ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL SRH vs DC Highlights: ಹೆಡ್-ಶರ್ಮಾ ಅಬ್ಬರ; 3ನೇ ಸಲ SRH 265+ ರನ್ ಸಾಧನೆ

Published 21 ಏಪ್ರಿಲ್ 2024, 2:57 IST
Last Updated 21 ಏಪ್ರಿಲ್ 2024, 2:57 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 67 ರನ್ ಅಂತರದ ಗೆಲುವು ದಾಖಲಿಸಿದೆ. ಸನ್‌ರೈಸರ್ಸ್ ಒಡ್ಡಿದ 267 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ 19.1 ಓವರ್‌ಗಳಲ್ಲಿ 199 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಸನ್‌ರೈಸರ್ಸ್ 3ನೇ ಬಾರಿ 265ಕ್ಕೂ ಹೆಚ್ಚು ರನ್ ಸಾಧನೆ...

17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರನ್ ಹೊಳೆಯನ್ನೇ ಹರಿಸುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೂರನೇ ಸಲ 265ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ಏಳು ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು. ಇದು ಐಪಿಎಲ್ ಇತಿಹಾಸದಲ್ಲೇ ದಾಖಲಾದ ನಾಲ್ಕನೇ ಗರಿಷ್ಠ ಮೊತ್ತವಾಗಿದೆ. ಇದೇ ಟೂರ್ನಿಯಲ್ಲಿ ಆರ್‌ಸಿಬಿ ವಿರುದ್ಧ ಹೈದರಾಬಾದ್ 287 ರನ್ ಗಳಿಸಿರುವುದು ಐಪಿಎಲ್‌ನಲ್ಲಿ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತ. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ವಿರುದ್ಧವೂ ಹೈದರಾಬಾದ್ 277 ರನ್ ಪೇರಿಸಿತ್ತು.

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಮೊತ್ತ ಸಾಧನೆ:

287/3 ಆರ್‌ಸಿಬಿ ವಿರುದ್ಧ ಹೈದರಾಬಾದ್ (2024)

277/3 ಮುಂಬೈ ವಿರುದ್ಧ ಹೈದರಾಬಾದ್ (2024)

272/7 ಡೆಲ್ಲಿ ವಿರುದ್ಧ ಕೋಲ್ಕತ್ತ (2024)

266/7 ಡೆಲ್ಲಿ ವಿರುದ್ಧ ಹೈದರಾಬಾದ್ (2024)

*ಈ ಬಾರಿಯ ಐಪಿಎಲ್‌ನಲ್ಲೇ ಎಲ್ಲ ನಾಲ್ಕು ಗರಿಷ್ಠ ಮೊತ್ತ ದಾಖಲಾಗಿರುವುದು ಗಮನಾರ್ಹ.

ಪವರ್ ಪ್ಲೇ ದಾಖಲೆ (125/0)

ಪವರ್ ಪ್ಲೇ ಅಂತ್ಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ನಷ್ಟವಿಲ್ಲದೆ 125 ರನ್ ಗಳಿಸಿತು. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಪವರ್-ಪ್ಲೇನಲ್ಲಿ ದಾಖಲಾದ ಗರಿಷ್ಠ ಮೊತ್ತ. 2017ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ ತಂಡ ವಿಕೆಟ್ ನಷ್ಟವಿಲ್ಲದೆ 107 ರನ್ ಗಳಿಸಿತ್ತು. ಇನ್ನು 2017ರ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ಕೆಕೆಆರ್ ವಿಕೆಟ್ ನಷ್ಟವಿಲ್ಲದೆ 105 ರನ್ ಪೇರಿಸಿತ್ತು.

4.6 ಓವರ್‌ಗಳಲ್ಲೇ 100 ರನ್...

ಕೇವಲ 4.6 ಓವರ್‌ಗಳಲ್ಲೇ ಹೈದರಾಬಾದ್ 100 ರನ್‌ಗಳ ಗಡಿ ದಾಟಿತು. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ತಂಡವೊಂದರಿಂದ ದಾಖಲಾದ ವೇಗದ ಶತಕದ ದಾಖಲೆಯಾಗಿದೆ. 2023ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 5.3 ಓವರ್‌ಗಳಲ್ಲಿ 100 ರನ್‌ ಪೇರಿಸಿತ್ತು.

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಅಬ್ಬರ...

ಟ್ರಾವಿಸ್ ಹೆಡ್ ಕೇವಲ 32 ಎಸೆತಗಳಲ್ಲಿ 89 ರನ್ ಗಳಿಸಿ (11 ಬೌಂಡರಿ, 6 ಸಿಕ್ಸರ್) ಅಬ್ಬರಿಸಿದರು. ಅಲ್ಲದೆ ಮೊದಲ ವಿಕೆಟ್‌ಗೆ ಅಭಿಷೇಕ್ ಶರ್ಮಾ ಜೊತೆ 6.2 ಓವರ್‌ಗಳಲ್ಲಿ 131 ರನ್‌ಗಳ ಜೊತೆಯಾಟದಲ್ಲಿ (20.68 ರನ್ ರೇಟ್) ಭಾಗಿಯಾದರು. ಅಭಿಷೇಕ್ 12 ಎಸೆತಗಳಲ್ಲಿ 46 ರನ್ (6 ಸಿಕ್ಸರ್, 2 ಬೌಂಡರಿ) ಗಳಿಸಿ ಮಿಂಚಿದರು.

ಪವರ್ ಪ್ಲೇನಲ್ಲೇ ಟ್ರಾವಿಸ್ ಹೆಡ್ 84 ರನ್ ಗಳಿಸಿದರು. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಪವರ್‌-ಪ್ಲೇನಲ್ಲಿ ಬ್ಯಾಟರ್ ಗಳಿಸಿದ ಎರಡನೇ ಗರಿಷ್ಠ ಮೊತ್ತವಾಗಿದೆ. 2014ರಲ್ಲಿ ಸುರೇಶ್ ರೈನಾ 87 ರನ್ ಗಳಿಸಿರುವುದು ಈವರೆಗಿನ ದಾಖಲಾಗಿದೆ. ಇನ್ನು ಇನ್ನಿಂಗ್ಸ್‌ನ ಮೂರು ಓವರ್‌ಗಳ ಮುುಕ್ತಾಯಕ್ಕೆ ಹೆಡ್ ಅವರು ಅರ್ಧಶತಕದ ಗಡಿಯನ್ನು ದಾಟಿದ್ದರು. 2023ರಲ್ಲಿ ಕೆಕೆಆರ್ ವಿರುದ್ಧ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್‌ನ 2.5 ಓವರ್‌ಗಳಲ್ಲೇ ಅರ್ಧಶತಕ ದಾಟಿದ್ದರು. ಅಂದು ಜೈಸ್ವಾಲ್ ಐಪಿಎಲ್‌ನ ಅತಿ ವೇಗದ ಅರ್ಧಶತಕ (13 ಎಸೆತ) ದಾಖಲಿಸಿದ್ದರು.

16 ಎಸೆತಗಳಲ್ಲಿ ಹೆಡ್ ಅರ್ಧಶತಕ ಪೂರೈಸಿದರು. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ವೇಗದ ಫಿಫ್ಟಿ ಬಾರಿಸಿದ ಸಹ ಆಟಗಾರ ಅಭಿಷೇಕ್ ಶರ್ಮಾ ದಾಖಲೆಯನ್ನು ಸರಿಗಟ್ಟಿದರು.

10 ಓವರ್‌ಗಳಲ್ಲಿ ಗರಿಷ್ಠ ಮೊತ್ತ (158/4)

ಮೊದಲ 10 ಓವರ್‌ಗಳ ಅಂತ್ಯಕ್ಕೆ ಹೈದರಾಬಾದ್ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದು ಐಪಿಎಲ್‌ನ ಇನ್ನಿಂಗ್ಸ್‌ವೊಂದರಲ್ಲಿ ಮೊದಲ 10 ಓವರ್‌ಗಳಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಮೊತ್ತವಾಗಿದೆ. ಇನ್ನು 8.4 ಓವರ್‌ಗಳಲ್ಲೇ ತಂಡದ ಮೊತ್ತ 150ರ ಗಡಿ ತಲುಪಿತು. ಇದು ಕೂಡಾ ಟಿ20 ಕ್ರಿಕೆಟ್‌ನ ದಾಖಲೆಯಾಗಿದೆ.

ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್

ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್

(ಪಿಟಿಐ ಚಿತ್ರ)

22 ಸಿಕ್ಸರ್...

ಡೆಲ್ಲಿ ವಿರುದ್ಧ ಸನ್‌ರೈಸರ್ಸ್ ಬ್ಯಾಟರ್‌ಗಳು ಒಟ್ಟು 22 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆ ಮೂಲಕ ತನ್ನದೇ ದಾಖಲೆಯನ್ನು ಸರಿಗಟ್ಟಿದೆ. ಇದೇ ಸಾಲಿನಲ್ಲೇ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ಸನ್‌ರೈಸರ್ಸ್ ಬ್ಯಾಟರ್‌ಗಳು 22 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಪವರ್ ಪ್ಲೇ ಅವಧಿಯಲ್ಲಿ ಅತಿ ಹೆಚ್ಚು ಬೌಂಡರಿ (24) ಗಳಿಸಿದ ದಾಖಲೆಗೂ ಹೈದರಾಬಾದ್ ಭಾಜನವಾಯಿತು.

ಐಪಿಎಲ್‌ನಲ್ಲಿ 3ನೇ ವೇಗದ ಅರ್ಧಶತಕ...

ಡೆಲ್ಲಿ ಪರ ದಿಟ್ಟ ಹೋರಾಟ ನೀಡಿದ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್‌ 15 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು. ಇದು ಐಪಿಎಲ್‌ನಲ್ಲಿ ದಾಖಲಾದ ಮೂರನೇ ವೇಗದ ಅರ್ಧಶತಕವಾಗಿದೆ. ಮೆಕ್‌ಗುರ್ಕ್‌ ಅವರು ಇತರೆ ಮೂವರು ಆಟಗಾರರೊಂದಿಗೆ ಜಂಟಿಯಾಗಿ ಈ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಶಾಬಾಜ್, ಕುಲದೀಪ್, ನಟರಾಜನ್ ಮಿಂಚು...

ಇದೇ ಪಂದ್ಯದಲ್ಲಿ ಹೈದರಾಬಾದ್ ಪರ ಶಾಬಾಜ್ ಅಹಮದ್ 29 ಎಸೆತಗಳಲ್ಲಿ ಅಜೇಯ 59 ರನ್ (5 ಸಿಕ್ಸರ್, 2 ಬೌಂಡರಿ) ಗಳಿಸಿದರು. ಇನ್ನು ಬೌಲಿಂಗ್‌ನಲ್ಲಿ ಟಿ. ನಟರಾಜನ್ ಕೇವಲ 19 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿದರು. ಡೆಲ್ಲಿ ಪರ ಕುಲದೀಪ್ ಯಾದವ್ 55 ರನ್ ಬಿಟ್ಟುಕೊಟ್ಟರೂ ನಾಲ್ಕು ವಿಕೆಟ್ ಪಡೆದರು.

ಎರಡನೇ ಸ್ಥಾನಕ್ಕೆ ಎಸ್‌ಆರ್‌ಎಚ್ ಲಗ್ಗೆ...

ಈ ಗೆಲುವಿನೊಂದಿಗೆ ಹೈದರಾಬಾದ್‌ ತಂಡವು 10 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಡೆಲ್ಲಿ ತಂಡವು 6ರಿಂದ 7ನೇ ಸ್ಥಾನಕ್ಕೆ ಕುಸಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT