ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಗುರುವನ್ನೇ ಮೀರಿಸಿದ ಶಿಷ್ಯ; ಧೋನಿಗೆ ₹12 ಕೋಟಿ, ಚಾಹರ್‌ಗೆ ₹14 ಕೋಟಿ!

Last Updated 13 ಫೆಬ್ರುವರಿ 2022, 11:30 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಆಲ್‌ರೌಂಡರ್ ದೀಪಕ್‌ ಚಾಹರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ₹14 ಕೋಟಿ ನೀಡಿ ಖರೀದಿಸಿದೆ.

ದೀಪಕ್ ಚಾಹರ್ ಈ ಆವೃತ್ತಿಯಲ್ಲಿ ಚೆನ್ಯೈ ತಂಡ ಖರೀದಿಸಿದ ದುಬಾರಿ ಆಟಗಾರರೆನಿಸಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸಿಎಸ್‌ಕೆ ತಂಡದ ನಾಯಕ ಎಂ.ಎಸ್.ಧೋನಿ (₹12 ಕೋಟಿ) ಅವರಿಗಿಂತ ದೀಪಕ್ ಚಾಹರ್ ₹2 ಕೋಟಿ ಅಧಿಕ ಮೊತ್ತಕ್ಕೆ ಬಿಕರಿಯಾಗಿರುವುದು ವಿಶೇಷ.

ಈ ಆವೃತ್ತಿಗೆ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸಿಎಸ್‌ಕೆ ತಂಡ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜ, ಋತುರಾಜ್ ಗಾಯಕವಾಡ್ ಮತ್ತು ಮೋಯಿನ್ ಅಲಿ ಅವರನ್ನು ಉಳಿಸಿಕೊಂಡಿತ್ತು. ದೀಪಕ್ ಚಾಹರ್, ಸುರೇಶ್‌ ರೈನಾ, ರಾಬಿನ್ ಉತ್ತಪ್ಪ, ಡ್ವೇನ್ ಬ್ರಾವೋ, ಅಂಬಟಿ ರಾಯುಡು ಅವರನ್ನು ಕೈಬಿಟ್ಟಿತ್ತು.

‘ಚೆನ್ನೈ ತಂಡಕ್ಕೆ ಮರಳಿರುವುದಕ್ಕೆ ನನಗೆ ಸಂತೋಷವಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟ ಮಹಿ ಭಾಯ್ (ಎಂ.ಎಸ್. ಧೋನಿ) ಮತ್ತು ಮ್ಯಾನೇಜ್‌ಮೆಂಟ್‌ಗೆ ಧನ್ಯವಾದಗಳು. ನಾನು ಇನ್ನೊಂದು ತಂಡಕ್ಕಾಗಿ ಆಡುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಾಗಿರಲಿಲ್ಲ. ನಾನು ಸದಾ ಕಾಲ ಚೆನ್ನೈ ಪರ ಮಾತ್ರ ಆಡಲು ಬಯಸುತ್ತೇನೆ’ ಎಂದು ಚಾಹರ್ ಹೇಳಿಕೊಂಡಿರುವ ವಿಡಿಯೊವನ್ನು ಸಿಎಸ್‌ಕೆ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಚಾಹರ್ ಧೋನಿಗಿಂತಲೂ ದುಬಾರಿಯಾದದ್ದು ಹೇಗೆ?

ಚಾಹರ್‌ ಅವರನ್ನು 2011ರಲ್ಲಿ ರಾಜಸ್ಥಾನ್ ರಾಯಲ್ಸ್ ₹10 ಲಕ್ಷಕ್ಕೆ ಖರೀಸಿತ್ತು. ಆದರೆ, ಚಾಹರ್ ಎರಡು ಆವೃತ್ತಿಗಳಲ್ಲಿ ರಾಯಲ್ಸ್‌ ತಂಡ ಆಟಗಾರರಾಗಿದ್ದರೂ ಅವರಿಗೆ ಆಡುವುದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಬಳಿಕ ನಾಲ್ಕು ವರ್ಷಗಳ ಕಾಲ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿದ್ದರು. ಬಳಿಕ ‌2018ರಲ್ಲಿ ಚಾಹರ್‌ಗೆ ₹80 ಲಕ್ಷ ನೀಡಿ ಸಿಎಸ್‌ಕೆ ಖರೀದಿಸಿತ್ತು. ನಾಯಕ ಧೋನಿ ಗಮನ ಸೆಳೆಯುವಲ್ಲಿ ಚಾಹರ್‌ ಯಶಸ್ವಿಯಾಗಿದ್ದರು. ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಚೆನ್ನೈ, ಚಾಹರ್‌ ಅವರನ್ನು ಬಿಟ್ಟುಕೊಟ್ಟಿತ್ತು.

ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಎದುರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್‌ 16ರಂದು ನಡೆದ ಐಪಿಎಲ್ ಪಂದ್ಯದಲ್ಲಿ ಚಾಹರ್ 13 ರನ್‌ ಮಾತ್ರ ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ನಾಲ್ಕು ಓವರ್‌ಗಳಲ್ಲಿ 18 ‘ಡಾಟ್‌ ಬಾಲ್‌’ಗಳು ಬಂದದ್ದು ವಿಶೇಷ. ಚುಟುಕು ಕ್ರಿಕೆಟ್‌ನಲ್ಲಿ ಅಷ್ಟೊಂದು ಎಸೆತಗಳಲ್ಲಿ ಒಂದೂ ರನ್ ಕೊಡದೆ ಬ್ಯಾಟ್ಸ್‌ಮನ್‌ನನ್ನು ನಿಯಂತ್ರಿಸುವುದು ಈ ಕಾಲಘಟ್ಟದಲ್ಲಿ ಅತ್ಯಪರೂಪ.

ಕಳೆದ ಆವೃತ್ತಿಯಲ್ಲಿ ಚೆನ್ನೈ ಪರ ಆಡಿದ್ದ ರಾಬಿನ್ ಉತ್ತಪ್ಪ, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ದೀಪಕ್ ಚಹಾರ್ ಮರಳಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.


ಚೆನ್ನೈ ಉಳಿಸಿಕೊಂಡಿದ್ದ ಆಟಗಾರರು
* ರವೀಂದ್ರ ಜಡೇಜಾ ( ₹16 ಕೋಟಿ )
* ಎಂ.ಎಸ್. ಧೋನಿ (₹12 ಕೋಟಿ)
* ಮೊಯೀನ್ ಅಲಿ (₹8 ಕೋಟಿ)
* ರುತುರಾಜ್ ಗಾಯಕ್ವಾಡ್ (₹6 ಕೋಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT