲ್‌ಗೆ ಬಿಗ್‌ ಶಾಕ್, ಫ್ರಾಂಚೈಸಿ ಹೇಳಿದ್ದೇನು?

Last Updated 28 ಅಕ್ಟೋಬರ್ 2021, 6:53 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್‌ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 15ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಪಂಜಾಬ್‌ ಕಿಂಗ್ಸ್‌ ತಂಡ ನಾಯಕ ಕೆ.ಎಲ್‌.ರಾಹುಲ್‌ ಅವರ ಬಗ್ಗೆ ಫ್ರಾಂಚೈಸಿಯ ಸಹ ಮಾಲೀಕ ನೆಸ್ ವಾಡಿಯಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮುಂಬರುವ ಐಪಿಎಲ್‌ ಟೂರ್ನಿಗೆ ಲಖನೌ, ಅಹಮದಾಬಾದ್ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಈ ಎರಡು ತಂಡಗಳು ಸೇರಿದಂತೆ ಒಟ್ಟು ಹತ್ತು ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಲ್ಲಿ ಹಲವು ಬದಲಾವಣೆಗಳು ನಡೆಯಲಿವೆ.

ಕೆ.ಎಲ್. ರಾಹುಲ್ ಅವರು ನಾಯಕರಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಎರಡು ವರ್ಷಗಳಿಂದ ಮುನ್ನಡೆಸಿದ್ದಾರೆ. ಸದ್ಯ ರಾಹುಲ್‌ ಅವರ ಬಗ್ಗೆ ನೆಸ್ ವಾಡಿಯಾ ನೀಡಿರುವ ಹೇಳಿಕೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ನೆಸ್ ವಾಡಿಯಾ ಹೇಳಿದ್ದೇನು?

ಕೆ.ಎಲ್‌.ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದಲ್ಲಿ ಉಳಿಸಿಕೊಳ್ಳುವುದರ ಕುರಿತು ಪ್ರತಿಕ್ರಿಯಿಸಿರುವ ನೆಸ್ ವಾಡಿಯಾ ‘ನಮ್ಮ ತಂಡದಲ್ಲಿ ಕೆ.ಎಲ್. ರಾಹುಲ್ ಹೊರತುಪಡಿಸಿ ಹಲವಾರು ಆಟಗಾರರಿದ್ದಾರೆ. ಮೊದಲಿಗೆ, ಒಬ್ಬ ಆಟಗಾರನಿಂದ ಇಡೀ ತಂಡವಾಗುವುದಿಲ್ಲ. ಪ್ರತಿಯೊಬ್ಬ ಆಟಗಾರನೂ ಸಹ ತನ್ನದೇ ಆದ ವಿಶೇಷ ಕೌಶಲವನ್ನು ಹೊಂದಿರುತ್ತಾನೆ. ನಾವು ಅದನ್ನು ಅರಿತುಕೊಳ್ಳಬೇಕಿದೆ. ಯಾವುದೇ ತಂಡವೂ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಬಾರದು’ ಎಂದಿದ್ದಾರೆ.

‘ರಾಹುಲ್ ಒಬ್ಬ ಶ್ರೇಷ್ಠ ಆಟಗಾರ. ಕಳೆದ ಎರಡು ವರ್ಷಗಳಲ್ಲಿ ರಾಹುಲ್ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಆದರೆ, ಒಬ್ಬ ಆಟಗಾರನ ಮೇಲೆ ಇಡೀ ತಂಡ ಅವಲಂಬಿತವಾಗಿರುವುದಿಲ್ಲ’ ಎಂದು ನೆಸ್ ವಾಡಿಯಾ ಹೇಳಿದ್ದಾರೆ.

ವಾಡಿಯಾ ಹೇಳಿಕೆ ಬೆನ್ನಲ್ಲೇ ರಾಹುಲ್ ಅವರು ಪಂಜಾಬ್ ಕಿಂಗ್ಸ್ ತಂಡದಲ್ಲಿ ಉಳಿದುಕೊಳ್ಳುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿವೆ.

ಇತ್ತೀಚೆಗೆ ಮುಕ್ತಾಯಗೊಂಡ 14ನೇ ಐಪಿಎಲ್‌ ಟೂರ್ನಿಯಲ್ಲಿ 14 ಪಂದ್ಯಗಳನ್ನು ಆಡಿದ ಪಂಜಾಬ್‌ ಕಿಂಗ್ಸ್‌ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 8 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಈ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 6ನೇ ಸ್ಥಾನ ಪಡೆದಿತ್ತು.

2018ರ ಐಪಿಎಲ್ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ ರಾಹುಲ್ ಅವರನ್ನು ₹ 11 ಕೋಟಿಗೆ ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT