ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 PBKS vs RR: ಚಾಹಲ್, ಜೈಸ್ವಾಲ್ ಮಿಂಚು; ಮುಗ್ಗರಿಸಿದ ಮಯಂಕ್ ಪಡೆ

ಅಕ್ಷರ ಗಾತ್ರ

ಮುಂಬೈ: ಮೊದಲು ಯಜುವೇಂದ್ರ ಚಾಹಲ್ ಸ್ಪಿನ್ ಮೋಡಿ (28ಕ್ಕೆ 3 ವಿಕೆಟ್) ಬಳಿಕ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬಿರುಸಿನ ಅರ್ಧಶತದ (68) ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಈ ಮೂಲಕ ಗೆಲುವಿನ ಹಾದಿಗೆ ಮರಳಿರುವ ರಾಜಸ್ಥಾನ್,ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅತ್ತ ಮಯಂಕ್ ಅಗರವಾಲ್ ಪಡೆಯ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣವೆನಿಸಿದೆ.

ಶನಿವಾರ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ಜಾನಿ ಬೆಸ್ಟೊ ಅರ್ಧಶತಕದ (56) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು.

ರಾಜಸ್ಥಾನ್ ಪರ ಮೂರು ವಿಕೆಟ್ ಗಳಿಸಿದ ಚಾಹಲ್, ಪಂಜಾಬ್ ಓಟಕ್ಕೆ ಕಡಿವಾಣ ಹಾಕಿದರು. ಬಳಿಕ ಗುರಿ ಬೆನ್ನಟ್ಟಿದ್ದ ರಾಜಸ್ಥಾನ್, ಜೈಸ್ವಾಲ್ ಸಮಯೋಚಿತ ಫಿಫ್ಟಿ ನೆರವಿನಿಂದ ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ 19.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ ಏಳನೇ ಗೆಲುವಿನೊಂದಿಗೆ ಒಟ್ಟು 14 ಅಂಕ ಸಂಪಾದಿಸಿರುವ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಅತ್ತ ಪಂಜಾಬ್ 11 ಪಂದ್ಯಗಳಲ್ಲಿ ಆರನೇ ಸೋಲಿಗೆ ಶರಣಾಗಿದ್ದು, ಏಳನೇ ಸ್ಥಾನದಲ್ಲಿದೆ.

ಪಂಜಾಬ್‌ಗೆ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ನಾಲ್ಕು ಓವರ್‌ಗಳಲ್ಲೇ 46 ರನ್ ಪೇರಿಸಿದರು.

ಕಗಿಸೊ ರಬಾಡ ಅವರ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 20 ರನ್ ಸಿಡಿಸಿದ ಬಟ್ಲರ್ ಅಬ್ಬರಿಸಿದರು. ಆದರೆ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಔಟ್ ಆದರು.

16 ಎಸೆತಗಳನ್ನು ಎದುರಿಸಿದ ಬಟ್ಲರ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 30 ರನ್ ಗಳಿಸಿದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿ‌ಎಲ್‌ನಲ್ಲಿ 600 ರನ್ ಸಾಧನೆ ಮಾಡಿದರು.

ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು. ನಾಯಕ ಸಂಜು ಸ್ಯಾಮ್ಸನ್ 23 ರನ್‌‌ಗಳ (12 ಎಸೆತ, 4 ಬೌಂಡರಿ) ಕಾಣಿಕೆ ನೀಡಿದರು.

ಈ ಹಂತದಲ್ಲಿ ಜೊತೆ ಸೇರಿದ ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ತ ಪಡಿಕ್ಕಲ್ ಮೂರನೇ ವಿಕೆಟ್‌ಗೆ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಆಕರ್ಷಕ ಬ್ಯಾಟಿಂಗ್ ಕಟ್ಟಿದ ಜೈಸ್ವಾಲ್, ಕೇವಲ 33 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಈ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು.

41 ಎಸೆತಗಳನ್ನು ಎದುರಿಸಿದ ಜೈಸ್ವಾಲ್, ಐಪಿಎಲ್‌ನಲ್ಲಿ ಜೀವನಶ್ರೇಷ್ಠ 68 ರನ್ ಗಳಿಸಿದರು. ಅವರ ಈ ಬಿರುಸಿನ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದ್ದವು.

ಅಂತಿಮ 30 ಎಸೆತಗಳಲ್ಲಿ ರಾಜಸ್ಥಾನ್ ಗೆಲುವಿಗೆ 47 ರನ್ ಬೇಕಾಗಿತ್ತು. ಈ ವೇಳೆ ಬಿರುಸಿನ ಆಟವಾಡಿದ ಶಿಮ್ರಾನ್ ಹೆಟ್ಮೆಯರ್ ಆರ್‌ಆರ್‌ಗೆ ಅರ್ಹ ಗೆಲುವು ಒದಗಿಸಿಕೊಡಲು ನೆರವಾದರು. ಅವರಿಗೆ ದೇವದತ್ತ ಪಡಿಕ್ಕಲ್ ತಕ್ಕ ಸಾಥ್ ಕೊಟ್ಟರು.

ಅಂತಿಮವಾಗಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಕೇವಲ 16 ಎಸೆತಗಳನ್ನು ಎದುರಿಸಿದ ಹೆಟ್ಮೆಯರ್ 31 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಪಡಿಕ್ಕಲ್ 32 ಎಸೆತಗಳಲ್ಲಿ 31 ರನ್ ಗಳಿಸಿದರು.

ಪಂಜಾಬ್ ಪರ ಅರ್ಶದೀಪ್ ಎರಡು ವಿಕೆಟ್ ಗಳಿಸಿದರು.

ಚಾಹಲ್‌ಗೆ ಮೂರು ವಿಕೆಟ್, ಪಂಜಾಬ್ ಸವಾಲಿನ ಮೊತ್ತ...

ಈ ಮೊದಲುಜಾನಿ ಬೆಸ್ಟೊ ಆಕರ್ಷಕ ಅರ್ಧಶತಕದ ನೆರವಿನಿಂದ (56) ಪಂಜಾಬ್ ಕಿಂಗ್ಸ್ ತಂಡವುಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಉತ್ತಮ ಆರಂಭವನ್ನು ಪಡೆದುಕೊಂಡಿತು. ಜಾನಿ ಬೆಸ್ಟೊ ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು.

ಅಲ್ಲದೆ ಮೊದಲ ವಿಕೆಟ್‌ಗೆ ಶಿಖರ್ ಧವನ್ ಜೊತೆಗೆ 5.1 ಓವರ್‌ಗಳಲ್ಲಿ 47 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಧವನ್ 12 ರನ್ ಗಳಿಸಿ ಔಟ್ ಆದರು.

ಭಾನುಕ ರಾಜಪಕ್ಸ 27 ರನ್‌ಗಳ (18 ಎಸೆತ, 2 ಬೌಂಡರಿ, 2 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು. ಅವರನ್ನು ಯಜುವೇಂದ್ರ ಚಾಹಲ್ ಹೊರದಬ್ಬಿದರು.

ಅತ್ತ ರಾಜಸ್ಥಾನ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಬೆಸ್ಟೊ 34 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು.

ಆದರೆ 15ನೇ ಓವರ್‌ನಲ್ಲಿ ನಾಯಕ ಮಯಂಕ್ ಅಗರವಾಲ್ (15) ಹಾಗೂ ಬೆಸ್ಟೊ ವಿಕೆಟ್ ಗಳಿಸಿದ ಚಾಹಲ್ ಡಬಲ್ ಆಘಾತ ನೀಡಿದರು. 40 ಎಸೆತಗಳನ್ನು ಎದುರಿಸಿದ ಬೆಸ್ಟೊ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಜಿತೇಶ್ ಶರ್ಮಾ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅರ್ಧಶತಕದ ಜೊತೆಯಾಟ ಕಟ್ಟುವ ಮೂಲಕ ಪಂಜಾಬ್ ಸವಾಲಿನ ಮೊತ್ತ ಪೇರಿಸಲು ನೆರವಾದರು.

ಈ ಮೂಲಕ ಪಂಜಾಬ್ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. 18 ಎಸೆತಗಳನ್ನು ಎದುರಿಸಿದ ಜಿತೇಶ್ 38 ರನ್ (18 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಇನ್ನೊಂದೆಡೆ ಲಿವಿಂಗ್‌ಸ್ಟೋನ್ 22 ರನ್ (14 ಎಸೆತ, 2 ಸಿಕ್ಸರ್) ಗಳಿಸಿದರು.

ರಾಜಸ್ಥಾನ್ ಪರ ಚಾಹಲ್ ಮೂರು ವಿಕೆಟ್ ಕಬಳಿಸಿದರು.

ಪಂಜಾಬ್ ಬ್ಯಾಟಿಂಗ್ ಆಯ್ಕೆ...

ಈ ಮೊದಲು ಟಾಸ್ ಗೆದ್ದಪಂಜಾಬ್ ಕಿಂಗ್ಸ್ ನಾಯಕ ಮಯಂಕ್ ಅಗರವಾಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಇದರೊಂದಿಗೆ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್, 11 ಪಂದ್ಯಗಳಲ್ಲಿ 10ನೇ ಬಾರಿ ಟಾಸ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ರಾಜಸ್ಥಾನ್ 10 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು, ನಾಲ್ಕರಲ್ಲಿ ಸೋಲು ಅನುಭವಿಸಿದ್ದು, ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಅತ್ತ 10 ಪಂದ್ಯಗಳಲ್ಲಿ ತಲಾ ಐದು ಗೆಲುವು ಹಾಗೂ ಸೋಲು ಅನುಭವಿಸಿರುವ ಪಂಜಾಬ್, 10 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

ಹನ್ನೊಂದರ ಬಳಗ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT