ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | DC Vs CSK: ಡೆಲ್ಲಿ ತಂಡಕ್ಕೆ ಮೊದಲ ಜಯ- ಚೆನ್ನೈಗೆ ಮೊದಲ ಸೋಲು

Published 31 ಮಾರ್ಚ್ 2024, 18:30 IST
Last Updated 31 ಮಾರ್ಚ್ 2024, 18:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಸಾಂಘಿಕ ಆಟ ಪ್ರದರ್ಶಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಗೆಲುವಿನ ಖಾತೆಯನ್ನು ತೆರೆಯಿತು. ರಿಷಭ್ ಪಂತ್ ಸಾರಥ್ಯದ ತಂಡವು ಭಾನುವಾರ ನಡೆದ ಪಂದ್ಯದಲ್ಲಿ 20 ರನ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಇಳಿದ ಡೆಲ್ಲಿ ತಂಡಕ್ಕೆ ಪೃಥ್ವಿ ಶಾ (43; 27ಎ, 4X4, 6X2), ಡೇವಿಡ್‌ ವಾರ್ನರ್ (52; 35ಎ, 4X5, 6X3) ಮತ್ತು ರಿಷಭ್‌ (51; 32ಎ, 4x4, 6x3) ಬಲ ತುಂಬಿದರು. ಹೀಗಾಗಿ, 20 ಓವರ್‌ಗಳಲ್ಲಿ ತಂಡವು ಐದು ವಿಕೆಟ್‌ಗೆ 191 ರನ್‌ ಕಲೆ ಹಾಕಿತು.

ಕಠಿಣ ಸವಾಲನ್ನು ಬೆನ್ನಟ್ಟಿದ ಚೆನ್ನೈ ತಂಡವು 7 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ನಾಯಕ ಋತುರಾಜ್‌ ಗಾಯಕವಾಡ್‌ ಮತ್ತು ರಚಿನ್‌ ರವೀಂದ್ರ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರದಲ್ಲಿ ಅಜಿಂಕ್ಯ ರಹಾನೆ (45), ಡೆರಿಲ್ ಮಿಚೆಲ್ (34) ಮತ್ತು ಕೊನೆಯಲ್ಲಿ ಮಹೇಂದ್ರ ಸಿಂಗ್‌ ಧೋನಿ (ಔಟಾಗದೆ 37) ಹೋರಾಟ ತೋರಿದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ. ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಲಷ್ಟೇ ಶಕ್ತವಾಯಿತು. ಕ್ಯಾಪಿಟಲ್ಸ್‌ ಪರ ಮುಕೇಶ್‌ ಕುಮಾರ್‌ ಮತ್ತು ಖಲೀಲ್‌ ಅಹಮ್ಮದ್‌ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್‌ ಪಡೆದು ಮಿಂಚಿದರು.

ಲಯಕ್ಕೆ ಪಂತ್‌: ಇದಕ್ಕೂ ಮೊದಲು ಡೆಲ್ಲಿ ತಂಡದ ಪೃಥ್ವಿ ಮತ್ತು ವಾರ್ನರ್ ಮೊದಲ ವಿಕೆಟ್ ಜೊತೆಯಾಟದಲ್ಲಿ 93 ರನ್‌ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಹತ್ತನೇ ಓವರ್‌ನಲ್ಲಿ ವಾರ್ನರ್ ವಿಕೆಟ್ ಪಡೆದ ಮುಸ್ತಫಿಜುರ್ ಅವರು ಜೊತೆಯಾಟ ಮುರಿದರು. ಆದರೆ ಕ್ರೀಸ್‌ಗೆ ಬಂದ ರಿಷಭ್ ತಮ್ಮ ಹಳೆಯ ಆಟದ ವೈಭವ ಮೆರೆದರು. 

ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸುಮಾರು 15 ತಿಂಗಳು ಕ್ರಿಕೆಟ್‌ನಿಂದ ದೂರವಿದ್ದ ರಿಷಭ್ ಈ ಟೂರ್ನಿಯ ಮೂಲಕ ಮರಳಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಅವರು ರನ್ ಗಳಿಸಲು ಸ್ವಲ್ಪ ಕಷ್ಟಪಟ್ಟಿದ್ದರು. ಆದರೆ ಈ ಪಂದ್ಯದಲ್ಲಿ 159.38ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಎತ್ತಿದರು. 

ಕೊನೆಯ ಹಂತದ ಓವರ್‌ಗಳಲ್ಲಿ ಒಂದೆಡೆ ವಿಕೆಟ್‌ಗಳು ಪತನವಾಗುತ್ತಿದ್ದರೂ ರಿಷಭ್ ಮಾತ್ರ ದಿಟ್ಟತನದಿಂದ ಬೌಲರ್‌ಗಳನ್ನು ಎದುರಿಸಿದರು. ‌ತಮ್ಮ ನೆಚ್ಚಿನ ರಿವರ್ಸ್ ಸ್ವೀಪ್, ಸ್ಕೂಪ್‌ ಹೊಡೆತಗಳನ್ನು ಪ್ರಯೋಗಿಸಿದರು. 19ನೇ ಓವರ್‌ನಲ್ಲಿ ಪಂತ್ ಅವರನ್ನು ಮಥೀಶ್ ಪಥಿರಾಣ ಔಟ್ ಮಾಡಿದರು. ‌

ಈ ಸೋಲಿನೊಂದಿಗೆ ಚೆನ್ನೈ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದರೆ, ಡೆಲ್ಲು ತಂಡವು 9ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಏರಿದೆ.

ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 191 (ಪೃಥ್ವಿ ಶಾ 43, ಡೇವಿಡ್ ವಾರ್ನರ್ 52, ರಿಷಭ್ ಪಂತ್ 51, ಮಿಚೆಲ್ ಮಾರ್ಷ್ 18; ಮಥೀಶ ಪಥಿರಾಣ 31ಕ್ಕೆ3, ರವೀಂದ್ರ ಜಡೇಜ 43ಕ್ಕೆ1, ಮುಸ್ತಫಿಜುರ್ ರೆಹಮಾನ್ 47ಕ್ಕೆ1) 

ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ    (ಅಜಿಂಕ್ಯ ರಹಾನೆ 45, ಡೆರಿಲ್ ಮಿಚೆಲ್ 34, ಮಹೇಂದ್ರ ಸಿಂಗ್‌ ಧೋನಿ ಔಟಾಗದೆ 37, ರವೀಂದ್ರ ಜಡೇಜ ಔಟಾಗದೆ 21; ಮುಕೇಶ್‌ ಕುಮಾರ್‌ 21ಕ್ಕೆ 3, ಖಲೀಲ್‌ ಅಹಮ್ಮದ್‌ 21ಕ್ಕೆ 2, ಅಕ್ಷರ್‌ ಪಟೇಲ್‌ 20ಕ್ಕೆ 1)

ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 20 ರನ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT