ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಬಹಳಷ್ಟು ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್ ಹಂತವನ್ನು ಪ್ರವೇಶಿಸಲು ಪ್ರಯಾಸಪಟ್ಟಿದೆ. ಅಂಕ ಮತ್ತು ನೆಟ್ ರನ್‌ರೇಟ್ ಏರಿಳಿತಗಳ ಲೆಕ್ಕಾಚಾರದ ಮೇಲೆ ಅವಲಂಬಿತವಾಗಿದ್ದೇ ಹೆಚ್ಚು.
ಆದರೆ ಈ ಬಾರಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಆರ್‌ಸಿಬಿ ತಂಡದ ಪ್ಲೇ ಆಫ್ ಹಾದಿ ಮೇಲ್ನೋಟಕ್ಕೆ ಸರಳವಾಗಿ ಕಾಣುತ್ತಿದೆ. ಅಲ್ಲದೇ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ‘ದುಬಾರಿ’ ಮೌಲ್ಯ ಪಡೆದ ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡಗಳ ಹಣೆಬರಹ ನಿರ್ಧರಿಸುವ ಸ್ಥಾನದಲ್ಲಿ ಈಗ ಬೆಂಗಳೂರು ತಂಡವಿದೆ.
ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಕಾರಣದಿಂದ ಒಂದು ವಾರ ಸ್ಥಗಿತಗೊಂಡಿದ್ದ ಟೂರ್ನಿ ಶನಿವಾರ ಪುನರಾರಂಭವಾಗಲಿದೆ. ಒಟ್ಟು 13 ಲೀಗ್ ಪಂದ್ಯಗಳು ಈ ಸುತ್ತಿನಲ್ಲಿ ನಡೆಯಲಿವೆ. ಈಗಾಗಲೇ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿವೆ. ಉಳಿದ ಏಳು ತಂಡಗಳಲ್ಲಿ ಗುಜರಾತ್ ಟೈಟನ್ಸ್ ಮತ್ತು ಆರ್‌ಸಿಬಿ ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. ಆದರೂ ಪ್ಲೇ ಆಫ್ ಖಚಿತವಾಗಿಲ್ಲ. ಅದರಿಂದಾಗಿಯೇ ಲೀಗ್ ಹಂತದ ಉಳಿದ ಪಂದ್ಯಗಳು ಕುತೂಹಲ ಕೆರಳಿಸಿವೆ.