ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 PBKS vs GT: ಶುಭಮನ್ ಗಿಲ್ ಬಳಗಕ್ಕೆ ಪಂಜಾಬ್ ಸವಾಲು

Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಮುಲ್ಲನಪುರ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಎರಡನೇ ಹಂತ ಈಗ ಆರಂಭವಾಗಿದೆ. 

ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನಗಳಲ್ಲಿರುವ ತಂಡಗಳಿಗೆ ಪ್ಲೇಆಫ್‌ ಪ್ರವೇಶಿಸಲು ಕಠಿಣ ಸವಾಲು ಇದೆ. ಅದರಲ್ಲಿ ಕ್ರಮವಾಗಿ ಎಂಟು ಹಾಗೂ ಒಂಬತ್ತನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳೂ ಮುಂದೆ ಆಡುವ ಪ್ರತಿಯೊಂದು ಪಂದ್ಯವನ್ನೂ ಗೆಲ್ಲುವ ಒತ್ತಡದಲ್ಲಿವೆ. 

ಭಾನುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಗುಜರಾತ್ ತಂಡವು ತನ್ನ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋತಿತ್ತು. ಉತ್ತಮ ಬ್ಯಾಟಿಂಗ್ ಪಡೆ ಇದ್ದರೂ ಕೇವಲ 89 ರನ್‌ಗಳ ಮೊತ್ತ ಪೇರಿಸಿತ್ತು.  ಅದರೊಂದಿಗೆ ತಂಡವು ಆಡಿದ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಂತಾಗಿತ್ತು. ಇದೀಗ ಜಯದ ಹಾದಿಗೆ ಮರಳುವ ಛಲದಲ್ಲಿದೆ.

ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡದ ಬ್ಯಾಟರ್‌ಗಳಾದ ವೃದ್ಧಿಮಾನ್ ಸಹಾ, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್ ಹಾಗೂ ಶಾರೂಖ್ ಖಾನ್, ರಾಹುಲ್ ತೆವಾಟಿಯಾ ಹಾಗೂ ಸಾಯಿ ಸುದರ್ಶನ್ ಅವರು ತಮ್ಮ ನೈಜ ಲಯಕ್ಕೆ ಮರಳಬೇಕಿದೆ. ಪಂಜಾಬ್ ತಂಡದ ಬೌಲಿಂಗ್ ಪಡೆಯು ಬಲಿಷ್ಠವಾಗಿದೆ. ಹಂಗಾಮಿ ನಾಯಕ ಸ್ಯಾಮ್ ಕರನ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್ಷಲ್ ಪಟೇಲ್ ಮತ್ತು ಹರಪ್ರೀತ್ ಬ್ರಾರ್ ಅವರು ಕಠಿಣ ಸವಾಲೊಡ್ಡಬಲ್ಲ ಬೌಲರ್‌ಗಳು. 

ಗುಜರಾತ್ ತಂಡದಲ್ಲಿ ರಶೀದ್ ಖಾನ್ ಅವರೊಬ್ಬರೇ ನಿರಂತರವಾಗಿ ಆಲ್‌ರೌಂಡ್ ಆಡುತ್ತಿದ್ದಾರೆ. ಉಳಿದವರಿಂದ ಸ್ಥಿರ ಪ್ರದರ್ಶನ ಮೂಡಿ ಬರುತ್ತಿಲ್ಲ. ಬೌಲರ್‌ಗಳು ಕಳೆದ ಪಂದ್ಯದಲ್ಲಿ ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದರು. ಮೋಹಿತ್ ಶರ್ಮಾ, ಸ್ಪೆನ್ಸರ್ ಜಾನ್ಸನ್, ಉಮೇಶ್ ಯಾದವ್ ಅವರು ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಆದರೆ ಪಂಜಾಬ್ ತಂಡದ ಬ್ಯಾಟಿಂಗ್ ತುಸು ದುರ್ಬಲವಾಗಿದೆ. ಆರಂಭಿಕ ಬ್ಯಾಟರ್‌ಗಳು ಮಿಂಚುತ್ತಿಲ್ಲ. ಗಾಯಗೊಂಡಿರುವ ಶಿಖರ್ ಧವನ್ ಮರಳುವ ಬಗ್ಗೆ ಖಚಿತವಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಆಶುತೋಷ್ ಶರ್ಮಾ ಮತ್ತು ಶಶಾಂಕ್ ಸಿಂಗ್ ಅವರು ಭರವಸೆ ಮೂಡಿಸಿರುವ ಆಟಗಾರರು. ಅವರು ಕಳೆದ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರು. ಆದರೂ ಸತತ ಮೂರು ಪಂದ್ಯಗಳಲ್ಲಿ ಸೋತಿರುವ ತಂಡವು ಜಯದ ಹಾದಿಗೆ ಮರಳಲು ಎಲ್ಲ ವಿಭಾಗಗಳಲ್ಲಿಯೂ ಮಿಂಚಬೇಕಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT