ಶುಕ್ರವಾರ, ಜುಲೈ 1, 2022
28 °C

IPL 2022 RCB vs RR: ರಿಯಾನ್‌ ಪರಾಗ್‌ ಅರ್ಧ ಶತಕ, ಆರ್‌ಸಿಬಿಗೆ 145 ರನ್‌ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಜು ಸ್ಯಾಮ್ಸನ್‌ ಆಟದ ವೈಖರಿ

ಪುಣೆ: ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ಸಂಸ್ಥೆ ಅಂಗಣದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬೌಲರ್‌ಗಳು ಆರಂಭಿಕ ಆಘಾತ ನೀಡಿದರು. ಬಹುಬೇಗ ಬಟ್ಲರ್‌ ವಿಕೆಟ್‌ ಉರುಳಿಸುವ ಮೂಲಕ ರಾಜಸ್ಥಾನ್‌ ರಾಯಲ್ಸ್‌ ರನ್‌ ಓಘಕ್ಕೆ ಕಡಿವಾಣ ಹಾಕಿದ್ದರಿಂದ ನಿಗದಿ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 144 ರನ್‌ ದಾಖಲಾಯಿತು.

ಮಧ್ಯ ಕ್ರಮಾಂಕದಲ್ಲಿ ಆಡಿದ ರಿಯಾನ್‌ ಪರಾಗ್‌ ಅವರು ತಂಡಕ್ಕೆ ಆಸರೆಯಾದರು. 30 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ತಂಡದ ಸ್ಕೋರ್‌ 140 ರನ್‌ ದಾಟಲು ನೆರವಾದರು. 4 ಸಿಕ್ಸರ್‌ ಮತ್ತು ಮೂರು ಫೋರ್‌ ಒಳಗೊಂಡ 56 ರನ್‌ ಗಳಿಸಿದರು.

ಆರ್‌ಸಿಬಿ ಪರ ಮೊಹಮ್ಮದ್‌ ಸಿರಾಜ್‌, ಜೋಶ್ ಹೇಜಲ್‌ವುಡ್‌ ಹಾಗೂ ಹಸರಂಗ ತಲಾ ಎರಡು ವಿಕೆಟ್‌ ಕಬಳಿಸಿದರು. ಹರ್ಷಲ್‌ ಪಟೇಲ್‌ ಒಂದು ವಿಕೆಟ್‌ ಪಡೆದರು.

ಇದನ್ನೂ ಓದಿ–

ಈ ಬಾರಿಯ ಐಪಿಎಲ್‌ನಲ್ಲಿ ಮೂರು ಶತಕಗಳನ್ನು ಸಿಡಿಸಿರುವ ರಾಜಸ್ಥಾನ್‌ ರಾಯಲ್ಸ್‌ನ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಇಂದಿನ ಪಂದ್ಯ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಆಡಲು ಅವಕಾಶ ಸಿಗಲಿಲ್ಲ. ಹ್ಯಾಜಲ್‌ವುಡ್‌ ಎಸೆತದಲ್ಲಿ ಬಟ್ಲರ್‌ ಹೊಡೆತವನ್ನು ಮೊಹಮ್ಮದ್‌ ಸಿರಾಜ್‌ ಕ್ಯಾಚ್‌ ಆಗಿ ಪರಿವರ್ತಿಸಿಕೊಂಡರು. 8 ರನ್‌ ಗಳಿಸಿದ್ದ ಬಟ್ಲರ್‌ ಪೆವಿಲಿಯನ್‌ಗೆ ಮರಳಿದರು.

ಬ್ಯಾಟಿಂಗ್‌ ಆರಂಭಿಸಿದ್ದ ಡೆವದತ್ತ ಪಡಿಕಲ್‌ (7) ಮತ್ತು ಬಟ್ಲರ್‌ ಜೋಡಿ ತಂಡಕ್ಕ ಉತ್ತಮ ಬುನಾದಿ ಹಾಕುವಲ್ಲಿ ವಿಫಲವಾಯಿತು. ಮೂರನೇ ಕ್ರಮಾಂಕದಲ್ಲಿ ಆಡಿದ ರವಿಚಂದ್ರನ್‌ ಅಶ್ವಿನ್‌ ಬಿರುಸಿನ ಆಟ ಪ್ರದರ್ಶಿಸಿದರು. ನಾಲ್ಕು ಬೌಂಡರಿಗಳ ಸಹಿತ 9 ಎಸೆತಗಳಲ್ಲಿ 17 ರನ್‌ ಕಲೆ  ಹಾಕಿ, ಸಿರಾಜ್‌ಗೆ ಕ್ಯಾಚ್‌ ಕೊಟ್ಟು ಹೊರ ನಡೆದರು.

ಎಂದಿನ ಆಟ ಪ್ರದರ್ಶಿಸಿದ ನಾಯಕ ಸಂಜು ಸ್ಯಾಮ್ಸನ್‌ ಮೂರು ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ತಂಡವನ್ನು ಬೃಹತ್‌ ಮೊತ್ತದತ್ತ ಕೊಂಡೊಯ್ಯುವ ಭರವಸೆ ಮೂಡಿಸಿದರು. ವಾನಿಂದು ಹಸರಂಗ ಎಸೆತದಲ್ಲಿ ಸಂಜು (27) ವಿಕೆಟ್‌ ಒಪ್ಪಿಸಿದರು. ಉಳಿದಂತೆ ಡ್ಯಾರಿಲ್‌ ಮಿಚೆಲ್‌ 16 ರನ್‌ ಕಾಣಿಕೆ ನೀಡಿದರು.

ಎರಡು ಬಾರಿ ಟಾಸ್‌

ಆರ್‌ಸಿಬಿ ತಂಡದ ನಾಯಕ ಫಫ್ ಡು‍ಪ್ಲೆಸಿ ಅವರು ಎರಡು ಬಾರಿ ನಾಣ್ಯವನ್ನು ಟಾಸ್‌ ಮಾಡಿದರು. ರಾಜಸ್ಥಾನ ರಾಯಲ್ಸ್‌ ಎದುರಿನ ಪಂದ್ಯದಲ್ಲಿ ಟಾಸ್‌ ಗೆದ್ದು ಆರ್‌ಸಿಬಿ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು.

ಐಪಿಎಲ್‌ನ ನಿರೂಪಕ ಟಾಸ್‌ ಹಾಕುವ ಬಗ್ಗೆ ವಿವರ ಪೂರ್ಣಗೊಳಿಸುವುದಕ್ಕೂ ಮುನ್ನವೇ ಡುಪ್ಲೆಸಿ ನಾಣ್ಯವನ್ನು ಮೇಲಕ್ಕೆ ಎಸೆದಿದ್ದರು. ನಿರೂಪಕ ನಿಕ್‌ ನೈಟ್‌ ಟಾಸ್‌ ನಿಲ್ಲಿಸುವಂತೆ ಕೂಗುತ್ತಿದ್ದಂತೆ, ಡುಪ್ಲೆಸಿ ನಾಣ್ಯವನ್ನು ಹಿಡಿದುಕೊಂಡರು. ಅನಂತರ ಮತ್ತೆ ಟಾಸ್‌ ಮಾಡುವಂತೆ ಡುಪ್ಲೆಸಿ ಅವರಿಗೆ ಸೂಚಿಸಲಾಯಿತು.

ಇದನ್ನೂ ಓದಿ–

ಆರ್‌ಸಿಬಿ ತಂಡದಲ್ಲಿ ಅನುಜ್‌ ರಾವತ್‌ ಅವರ ಬದಲು ರಜತ್‌ ಪಟೀದಾರ್‌ ಕಣಕ್ಕಿಳಿದಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ತಂಡದಲ್ಲಿ ಕೆಲವು ಬದಲಾವಣೆ ಮಾಡಿದ್ದಾರೆ. ಕರುಣ್‌ ನಾಯರ್‌ ಅವರ ಸ್ಥಾನಕ್ಕೆ ಡ್ಯಾರಿಲ್‌ ಮಿಚೆಲ್‌ ಹಾಗೂ ಒಬೆಡ್ ಬದಲು ಕುಲ್‌ದೀಪ್‌  ಸೇನ್‌ಗೆ ಅವಕಾಶ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು