ಬುಧವಾರ, ಮೇ 25, 2022
31 °C

IPL 2022 RR vs GT: ರಾಜಸ್ಥಾನ್ ಮಣಿಸಿ ಅಗ್ರಸ್ಥಾನಕ್ಕೇರಿದ ಗುಜರಾತ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ:  ನಾಯಕ ಹಾರ್ದಿಕ್ ಪಾಂಡ್ಯ (87*) ಅಮೋಘ ಆಟದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 37 ರನ್ ಅಂತರದ ಗೆಲುವು ದಾಖಲಿಸಿದೆ. 

ಈ ಮೂಲಕ ಐಪಿಎಲ್‌ಗೆ ಇದೇ ಮೊದಲ ಬಾರಿಗೆ ಪದಾರ್ಪಣೆ ಮಾಡಿರುವ ಗುಜರಾತ್ ಟೈಟನ್ಸ್, ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕನೇ ಗೆಲುವಿನೊಂದಿಗೆ ಒಟ್ಟು ಎಂಟು ಅಂಕಗಳನ್ನು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

ಅತ್ತ ಸಂಜು ಸ್ಯಾಮ್ಸನ್ ಪಡೆ ಟೂರ್ನಿಯಲ್ಲಿ ಎರಡನೇ ಸೋಲಿಗೆ ಒಳಗಾಗಿದೆ. 

ಮುಂಬೈನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್, ಪಾಂಡ್ಯ ನಾಯಕನ ಆಟದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ ರಾಜಸ್ಥಾನ್, ಜೋಸ್ ಬಟ್ಲರ್ (54) ಹೋರಾಟದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ಸವಾಲಿನ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ಗೆ ಜೋಸ್ ಬಟ್ಲರ್ ಬಿರುಸಿನ ಆರಂಭವೊದಗಿಸಿದರು. ಆದರೆ ವಿಕೆಟ್‌ನ ಮತ್ತೊಂದು ತುದಿಯಿಂದ ಉತ್ತಮ ಬೆಂಬಲ ಸಿಗಲಿಲ್ಲ. ದೇವದತ್ ಪಡಿಕ್ಕಲ್ (0) ಹಾಗೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸಿಗಿಳಿದಿದ್ದ ಆರ್. ಅಶ್ವಿನ್ (8) ನಿರಾಸೆ ಮೂಡಿಸಿದರು.

ಅತ್ತ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಪವರ್ ಪ್ಲೇಯ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. 24 ಎಸೆತಗಳನ್ನು ಎದುರಿಸಿದ ಬಟ್ಲರ್ 54 ರನ್ (8 ಬೌಂಡರಿ, 3 ಸಿಕ್ಸರ್) ಗಳಿಸಿದರು. 

ಇದಾದ ಬೆನ್ನಲ್ಲೇ ನಾಯಕ ಸಂಜು ಸ್ಯಾಮ್ಸನ್ (11) ರನೌಟ್ ಆದರು. ರಸ್ಸಿ ವಾನ್ ಡರ್ ದುಸಾನ್ (6) ಪೆವಿಲಿಯನ್ ಸೇರುವುದರೊಂದಿಗೆ ರಾಜಸ್ಥಾನ್ 90 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.  

ಕೊನೆಯ ಹಂತದಲ್ಲಿ ಶಿಮ್ರಾನ್ ಹೆಟ್ಮೆಯರ್ (29), ರಿಯಾನ್ ಪರಾಗ್ (18) ಹಾಗೂ ಜೇಮ್ಸ್ ನೀಶಮ್ (17) ಪ್ರಯತ್ನಿಸಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. 

ಗುಜರಾತ್ ಪರ ಲಾಕಿ ಫರ್ಗ್ಯುಸನ್ ಹಾಗೂ ಚೊಚ್ಚಲ ಪಂದ್ಯ ಆಡುತ್ತಿರುವ ಯಶ್ ದಯಾಲ್ ತಲಾ ಮೂರು ವಿಕೆಟ್ ಕಬಳಿಸಿದರು. 

ಪಾಂಡ್ಯ ಅಮೋಘ ಆಟ...
ಗುಜರಾತ್ ಟೈಟನ್ಸ್, ಆರಂಭ ಉತ್ತಮವಾಗಿರಲಿಲ್ಲ. ತಂಡವು 53 ರನ್ ಗಳಿಸುವಷ್ಟರಲ್ಲಿ ಮ್ಯಾಥ್ಯೂ ವೇಡ್ (12), ಶುಭಮನ್ ಗಿಲ್ (13) ಹಾಗೂ ವಿಜಯ್ ಶಂಕರ್ (2) ವಿಕೆಟ್‌ಗಳನ್ನು ಕಳೆದುಕೊಂಡಿತು. 

ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಅಭಿನವ್ ಮನೋಹರ್ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡವನ್ನು ಮುನ್ನಡೆಸಿದರು. 

ನಾಯಕನ ಆಟವಾಡಿದ ಪಾಂಡ್ಯ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಮೂಲಕ ಸತತ ಎರಡನೇ ಫಿಫ್ಟಿ ಬಾರಿಸಿದರು. 

ಪಾಂಡ್ಯ ಹಾಗೂ ಅಭಿನವ್ ನಾಲ್ಕನೇ ವಿಕೆಟ್‌ಗೆ 55 ಎಸೆತಗಳಲ್ಲಿ 86 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 28 ಎಸೆತಗಳನ್ನು ಎದುರಿಸಿದ ಅಭಿನವ್ 43 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿದರು. 

ಅರ್ಧಶತಕದ ಬಳಿಕ ಹಾರ್ದಿಕ್ ಪಾಂಡ್ಯ ಮೈದಾನದ ಎಲ್ಲ ದಿಕ್ಕುಗಳಿಗೂ ಚೆಂಡನ್ನು ಅಟ್ಟಿಸಿದರು. ಅವರಿಗೆ ಡೇವಿಡ್ ಮಿಲ್ಲರ್ ಸಾಥ್ ನೀಡಿದರು. 

ಪಾಂಡ್ಯ ಹಾಗೂ ಮಿಲ್ಲರ್ ಕೇವಲ 25 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ ನೀಡಿದರು. ಪರಿಣಾಮ ಗುಜರಾತ್ ನಾಲ್ಕು ವಿಕೆಟ್ ನಷ್ಟಕ್ಕೆ 192 ರನ್ ಪೇರಿಸಿತು. 

52 ಎಸೆತಗಳನ್ನು ಎದುರಿಸಿದ ಪಾಂಡ್ಯ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 87 ರನ್ ಗಳಿಸಿ ಔಟಾಗದೆ ಉಳಿದರು. 14 ಎಸೆತಗಳನ್ನು ಎದುರಿಸಿದ ಮಿಲ್ಲರ್ 31 ರನ್  (5 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗುಳಿದರು. ರಾಜಸ್ಥಾನ್ ಪರ ಎಲ್ಲ ಬೌಲರ್‌ಗಳು ದುಬಾರಿಯೆನಿಸಿದರು. 

ರಾಜಸ್ಥಾನ್ ಫೀಲ್ಡಿಂಗ್...

ಈ ಮೊದಲು ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ಮತ್ತು ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಗುಜರಾತ್ ತಂಡಗಳು ಸದ್ಯದ ಟೂರ್ನಿಯಲ್ಲಿ ಸಮಬಲ ಸಾಧನೆ ಮಾಡಿವೆ. ಉಭಯ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಿ ಮೂರರಲ್ಲಿ ಗೆದ್ದಿವೆ. ಆದ್ದರಿಂದ ಈ ಪಂದ್ಯವು ರೋಚಕವಾಗುವ ನಿರೀಕ್ಷೆ ಗರಿಗೆದರಿದೆ. 

ಈ ಪಂದ್ಯವು ಸ್ಪಿನ್ ಮೋಡಿಗಾರರಾದ  ಯಜುವೇಂದ್ರ ಚಾಹಲ್ ಹಾಗೂ ರಶೀದ್ ಖಾನ್ ಅವರ ಜಿದ್ದಾಜಿದ್ದಿಗೆ ವೇದಿಕೆಯಾಗುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು