ಮಂಗಳವಾರ, ನವೆಂಬರ್ 24, 2020
22 °C

IPL-2020: ಕೊನೆಯ 4 ಓವರ್‌ಗಳಲ್ಲಿ 7 ವಿಕೆಟ್ ಪಡೆದ ಕಿಂಗ್ಸ್‌ಗೆ ರೋಚಕ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಕೊನೆಯ ನಾಲ್ಕು ಓವರ್‌ಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ 7 ವಿಕೆಟ್‌ಗಳನ್ನು ಉರುಳಿಸಿದ ಕಿಂಗ್ಸ್ ಇಲವೆನ್‌ ಪಂಜಾಬ್ 12 ರನ್ ಅಂತರದ ರೋಚಕ ಜಯ ಸಾಧಿಸಿತು.

ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್‌ ಪಡೆ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 126 ರನ್ ಗಳಿಸಿತ್ತು.

ಈ ಗುರಿ ಬೆನ್ನತ್ತಿದ ರೈಸರ್ಸ್‌ಗೆ ನಾಯಕ ಡೇವಿಡ್ ವಾರ್ನರ್‌ (35) ಮತ್ತು ಜಾನಿ ಬೈರ್ಸ್ಟ್ರೋವ್‌ (19) ಮೊದಲ ವಿಕೆಟ್‌ ಜೊತೆಯಾಟದಲ್ಲಿ 52 ರನ್‌ ಕಲೆಹಾಕಿದರು. ಸುಲಭ ಗುರಿ ಎದುರು ರೈಸರ್ಸ್‌ ತಂಡ 16ನೇ ಓವರ್‌ಗಳವರೆಗೂ ಸುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ರೈಸರ್ಸ್ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 99 ರನ್‌ ಗಳಿಸಿ ಆಡುತ್ತಿತ್ತು. ಗೆಲ್ಲಲು ಕೇವಲ 28 ರನ್ ಬೇಕಾಗಿತ್ತು. 7 ವಿಕೆಟ್‌ಗಳು ಕೈಯಲ್ಲಿದ್ದವು.

ಆದರೆ, 17ನೇ ಓವರ್‌ನ ಮೊದಲ ಎಸೆತದಲ್ಲಿ ಮನೀಷ್‌ ಪಾಂಡೆ (15) ಔಟಾಗುತ್ತಿದ್ದಂತೆ ಪಂದ್ಯ ತಿರುವು ಪಡೆದುಕೊಂಡಿತು. ನಂತರದ ಓವರ್‌ನಲ್ಲಿ ವಿಜಯ್ ಶಂಕರ್ (26) ವಿಕೆಟ್‌ ಒಪ್ಪಿಸಿದರು. ಜೇಸನ್‌ ಹೋಲ್ಡರ್‌ ಮತ್ತು ಸಂದೀಪ್‌ ಶರ್ಮಾ 19ನೇ ಓವರ್‌ನಲ್ಲಿ ಔಟಾದರೆ, ರಶೀದ್ ಖಾನ್‌, ಪ್ರಿಯಂ ಗರ್ಗ್‌ ಮತ್ತು ಖಲೀಲ್‌ ಅಹಮದ್‌ ಕೊನೆಯ ಓವರ್‌ನಲ್ಲಿ ವಿಕೆಟ್‌ ಕೈ ಚೆಲ್ಲಿದರು.

ಇದರೊಂದಿಗೆ 114 ರನ್‌ ಗಳಿಸಿದ ರೈಸರ್ಸ್‌ ಇನಿಂಗ್ಸ್‌ಗೆ 19.5ನೇ ಓವರ್‌ನಲ್ಲಿ ತೆರೆ ಬಿದ್ದಿತು.

ಈ ಜಯದೊಂದಿಗೆ ಟೂರ್ನಿಯಲ್ಲಿ 5ನೇ ಗೆಲುವು ಸಾಧಿಸಿದ ಕಿಂಗ್ಸ್‌ ಪಡೆ ಪಾಯಿಂಟ್ಸ್‌ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿತು.

ಕಿಂಗ್ಸ್‌ ಪರ ಯುವ ವೇಗಿ ಅರ್ಶದೀಪ್‌ ಸಿಂಗ್‌ ಮತ್ತು ಕ್ರಿಸ್‌ ಜೋರ್ಡನ್‌ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್‌ ಶಮಿ, ಮುರುಗನ್ ಅಶ್ವಿನ್‌ ಮತ್ತು ರವಿ ಬಿಷ್ಣೋಯಿ ಒಂದೊಂದು ವಿಕೆಟ್‌ ಹಂಚಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು